Advertisement

ಹೆಮ್ಮಕ್ಕಳಿಗೆ ಆಪ್ತ “ಯುವ ಸ್ಪಂದನ’

12:02 AM Nov 05, 2019 | Sriram |

ಮಂಗಳೂರು: ಯುವ ಜನತೆಯ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರ-ಮಾರ್ಗದರ್ಶನ ನೀಡಲು ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾದ “ಯುವ ಸ್ಪಂದನ ಕೇಂದ್ರ’ಗಳ ಮೊರೆ ಹೋದವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚು. ಹೆಚ್ಚಿನವರು ಮುಖ್ಯವಾಗಿ ಶೈಕ್ಷಣಿಕ ಮತ್ತು ಇತರ ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

Advertisement

ರಾಜ್ಯಾದ್ಯಂತ ಇದುವರೆಗೆ 12,984 ಮಂದಿ ಯುವ ಸ್ಪಂದನ ಕೇಂದ್ರಕ್ಕೆ ಖುದ್ದಾಗಿ ಬಂದು ಮಾರ್ಗದರ್ಶನ,ಪರಿಹಾರ ಪಡೆದುಕೊಂಡಿದ್ದು, ಆ ಪೈಕಿ ಶೇ.60ರಷ್ಟು ವಿದ್ಯಾರ್ಥಿನಿಯರು. ದ.ಕ. ಜಿಲ್ಲೆಯ 37,006 ಮತ್ತು ಉಡುಪಿಯ 88,371 ಯುವತಿಯರು ಸೇರಿದಂತೆ ರಾಜ್ಯದಲ್ಲಿ ಒಟ್ಟು 45,73,691 ಮಂದಿಯನ್ನು ಯುವ ಸ್ಪಂದನದ ವಿವಿಧ ಕಾರ್ಯಕ್ರಮಗಳು ತಲುಪಿವೆ. ಮಾರ್ಗದರ್ಶನ ಪಡೆದ ವರಲ್ಲಿ ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು ಮುಂಚೂಣಿಯಲ್ಲಿದ್ದಾರೆ. ಅನಂತರದ ಸ್ಥಾನ ವ್ಯಕ್ತಿತ್ವ ವಿಕಸನ, ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ್ದವರದ್ದು ಎನ್ನುತ್ತಾರೆ ಯುವಸ್ಪಂದನ ಸಂಯೋಜಕರು.

ಮಂಗಳೂರಿನಲ್ಲಿ 2015ರ ಫೆಬ್ರವರಿಯಲ್ಲಿ ಈ ಕೇಂದ್ರ ಅನುಷ್ಠಾನಗೊಂಡು ಕಳೆದ ಆಗಸ್ಟ್‌ ವರೆಗೆ 71 ಮಂದಿ ಪರಿಹಾರ ಪಡೆದಿದ್ದಾರೆ. ಉಡುಪಿಯಲ್ಲಿ 2016ರಲ್ಲಿ ಅನುಷ್ಠಾನಗೊಂಡಿದ್ದು, ಆಗಸ್ಟ್‌ವರೆಗೆ 338 ಮಂದಿ ಮಾರ್ಗದರ್ಶನ ಪಡೆದಿದ್ದಾರೆ. ಕೊಡಗಿನಲ್ಲಿ 2016ರ ಆಗಸ್ಟ್‌ನಲ್ಲಿ ಆರಂಭಗೊಂಡಿದ್ದು, 89 ಮಂದಿ ಮಾರ್ಗದರ್ಶನ ಪಡೆದಿದ್ದಾರೆ.

ಸಹಾಯವಾಣಿ ಆರಂಭ
ಯಾರಲ್ಲಿಯೂ ಹೇಳಿಕೊಳ್ಳ ಲಾಗದ, ಅನುಭವಿಸಲೂ ಆಗದ ಸಮಸ್ಯೆ, ತೊಳಲಾಟದಿಂದ ಕುಗ್ಗಿ ಹೋಗುವ ಯುವಜನತೆಗೆ ಯುವ ಸ್ಪಂದನ ಕೇಂದ್ರಗಳು ಆಶಾಕಿರಣ ವಾಗಿವೆ. ಇತ್ತೀಚೆಗೆ ರಾಜ್ಯಕ್ಕೆ ಅನ್ವಯವಾಗುವಂತೆ ಹೆಲ್ಪ್ಲೈನ್‌ 18004251448 ಕೂಡ ಆರಂಭಿಸಲಾಗಿದೆ. ಇದು ಯಾವುದೇ ಜಿಲ್ಲೆಯ ಕೇಂದ್ರಕ್ಕೂ ಸಂಪರ್ಕ ಕಲ್ಪಿಸುತ್ತದೆ.

ಮಾಹಿತಿ ಗೌಪ್ಯ
ಶಿಕ್ಷಣ, ಸಂಬಂಧ, ಆರೋಗ್ಯ, ಜೀವನಶೈಲಿ, ಭಾವನೆ, ಸಂಹವನ, ಲೈಂಗಿಕತೆ ಮೊದಲಾದವುಗಳ ಬಗ್ಗೆ ಉಚಿತ ಮಾರ್ಗದರ್ಶನ ನೀಡಲಾಗುತ್ತದೆ. ಹೆತ್ತವರ ಜತೆಗೂ ಸಮಾಲೋಚನೆ ನಡೆಸಲಾಗುತ್ತದೆ. ಇದು 18ರಿಂದ 35 ವರ್ಷ ವಯೋಮಾನದವರಿಗಾಗಿ ಕಾರ್ಯರೂಪಕ್ಕೆ ತಂದಿರುವ ಯೋಜನೆ. ಹಿರಿಯರೂ ಪರಿಹಾರ ಪಡೆದಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ ಸಹಭಾಗಿತ್ವದಲ್ಲಿ ಕೇಂದ್ರವನ್ನು ನಡೆಸಲಾಗುತ್ತಿದೆ. ಸಮಾಲೋಚಕಿಯರು, ಯುವಪರಿವರ್ತಕರು ಯುವಜನತೆಯ ಆಪ್ತಮಿತ್ರ ರಂತೆ ಕಾರ್ಯನಿರ್ವಹಿ ಸುತ್ತಿದ್ದಾರೆ. ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.

Advertisement

ಬೇಕಿದೆ ವ್ಯವಸ್ಥೆ
ಮಂಗಳೂರಿನಲ್ಲಿ ಸಮಾಲೋಚಕರ ಸ್ಥಾನ ಖಾಲಿಯಾಗಿದ್ದು, ಶೀಘ್ರ ನೇಮಕವಾಗಬೇಕಿದೆ. ಉಡುಪಿಯ ಕೇಂದ್ರವು ಪ್ರಸ್ತುತ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಮಾಲೋಚನೆಗಾಗಿ ಪ್ರತ್ಯೇಕ ಕೊಠಡಿಯ ಆವಶ್ಯಕತೆ ಇದೆ.

ಹೆತ್ತವರು, ಸಂಬಂಧಿಕರು, ಶಿಕ್ಷಕರು, ನೆರೆಹೊರೆಯರಲ್ಲಿ ಹೇಳಲಾಗದ್ದನ್ನು ನಮ್ಮಲ್ಲಿ ಬಂದು ಹೇಳುತ್ತಾರೆ. ವಿವಿಧ ರೀತಿಯ ಪ್ರಕರಣಗಳನ್ನು ನಿಭಾಯಿಸಿ ಮಾರ್ಗ ದರ್ಶನ, ಪರಿಹಾರ ಒದಗಿಸುತ್ತಿದ್ದೇವೆ. ಮಾರ್ಗದರ್ಶನ ಪಡೆಯುವವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು. ಅಗತ್ಯವಿದ್ದರೆ ಮನೋರೋಗ ತಜ್ಞರ ಬಳಿ ತೆರಳಲು ಸಲಹೆ ನೀಡುತ್ತೇವೆ.
– ಶ್ಯಾಮಲಾ,ಸಮಾಲೋಚಕರು,ಯುವ ಸ್ಪಂದನ

ಯುವಜನರಲ್ಲಿ ಹೊಸ ಭರವಸೆ
ಕೆಲವು ವಿದ್ಯಾರ್ಥಿನಿಯರು ಅನೇಕ ಬಾರಿ ನಮ್ಮಲ್ಲಿಯೂ ಕೆಲವು ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಅಂಥ ಸಂದರ್ಭದಲ್ಲಿ ಯುವಸ್ಪಂದನದ ಸಮಾಲೋಚಕರು ಅವರ ನೆರವಿಗೆ ಬಂದಿದ್ದಾರೆ. ಮನೋವೈದ್ಯರ ಬಳಿ ಹೋಗಲು ಹಿಂಜರಿಯುವವರಿಗೂ ಈ ಕೇಂದ್ರ ಉಪಯುಕ್ತ. ಮನೋವೈದ್ಯರನ್ನು ಭೇಟಿಯಾಗುವ, ಚಿಕಿತ್ಸೆ ಪಡೆಯುವ ಆವಶ್ಯಕತೆ ಇದ್ದರೆ ಸಮಾಲೋಚಕರೇ ಸಲಹೆ ನೀಡುತ್ತಾರೆ. ಈ ಕೇಂದ್ರ ಯುವಜನರಲ್ಲಿ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ನೆರವಾಗುತ್ತಿದೆ.
-ಸುಲೋಚನಾ, ಉಪನ್ಯಾಸಕರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next