Advertisement

ಸರ್ಕಾರಿ ಕಚೇರಿಯಲ್ಲಿ ಕೇಳ್ಳೋರಿಲ್ಲ ಗೋಳು

03:56 PM Sep 21, 2018 | |

ಸವಣೂರು: ಸರ್ಕಾರ ಸಾರ್ವಜನಿಕರಿಗೆ ಒಂದೇ ಸೂರಿನಡಿ ನೂರು ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದ ಪಡಸಾಲೆಗೆ ಬರುವ ಸಾರ್ವಜನಿಕರು, ಪ್ರಮಾಣ ಪತ್ರಗಳನ್ನು ಪಡೆಯಲು ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತು ಹೈರಾಣಾಗುವುದು ನಿತ್ಯದ ಕಾಯಕವಾಗಿದೆ.

Advertisement

ಮಧ್ಯಮ ವರ್ಗದವರು, ಬಡವರು, ರೈತರು, ಗ್ರಾಮೀಣ ಪ್ರದೇಶದ ಜನರು ಜಾತಿ-ಆದಾಯ, ವಿಧವಾ ವೇತನ, ಸಂಧ್ಯಾ ಸುರಕ್ಷೆ, ತಹಶೀಲ್ದಾರ್‌ ರಹವಾಸಿ ಸೇರಿದಂತೆ ದಿನನಿತ್ಯ ಒಂದಲ್ಲೊಂದು ಕೆಲಸಕ್ಕಾಗಿ ಪಡಸಾಲೆಗೆ ಬರುತ್ತಾರೆ. ಬೆಳಗ್ಗೆಯಿಂದಲೇ ಪಡಸಾಲೆ ಮುಂದೆ ಸರದಿ ಸಾಲಿನಲ್ಲಿ ನಿಂತುಕೊಳ್ಳುವ ಸಾರ್ವಜನಿಕರಿಗೆ ಸಿಬ್ಬಂದಿಗಳಿಂದ ಇಂಟರ್‌ನೆಟ್‌, ಕಂಪ್ಯೂಟರ್‌, ವಿದ್ಯುತ್‌ ತೊಂದರೆ ಸೇರಿದಂತೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತಿವೆ. ವ್ಯವಸ್ಥೆ ಇನ್ನೂ ಸ್ಪಲ್ಪ ಹೊತ್ತಿಗೆ ಸರಿ ಹೋಗಿ ತಮಗೆ ಪ್ರಮಾಣ ಪತ್ರಗಳು ಸಿಗಬಹುದು ಎಂದು ಕಾಯುವಷ್ಟರಲ್ಲಿ; ಊಟದ ಹೊತ್ತಾಗಿದೆ ಎಂದು ಹೇಳಿ ಸಿಬ್ಬಂದಿಗಳು ಎದ್ದು ಹೋಗುವರು. ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತು ಬೇಸತ್ತ ಜನರು ಅತ್ತ ಊಟಕ್ಕೂ ಹೋಗದೆ ಇತ್ತ ನಿಲ್ಲಲೂ ಆಗದೆ ನಿತ್ರಾಣಗೊಳ್ಳುತ್ತಿದ್ದಾರೆ.

ಸ್ಥಳ ಬಿಟ್ಟು ಕದಲಿದರೆ ಎಲ್ಲಿ ತಮ್ಮ ಸರದಿ ತಪ್ಪಿ ಹೋಗುತ್ತದೆಯೋ ಎನ್ನುವ ಭಯದಿಂದ ತಾವು ತಂದ ದಾಖಲೆಗಳ ಫೈಲ್‌, ಚೀಲಗಳನ್ನೇ ವಾರಸುದಾರರನ್ನಾಗಿ ಸರದಿಯಲ್ಲಿಟ್ಟು ಕಾಯುವಂತಹ ಪರಿಸ್ಥಿತಿ ತಹಶೀಲ್ದಾರ್‌ ಕಚೇರಿಯ ಪಡಸಾಲೆಯಲ್ಲಿ ನಿರ್ಮಾಣವಾಗಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕನಿಷ್ಟ ವ್ಯವಸ್ಥೆಯನ್ನೂ ಕಲ್ಪಿಸದಿರುವುದು ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ತಮ್ಮ ಕೆಲಸ ಕಾರ್ಯಬಿಟ್ಟು ದಿನಪೂರ್ತಿ ಕಾಯ್ದು ಪ್ರಮಾಣ ಪತ್ರ ಪಡೆದ ಕೆಲವೇ ಕೆಲವು ಜನ ಸಾಹಸ ಮಾಡಿದಷ್ಟು ಖುಷಿ ಪಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಅಂದು ಕೆಲಸವಾಗದಿದ್ದರೆ ದಿನವೂ ಹೋಯ್ತಿ, ಹಣವೂ ಹೋಯ್ತು ಎಂದು ಅಧಿಕಾರಿಗಳನ್ನು ಶಪಿಸುತ್ತ ಗ್ರಾಮಕ್ಕೆ ಮರಳಿ ಹೋಗುವ ದೃಶ್ಯ ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ.

ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಗಮನ ಹರಿಸುವ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ವ್ಯವಸ್ಥಿತವಾಗಿ ಕಲ್ಪಿಸುವ ಕಾರ್ಯ ಮಾಡಬೇಕಿದೆ. ಇನ್ನಾದರೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗುವರೆ ಕಾದು ನೋಡಬೇಕಿದೆ. ದಿನಗೂಲಿ ಕೆಲಸಾ ಬಿಟ್ಟ ಇಲ್ಲಿಗ ಬರ್ತಿವ್ರಿ. ಮುಂಜಾನೆಯಿಂದ ಪಾಳೆದಾಗ ನಿಂತ್ರೂ ಬಂದ ಕೆಲಸ ಆಗಲ್ಲರಿ. ಕಂಪ್ಯೂಟರ್‌ ಪ್ರಾಬ್ಲಿಮ್‌ ಇರತೇತಿ, ನೆಟ್‌ ಪ್ರಾಬ್ಲಿಮ್‌ ಇರತೈತಿ. ಎರಡೂ ಸರಿ ಇದ್ದಾಗ ಅರ್ಜಿ ತಗೋಳ್ಳೋರ ಇರಾಂಗಿಲ್ಲ. ಇಷ್ಟ ದಿನದಾಗ ಒಮ್ಮೆಯೂ ಬಂದ ತಕ್ಷಣ ನಮ್ಮ ಕೆಲಸ ಸರಾಗವಾಗಿ ಆಗಿಲ್ಲ. ಮ್ಯಾಗೀನ ಸಾಹೇಬ್ರಿಗಿ ಹೇಳಿ ನಮ್ಮ ಕಷ್ಟಕ್ಕ ಒಂದ ಮುಕ್ತಿ ಕೊಡಸ್ರಿ.
ಹನುಮಂತಪ್ಪ, ರೈತ

Advertisement
Advertisement

Udayavani is now on Telegram. Click here to join our channel and stay updated with the latest news.

Next