Advertisement

300ರ ಬದಲು ಇರುವುದು 22 ಯಂತ್ರಗಳು !

02:03 AM Oct 23, 2021 | Team Udayavani |

ಉಡುಪಿ: ಕರಾವಳಿಯಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಕಟಾವು ಯಂತ್ರಗಳಿಗೆ ಬೇಡಿಕೆ ಕಂಡುಬರುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಕಟಾವು ಯಂತ್ರಗಳಿದ್ದರೂ ಗದ್ದೆಗಳು ಏಕಕಾಲದಲ್ಲಿ ಕಟಾವಿಗೆ ಬರುವುದರಿಂದ ಯಂತ್ರಗಳ ಕೊರತೆ ಉಂಟಾಗುತ್ತಿದೆ. ಖಾಸಗಿ ಯಂತ್ರಗಳನ್ನು ಅವಲಂಬಿಸಬೇಕಾಗಿದ್ದು, ದುಬಾರಿ ದರ ವಿಧಿಸದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ. ಈ ನಡುವೆ ಆಗಾಗ ಮಳೆಯೂ ಬರುತ್ತಿದ್ದು, ತುರ್ತಾಗಿ ಕಟಾವು ಮುಗಿಸದೆ ಇದ್ದರೆ ನಷ್ಟಕ್ಕೆ ಒಳಗಾಗುವ ಚಿಂತೆಯಲ್ಲಿ ರೈತರಿದ್ದಾರೆ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 47 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೇಸಾಯ ಮಾಡಲಾಗಿದ್ದು, ಬಹುತೇಕ ಕಟಾವು ಹಂತದಲ್ಲಿದೆ.

ಯಂತ್ರದ ಕೊರತೆ
ಕೂಲಿಯಾಳುಗಳ ಸಮಸ್ಯೆಯಿಂದ ಉಭಯ ಜಿಲ್ಲೆಗಳಲ್ಲಿ ಬಹುತೇಕ ಯಂತ್ರದ ಮೂಲಕ ಕಟಾವು ನಡೆಯುತ್ತಿದೆ. ಉಡುಪಿ ಜಿಲ್ಲೆಯ ಕೃಷಿಯಂತ್ರಧಾರೆ ಕೇಂದ್ರದಲ್ಲಿರುವುದು ಕೇವಲ 8 ಯಂತ್ರಗಳು ಮಾತ್ರ. ಒಟ್ಟು 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಕನಿಷ್ಟ 250ರಿಂದ 300ರಷ್ಟು ಯಂತ್ರಗಳ ಆವಶ್ಯಕತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಇಲ್ಲಿ 14 ಕಟಾವು ಯಂತ್ರಗಳಿವೆ. ಗದ್ದೆಗಳು ಏಕಕಾಲದಲ್ಲಿ ಕಟಾವಿಗೆ ಬರುವಾಗ ಸಮಸ್ಯೆ ಎದುರಾಗುತ್ತದೆ.

ಹೆಚ್ಚು ದರ ನೀಡಿದರೂ ಯಂತ್ರವಿಲ್ಲ
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ ಭಾಗಗಳಲ್ಲಿ ಕಟಾವು ಆರಂಭಗೊಂಡಿದೆ. ಕೃಷಿ ಯಂತ್ರಧಾರೆಯ ಯಂತ್ರಗಳು ಅದಾಗಲೇ ಬುಕಿಂಗ್‌ ಆಗಿವೆ. ತಮಿಳುನಾಡು ಭಾಗದಿಂದ ಕಟಾವು ಯಂತ್ರಗಳು ಆಗಮಿಸಿವೆ. ಇವರು ತಾಲೂಕು, ಗ್ರಾಮವಾರು ಬುಕಿಂಗ್‌ ಆಗಿರುವ ಕಟಾವು ಮುಗಿಸಿ ಬೇರೆ ಭಾಗಗಳಿಗೆ ತೆರಳುವುದರಿಂದ ಇನ್ನುಳಿದವರು ಕಾಯಬೇಕಾದ ಸ್ಥಿತಿ ಇದೆ.

ಇದನ್ನೂ ಓದಿ:ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

Advertisement

ಹೊರೆಯಾಗದ ದರಕ್ಕೆ ಸೂಚನೆ
ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕರ್ತಾರ್‌ ಮಾದರಿಯ ಕಂಬೈನ್ಡ್ ಹಾರ್ವೆಸ್ಟರ್‌ನಿಂದ ಕಟಾವಿಗೆ ಜಿಲ್ಲಾ ಸಮಿತಿಯಿಂದ ಪ್ರತೀ ಗಂಟೆಗೆ 1,800 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಖಾಸಗಿ ಕಟಾವು ಯಂತ್ರಗಳ ಮಾಲಕರು ರೈತರ ಹಿತವನ್ನು ಗಮನದಲ್ಲಿರಿಸಿ, ಕೃಷಿ ಯಂತ್ರಧಾರೆ ಕೇಂದ್ರದ ಬಾಡಿಗೆ ದರವನ್ನು ಮಾನದಂಡವಾಗಿಟ್ಟುಕೊಂಡು ರೈತರೊಂದಿಗೆ ಸ್ಥಳೀಯವಾಗಿ ಚರ್ಚಿಸಿ, ನ್ಯಾಯೋಚಿತ ದರ ವಿಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಜಿಲ್ಲಾಡ ಳಿತ ನಿಗದಿಪಡಿಸಿರುವ ದರ 2017ರದು, ಅನಂತರ ಪರಿಷ್ಕರಣೆ ಮಾಡ ಲಾಗಿಲ್ಲ. ಈಗ ಯಂತ್ರೋಪ ಕರಣ ಗಳ ಬಿಡಿಭಾಗ ಗಳು, ಇಂಧನ ವೆಚ್ಚ, ಚಾಲಕನ ಭತ್ತೆ ಹೆಚ್ಚಳ ವಾದ ಪರಿಣಾಮ ಕೆಲವು ಕಂಬೈನ್‌x ಹಾರ್ವೆಸ್ಟರ್‌ಗಳು 2,500 ರೂ.ವರೆಗೂ ದರ ತೆಗೆದುಕೊಳ್ಳುತ್ತಿದ್ದಾರೆ.

ಹೆಚ್ಚುವರಿ
ಯಂತ್ರಕ್ಕೆ ಬೇಡಿಕೆ
ಜಿಲ್ಲೆಯ 2-3 ಪಂಚಾಯತ್‌ಗಳಿಗೆ ತಲಾ 1ರಂತೆ ಕಟಾವು ಯಂತ್ರ ನೀಡಬೇಕೆಂದು ಕೃಷಿ ಇಲಾಖೆ ಮೂಲಕ ಸರಕಾರಕ್ಕೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸರಕಾರ ಕ್ರಮ ತೆಗೆದುಕೊಂಡರೆ ಮತ್ತಷ್ಟು ಯಂತ್ರಗಳು ಯಂತ್ರಧಾರೆಯ ಮೂಲಕ ಕೃಷಿಕರ ಸೇವೆಗೆ ಲಭ್ಯವಾಗಲಿವೆ.

ದ.ಕ. ಜಿಲ್ಲೆಯ 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿದೆ. ಕೃಷಿಯಂತ್ರಧಾರೆ ಕೇಂದ್ರಗಳಲ್ಲಿ 14 ಕಟಾವು ಯಂತ್ರಗಳಿವೆ. ಏಕಕಾಲದಲ್ಲಿ ಕಟಾವಿಗೆ ಬರುವಾಗ ಸಮಸ್ಯೆ ಎದುರಾಗುತ್ತದೆ. ಶಿವಮೊಗ್ಗ, ತಮಿಳುನಾಡು ಭಾಗದಲ್ಲಿ ಕಟಾವು ಮುಗಿದ ಬಳಿಕ ಯಂತ್ರಗಳು ಇಲ್ಲಿಗೆ ಆಗಮಿಸುತ್ತವೆ.
-ಸೀತಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ.

ಉಡುಪಿ ಜಿಲ್ಲೆಯಲ್ಲಿ ಕಟಾವು ಆರಂಭಗೊಂಡಿದೆ. ಹೊರಗಿನಿಂದ ಬರುವ ಯಂತ್ರಗಳ ಸಾಮರ್ಥ್ಯಕ್ಕನು ಗುಣವಾಗಿ ದರ ನಿಗದಿ ಮಾಡಲಾಗುತ್ತಿದೆ. ರೈತರಿಗೆ ಯಾವುದೇ ಹೊರೆಯಾಗದ ದರ ವಿಧಿಸುವಂತೆ ಹಾರ್ವೆಸ್ಟರ್‌ಗಳಿಗೆ ಸೂಚನೆ ನೀಡಲಾಗಿದೆ.
-ಡಾ| ಎಚ್‌. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ

-ಪುನೀತ್‌ ಸಾಲ್ಯಾನ್‌

 

Advertisement

Udayavani is now on Telegram. Click here to join our channel and stay updated with the latest news.

Next