ಹಾವೇರಿ: ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ಸಾಧ್ಯವೇ ಇಲ್ಲ. ಪೊಲೀಸರಿಗೆ ಇದರ ಬಗ್ಗೆ ಇಂಚಿಂಚೂ ಗೊತ್ತಿರುತ್ತದೆ. ಆದರೆ ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಇವರು ಬಾಯಿ ಬಂದ್ ಮಾಡಿಕೊಂಡಿರುತ್ತಾರೆ. ಈಗ ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಹಾರಾಡುತ್ತಾರೆ. ಆದರೆ ರಾಜಕಾರಣಿಗಳೇ ಇದರಲ್ಲಿ ಇದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಹಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುತಾಲಿಕ್, ಈಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ದೊಡ್ಡ ಹೀರೋ ಆಗಲು ಹೊರಟಿದ್ದಾರೆ. ನಿಮ್ಮ ಸಹೋದರಿ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆಗಿದ್ದರು. ಆಗ ನೀವೆಲ್ಲಿ ಹೋಗಿದ್ರಿ? ಆಗ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಎನ್ ಸಿಬಿ ತನಿಖೆಯಲ್ಲಿ ಇನ್ನಷ್ಟು ವಿವರ ಬಯಲು: ಸುಶಾಂತ್ ಕೇಸ್ ನಲ್ಲಿ ರಿಯಾ ಡ್ರಗ್ಸ್ ಜಾಲ!
ಈ ಹಿಂದೆಯೂ ನಾವು ಡ್ರಗ್ ಮಾಫಿಯಾದ ಬಗ್ಗೆ ಹೇಳಿದ್ದೆವು. ಈಗ ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಲ್ಲ ಎಮದು ಹೇಳಿದರೆ ನಾನು ತೋರಿಸುತ್ತೇನೆ ಎಂದು ಮುತಾಲಿಕ್ ಸವಾಲು ಹಾಕಿದರು.
ಗೃಹ ಸಚಿವರು ಮತ್ತು ಸಿಟಿ ರವಿ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಹೇಳುತ್ತಾರೆ. ಈಗ ಎಲ್ಲ ನಾಟಕ ಮಾಡುತ್ತಾರೆ. ಸ್ವಲ್ಪ ದಿನದಲ್ಲಿ ಎಲ್ಲ ಮರೆತು ಬಿಡುತ್ತಾರೆ ಎಂದು ಮುತಾಲಿಕ್ ಹೇಳಿದರು.