Advertisement

ಕನ್ನಡ ಭಾಷೆಗೆ ಸವಾಲುಗಳಿವೆ ಹೊರತು ಸಾವಿಲ್ಲ

10:27 AM May 07, 2019 | Suhan S |

ಧಾರವಾಡ: ಹಿಂದಿ, ಸಂಸ್ಕೃತ, ಇಂಗ್ಲಿಷ್‌ ಸೇರಿದಂತೆ ಇತರ ಭಾಷೆಗಳನ್ನು ಅರಗಿಸಿಕೊಳ್ಳುತ್ತ ಸಾಗಿರುವ ಕನ್ನಡ ಭಾಷೆಗೆ ಸವಾಲುಗಳಿವೆ ಹೊರತು ಸಾವಿಲ್ಲ. ಕನ್ನಡಿಗರು ಕನ್ನಡ ಭಾಷೆ ಮಾತನಾಡುವವರೆಗೂ ಕನ್ನಡ ಭಾಷೆಗೆ ಸಾವಿಲ್ಲ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

Advertisement

ನಗರದ ಕವಿವಿಯ ಸುವರ್ಣ ಮಹೋತ್ಸವದ ಉನ್ನತ ಶಿಕ್ಷಣ ಅಕಾಡೆಮಿ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಾಪಕರು ಕನ್ನಡ ಭಾಷೆಯನ್ನು ಕೇವಲ ಶೈಕ್ಷಣಿಕ ವಿಷಯವಾಗಿ ನೋಡದೇ ಕನ್ನಡವನ್ನು ಜೀವನ ವಿಧಾನ, ಸಾಂಸ್ಕೃತಿಕ ವಿನ್ಯಾಸ ಅಲ್ಲದೇ ಒಂದು ಮನೋಧರ್ಮವಾಗಿ ಭಾವಿಸಿಕೊಳ್ಳಬೇಕು. ಅಂದಾಗ ಕನ್ನಡ ಭಾಷೆ ಬೆಳೆಯಲು ಸಾಧ್ಯ. ಜತೆಗೆ ಕನ್ನಡ ವಿಷಯದಲ್ಲಿಯೇ ಎಲ್ಲ ಜ್ಞಾನ ಸಾಧನಗಳು ಬರುವಂತಾಗಬೇಕು. ನೂತನವಾಗಿ ಆಯ್ಕೆಯಾದ ಅಧ್ಯಾಪಕರು ಸಮಾಜ ಬೆಳವಣಿಗೆ ಹಾಗೂ ಕನ್ನಡವನ್ನು ಹೇಗೆ ಬೆಳೆಸಬಹುದು. ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನಗಳ ಕುರಿತು ಚಿಂತನೆ ಮಾಡುವ ಅಗತ್ಯವಿದೆ ಎಂದರು.

ನಮ್ಮ ಧರ್ಮ ಜಾತಿ ನಂಬಿಕೊಳ್ಳ ಬಹುದು. ಆದರೆ, ಅದನ್ನು ಮೀರಿ ಬೆಳೆಯಬೇಕು. ಪಕ್ಷದಲ್ಲಿದ್ದು ಪಕ್ಷವನ್ನು ಮೀರುವವನು ನಿಜವಾದ ರಾಜಕೀಯ ನಾಯಕ. ಧರ್ಮದಲ್ಲಿ ಇದ್ದೂ ಧರ್ಮವನ್ನು ಮೀರಿ ಬೆಳೆಯುವವನು ನಿಜವಾದ ಧಾರ್ಮಿಕ ನಾಯಕ. ಆದರೆ, ಇಂದಿನ ಸಮಾಜದಲ್ಲಿ ನಮ್ಮ ಜಾತಿ, ನಮ್ಮ ಧರ್ಮ ಅಂತಾ ಹೇಳಿಕೊಳ್ಳುತ್ತಿದ್ದೇವೆ. ನಮ್ಮ ಸಿಎಂ ವಿಷಯಕ್ಕೆ ಬಂದರೆ ನೋಡಿ ಅಂತಾ ಈಗಿನ ಕೆಲ ಧರ್ಮಾಧಿಪತಿಗಳೇ ಹೇಳುತ್ತಿದ್ದಾರೆ. ಜತೆಗೆ ಕೆಲ ಧರ್ಮಾಧಿಕಾರಿಗಳೇ ಈಗ ಮುಖ್ಯಮಂತ್ರಿಗಳೂ ಕೂಡ ಆಗಿದ್ದಾರೆ. ಧಾರ್ಮಿಕತೆ ಹೇಳಿದ ಕನ್ನಡದ ಯಾವ ಸಾಹಿತಿಯೂ ಕೂಡ ಖಾವಿ ಧರಿಸಲಿಲ್ಲ. ಧರ್ಮಾಧಿಕಾರಿಗಳು ಹಣದ ಹಣತೆ ಸಂವಾದ ನಡೆಸಬಲ್ಲರು. ಆದರೆ, ನಿಜವಾಗಿಯೂ ದೇವರೊಂದಿಗೆ ಸಂವಾದ ನಡೆಸುವ ಶಕ್ತಿ ಭಕ್ತರಿಗೆ ಮಾತ್ರ ಎಂದರು.

ಇಂದು ಸೃಜನಶೀಲ ಸ್ವಾತಂತ್ರ್ಯದ ಮೇಲೆ ದೊಡ್ಡ ಹಲ್ಲೆಗಳು ಆಗುತ್ತಿವೆ. ಪದ್ಮಾವತ್‌ದಂತಹ ಸಿನಿಮಾಗಳು ಬಂದರೆ ವಿರೋಧಗಳು ಬರುತ್ತಿವೆ. ಈ ಹಿಂದೆಯೂ ಕೂಡ ಹಲ್ಲೆಗಳಾಗಿವೆ. ಆದರೆ, ಅದು ಪ್ರಭುತ್ವದ ಹಿಡಿತದಿಂದ ಆಗುತ್ತಿತ್ತು. ಆದರೆ, ಇಂದುಪ್ರಭುತ್ವದ ಹೆಸರಿನಲ್ಲಿ ಚಿಕ್ಕ ಚಿಕ್ಕ ಗುಂಪುಗಳು ಕಟ್ಟಿಕೊಂಡು ಸೃಜನಶೀಲ ಸ್ವಾತಂತ್ರ್ಯದ ಮೇಲೆ ಹಲ್ಲೆ ಮಾಡುತ್ತಿವೆ. ಅನ್ನದ ಅಗುಳಲ್ಲಿ ಅಣ್ವಸ್ತ್ರ ಕಾಣುವ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ|ಎಸ್‌.ಎಂ. ಶಿವಪ್ರಸಾದ ಮಾತನಾಡಿ, ಶಿಕ್ಷಕರ ಕೂಡ ದೇಶದ ಗಡಿ ಕಾಯುವ ಸೈನಿಕರಿದಂತೆ. ಹೀಗಾಗಿ ಸಮಾಜವನ್ನು ಅದ್ಭುತವಾಗಿ ಕಟ್ಟುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು. ಡಾ|ಎಚ್.ಬಿ.ನೀಲಗುಂದ, ಡಾ| ಈಶ್ವರ ಸಾತಿಹಾಳ ಸೇರಿದಂತೆ ಅಧ್ಯಾಪಕರು ಇದ್ದರು. ಡಾ|ಅರುಂಧತಿ ನಿರೂಪಿಸಿದರು. ಎಚ್.ಎಂ ಹೆಗಡೆ ಪರಿಚಯಿಸಿದರು. ಡಾ|ಎ.ಆರ್‌.ಜಗತಾಪ ವಂದಿಸಿದರು.

ಆಗಿನ ರಾವಣನೇ ಎಷ್ಟೋ ವಾಸಿ:

ರಾವಣನನ್ನು ಅತ್ಯಾಚಾರಿ ಅಂತ ಕರೆದರೆ ಅದು ರಾಮಾಯಣಕ್ಕೆ ಮಾಡುವ ಅಪಮಾನ. ರಾಮಾಯಣದಲ್ಲಿನ ರಾವಣ ಸೀತೆಯನ್ನು ಅಪಹರಣ ಮಾಡುತ್ತಾನೆ ಹೊರತು ಅತ್ಯಾಚಾರ ಮಾಡೋದಿಲ್ಲ. ಆದರೆ, ಇವತ್ತಿನ ರಾವಣರು ಅಪಹರಿಸಿ ಅತ್ಯಾಚಾರ ಮಾಡಿ, ನಂತರ ಕೊಲೆ ಮಾಡಿ ಬಿಸಾಡುತ್ತಿದ್ದಾರೆ. ರಾಮಾಯಣದ ರಾವಣ ಸೀತೆಯನ್ನು ಅಪಹರಿಸಿದ್ದರೂ ಕೂಡ ಅವಳನ್ನು ಮುಟ್ಟಿಲ್ಲ. ಈಗಿನ ರಾವಣರಿಗಿಂತ ರಾಮಾಯಣದ ರಾವಣನೇ ಎಷ್ಟೋ ವಾಸಿ ಎಂದು ಸಾಹಿತಿ ಬರಗೂರದ ರಾಮಚಂದ್ರಪ್ಪ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next