ಉಡುಪಿ: ಜಿಲ್ಲಾಡಳಿತ, ಜಿ.ಪಂ. ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ನ.7ರ ವರೆಗೆ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಆಯೋಜಿಸಲಾದ ಸಸ್ಯ ಸಂತೆ ತೋಟಗಾರಿಕೆ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. 10 ಸಾವಿರಕ್ಕೂ ಅಧಿಕ ಸಸ್ಯಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ. ವಿಶೇಷ ತಳಿಯ ಕಿತ್ತಳೆ, ತೆಂಗು, ನಿಂಬೆ, ಹೂವು ಮತ್ತು ಅಲಂಕಾರಿಕ, ಬಾಳೆ ಗಿಡಗಳು ಇಲ್ಲಿನ ವಿಶೇಷವಾಗಿದೆ.
ಸಸ್ಯ ಸಂತೆಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ನರ್ಸರಿಗಳಿಂದ ತಂದಿರುವ ವಿವಿಧ ಬಗೆಯ ತಳಿಗಳು ಇಲ್ಲಿವೆ. ಅಲ್ಲದೆ ವಿವಿಧ ತೋಟಗಾರಿಕೆ ಬೆಳೆಗಳು, ಬೀಜಗಳು ಲಭ್ಯವಿದೆ. 10 ಮಳಿಗೆಗಳಿದ್ದು, ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ನಾಗರಿಕರು ಸಸ್ಯಗಳ ಖರೀದಿಗೆ ಆಗಮಿಸಿದ್ದರು.
ಶನಿವಾರ ಸಸ್ಯಸಂತೆಗೆ ಚಾಲನೆ ನೀಡಿ ಮಾತನಾಡಿದ ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಅವರು, ರೈತ ಸೇವಾ ಕೇಂದ್ರದ ಆವರಣದಲ್ಲಿ ಈ ಹಿಂದೆ ನಡೆಯುತ್ತಿದ್ದ ಸಾವಯವ ಸಂತೆ ಪುನಾರಂಭಗೊಳ್ಳಬೇಕು. ಇಲ್ಲಿ ನಡೆಯುತ್ತಿದ್ದ ಸಾವಯವ ಸಂತೆಗೆ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ತರಕಾರಿಗಳನ್ನು ಖರೀದಿ ಮಾಡುತ್ತಿದ್ದರು. ಅಭೂತಪೂರ್ವ ಸ್ಪಂದನೆಯಿಂದ ವಿಶೇಷ ಸಾವಯವ ಸಂತೆ ಖ್ಯಾತಿಗಳಿಸಿತ್ತು. ಇದರಿಂದ ಸಾವಯವ ತರಕಾರಿ, ಬೆಳೆ ಬೆಳೆಯುವ ರೈತರಿಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆ ಸಿಗಲಿದೆ. ಜತೆಗೆ ಪ್ರೋತ್ಸಾಹವು ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು. ನಗರಸಭೆ ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರೀಶ್ ಅಂಚನ್, ಗಿರಿಧರ್ ಆಚಾರ್ಯ ಕರಂಬಳ್ಳಿ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ನಿರೂಪಿಸಿದರು.
ಯವ್ಯಾವ ಕಸಿ, ಸಸಿ, ಬೀಜಗಳಿವೆ ? ಪಾಲಾಕ್, ಅಳಸಂಡೆ, ಬೀನ್ಸ್, ಕುಕುಂಬರ್, ಟಮ್ಯಾಟೊ, ಅಮರನಾಥ್, ಮೇಥಿ, ಮಂಗಳೂರು ಕುಕುಂಬರ್, ಬೆಂಡೆ, ಮೆಣಸು, ಬೀಟ್‌ರೂಟ್, ಈರುಳ್ಳಿ, ಹರಿಶಿಣ, ಕೊತ್ತಂಬರಿ, ಕಲ್ಲಂಗಡಿ, ಕ್ಯಾಪ್ಸಿಕಮ್ ಸಹಿತ 33 ಬಗೆಯಲ್ಲಿ ತರಕಾರಿ ಸಸಿ, ಬೀಜಗಳಿವೆ. ಹಣ್ಣಿನಲ್ಲಿ 16ಕ್ಕೂ ಅಧಿಕ ಬಗೆಯಲ್ಲಿದ್ದು, ಪಪ್ಪಾಯ, ಸ್ಟ್ರಾಬೆರ್ರಿ, ಮಾವು, ತೆಂಗು, ಸಪೋಟ, ಹಲಸು, ರಾಮಫಲ, ಸೀತಾಫಲ, ನಿಂಬೆ ಗಿಡಗಳಿವೆ. ಸೂರ್ಯಕಾಂತಿ ಜೆರ್‌ಬೆರಾ, ಜಿನೀಯ ಸಹಿತ 14ಬಗೆಯ ಹೂವಿನ ಗಿಡಗಳಿವೆ. 39ಕ್ಕೂ ಅಧಿಕ ಅಲಂಕಾರಿಕ ಗಿಡಗಳು ಸಸ್ಯ ಸಂತೆಯಲ್ಲಿನ ಆಕರ್ಷಣೆಯಾಗಿದೆ