ಕೊಪ್ಪಳ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿರುವ ಜನಸಂಖ್ಯೆಗೂ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆಗೂ ಭಾರಿ ವ್ಯತ್ಯಾಸವಿದೆ. ಇದು ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಒಂದೇ ಕುಟುಂಬದಲ್ಲಿನ ಸದಸ್ಯರು ಪ್ರತ್ಯೇಕ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅವುಗಳನ್ನು ಪುನಃ ಒಂದೇ ಕುಟುಂಬದಲ್ಲಿ ಸೇರ್ಪಡೆಗೆ ಇಲಾಖೆ ಈಗಾಗಲೇ ತಯಾರಿ ನಡೆಸುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೂ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯಲಿ ಎಂಬ ಉದ್ದೇಶದಿಂದ ಜನರ ಆರ್ಥಿಕತೆ ಅನುಸಾರ ಎಪಿಎಲ್, ಬಿಪಿಎಲ್, ಅಂತ್ಯೋದಯವೆಂದು ಮೂರು ಸ್ಥರದಲ್ಲಿ ಜನತೆಗೆ ಪಡಿತರ ಕಾರ್ಡ್ ವಿತರಣೆ ಮಾಡಿದೆ. ಕಾರ್ಡ್ ಗಳ ಅನುಸಾರ ಪಡಿತರ ಹಂಚಿಕೆ ಮಾಡುತ್ತಿದೆ. ಅದರೊಟ್ಟಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಜಿಲ್ಲೆಯಲ್ಲಿನ ಲಕ್ಷಾಂತರ ಜನರು ಎಪಿಎಲ್ ಪಡಿತರ ಕಾರ್ಡ್‌ಗೆ ನಮ್ಮ ಕುಟುಂಬಕ್ಕೆ ಹಾಗೂ ಸದಸ್ಯರಿಗೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಎಂಬ ಲೆಕ್ಕಾಚಾರ ಹಾಕಿ, ಸರ್ಕಾರಕ್ಕೆ ಹಾಗೂ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಎಪಿಎಲ್ ಕಾರ್ಡ್ ರದ್ದುಪಡಿಸಿ, ಬಿಪಿಎಲ್ ಪಡಿತರ ಕಾರ್ಡ್ ಪಡೆದಿದ್ದಾರೆ.
ಅಚ್ಚರಿಯಂದರೆ, 2011ರ ಜನಗಣತಿ ಪ್ರಕಾರ ಕುಟುಂಬಕ್ಕೆ ಅನುಸಾರ ಕಾರ್ಡ್ ಹಂಚಿಕೆ ಮಾಡಿದೆ. ಆದರೆ ಆಗ 2,59,396 ಕುಟುಂಬಗಳಿದ್ದರೆ, ಈಗ ಬಿಪಿಎಲ್ ಕಾರ್ಡ್ ಪಡೆದವರ ಸಂಖ್ಯೆ 2,91,000 ರಷ್ಟಾಗಾಗಿದೆ. ಅಂದರೆ ಕುಟುಂಬಕ್ಕಿಂತ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆಯೇ ಹೆಚ್ಚಾಗಿದ್ದು ಇಲಾಖೆಗೆ ದೊಡ್ಡ ತಲೆನೋವಾಗಿದೆ.
ಒಂದೇ ಮನೆಯಲ್ಲಿದ್ದು 2-3 ಕಾರ್ಡ್‌ಗಳನ್ನು ಪಡೆದ ಕುಟುಂಬಗಳನ್ನು ಪತ್ತೆ ಮಾಡಲು ಇಲಾಖೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಅಂತಹ ಮನೆಗಳನ್ನು ಸರ್ವೇ ಮಾಡಿಸಿ ಒಂದೇಮನೆಯಲ್ಲಿರುವ ಕುಟುಂಬವನ್ನು ಪರಿಶೀಲನೆ ನಡೆಸಿ, ಬೇರೆ ಬೇರೆ ಕಾರ್ಡ್‌ಗಳನ್ನು ಪಡೆದ ಜನರನ್ನು ಒಂದೇ ಕುಟುಂಬದ ಪಡಿತರ ಕಾರ್ಡ್‌ಗೆ ಸೇರ್ಪಡೆ ಮಾಡುವ ಸಿದ್ಧತೆಗೆ ಮುಂದಾಗಿದೆ. ಅಲ್ಲದೇ ಮಾ. 30ರೊಳಗೆ ಅನಧಿಕೃತ ಬಿಪಿಎಲ್ ಕಾರ್ಡ್ ಪಡೆದ ಕುಟುಂಬಗಳು ಕೂಡಲೇ ಇಲಾಖೆಗೆ ಶರಣಾಗತಿ ಮಾಡಬೇಕು. ಒಂದು ವೇಳೆ ಶರಣಾಗತಿ ಮಾಡದೇ ಇದ್ದರೆ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ, ಅವರ ಕುಟುಂಬದಲ್ಲಿ ಆಸ್ತಿಗಳ ಮೇಲೆ ಭೋಜಾ ಕೂಡಿಸಲೂ ತಯಾರಿ ನಡೆಸುತ್ತಿದೆ.
ಇನ್ನೂ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿರುವುದು ಬೆಳಕಿಗೆ ಬಂದಿದೆ. ಹಲವರು ತಮ್ಮ ಹೆಸರಿನಲ್ಲಿಯೇ ಕಾರ್ಡ್‌ಗಳನ್ನು ಪಡೆದಿದ್ದರೆ, ಇನ್ನೂ ಕೆಲವರು ತಮ್ಮ ಪತ್ನಿ ಹೆಸರಲ್ಲಿ ಇಲ್ಲವೇ ತಮ್ಮ ತಂದೆ-ತಾಯಿ ಹೆಸರಲ್ಲಿನಲ್ಲಿಯೇ ಪತ್ನಿ, ಮಕ್ಕಳನ್ನು ಸೇರ್ಪಡೆ ಮಾಡಿ ಸರ್ಕಾರದ ವಿವಿಧ ಸೌಲಭ್ಯ ಪಡೆಯುತ್ತಿದ್ದಾರೆ. ಹೀಗಾಗಿ ಆಹಾರ ಇಲಾಖೆ ಇಂತಹವರ ಮೇಲೆ ನಿಗಾ ಇರಿಸಿ ಪತ್ತೆಗೆ ಹೊಸದೊಂದು ತಂತ್ರ ಹೆಣೆದಿದ್ದು, ಎಲ್ಲ ಇಲಾಖೆಗಳ ಮೂಲಕ ಸರ್ಕಾರಿ ನೌಕರರು ಇರುವ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಆ ಮಾಹಿತಿಯನ್ನು ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳಿಗೆ ಪರಿಶೀಲನೆ ಮಾಡಲು ಜವಾಬ್ದಾರಿ ನೀಡುತ್ತಿದೆ. ಒಂದು ವೇಳೆ ಸರ್ಕಾರಿ ನೌಕರ ಈ ಹಿಂದೇ ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಆತನು ಪಡೆದ ದಿನದಿಂದ ಇಲ್ಲಿಯವರೆಗೂ ಪಡೆದ ಪಡಿತರದ ಮೊತ್ತವನ್ನು ಆತನ ವೇತನದಲ್ಲಿ ವಸೂಲಾತಿ ಮಾಡುವುದು. ಪ್ರತಿ ತಿಂಗಳು ವೇತನದಲ್ಲಿಯೇ ಕಡಿತ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ವರದಿ ಮಾಡಲು ಸಿದ್ಧತೆ ನಡೆಸಿದೆ.
-ದತ್ತು ಕಮ್ಮಾರ