Advertisement

ತೇರದಾಳ: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ- ಸವದಿ

05:32 PM Jul 01, 2023 | Team Udayavani |

ತೇರದಾಳ: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾದರೆ ಮಾತ್ರ ಇಲ್ಲಿ ಕೆಲಸ ಮಾಡಿ. ಇಲ್ಲವಾದರೆ ಜಾಗ ಖಾಲಿ ಮಾಡಿ ಎಂದು ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಯನ್ನು ಶಾಸಕ ಸಿದ್ದು ಸವದಿ ತರಾಟೆಗೆ ತೆಗೆದುಕೊಂಡರು.

Advertisement

ಪುರಸಭೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನದಿಯಲ್ಲಿ ನೀರು ತೀವ್ರ ಇಳಿಮುಖಗೊಂಡ ಪರಿಣಾಮ ನೀರು ಲಿಪ್ಟ್ ಮಾಡಲು ಸಾಧ್ಯವಾಗಿಲ್ಲ. ಪೈಪ್‌ಗಳಲ್ಲಿನ ಮರಳು ತೆಗೆಯಲು ಹಾಗೂ ಸ್ವತ್ಛತೆಗೊಳಿಸಲು ಯಾರು ಸಿಗದ ಕಾರಣ ವಿಳಂಬವಾಗಿದೆ. ಕೆಲಸ ಪ್ರಾರಂಭಗೊಂಡಿದೆ. ಮೂರು ದಿನಗಳಲ್ಲಿ ಪಟ್ಟಣದಲ್ಲಿ ನೀರು ಸರಬರಾಜು ಆಗಲಿದೆ ಎಂದು ಮುಖ್ಯಾಧಿಕಾರಿ ಮುಲ್ಲಾ ಹೇಳುತ್ತಿದ್ದಂತೆ ಕೆಂಡಾಮಂಡಲಗೊಂಡ ಶಾಸಕ ಸವದಿ, ಈ ವಿಷಯ ನನ್ನ ಗಮನಕ್ಕೆ ಏಕೆ ತಂದಿಲ್ಲ. ಸದಸ್ಯರ ಗಮನಕ್ಕಾದರೂ ತಂದಿದ್ದೀರಾ ಎಂದು ಪ್ರಶ್ನಿಸಿದರು.

ನೀರು ಸರಬರಾಜು ವಿಭಾಗದ ಅಧಿಕಾರಿ ಸದಾಶಿವ ತೆಳಗಿನಮನಿ ಅವರನ್ನು ಬದಲಾಯಿಸಿ. ಅವರಿಂದ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು. ಮೋಟರ್‌ ಪಂಪಸೆಟ್‌ ದುರಸ್ತಿಗೆ ಬಂದರೆ ದುರಸ್ತಿಗೆ ಸದಸ್ಯರು ಹಣ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯರು ಗಮನ ಸೆಳೆದರು.

ಸದಸ್ಯರು ಏಕೆ ಹಣ ನೀಡಬೇಕು. ಅಧಿಕಾರಿಗಳು ನೀವು ಹಣ ಹಾಕಿ ಬಳಿಕ ಬಿಲ್‌ ತಗೆದುಕೊಳ್ಳಿ ಎಂದು ಶಾಸಕ ಸವದಿ ಹೇಳಿದರು.
ಸರಿಯಾಗಿ ಉತಾರ ನೀಡದಿರುವುದಕ್ಕೆ, ಕಸದ ವಾಹನಗಳ ಚಾಲಕರ ವೇತನ ನೀಡದಿರುವುದು ಹಾಗೂ ಪುುರಸಭೆ ಅನುಮತಿ ಪಡೆಯದೆ ಸಾಕಷ್ಟು ಕಟ್ಟಡ ನಡೆಯುತ್ತಿದ್ದರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ಹೇಳುತ್ತಿದ್ದಂತೆ ಕೋಪಗೊಂಡ ಶಾಸಕ ಸಿದ್ದು ಸವದಿ, ಇಂದಿನ ಸಭೆ ಕುರಿತು ಠರಾವು ಮಾಡಿ ಮುಖ್ಯಾಧಿಕಾರಿ ಸೇರಿದಂತೆ ಕೆಲಸ ಮಾಡದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಗೆ ಪತ್ರ ಬರೆಯಲು ಸೂಚಿಸಿದರು.

ಬಳಿಕ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿರುವ ತೆರೆದ ಬಾವಿ ಪರಿಶೀಲಿಸಿದ ಶಾಸಕರು ಕೂಡಲೆ ಬಾವಿ ಸ್ವತ್ಛಗೊಳಿಸಿ ಅಲ್ಲಿನ ನೀರನ್ನೂ ಸಾರ್ವಜನಿಕರಿಗೆ ಪೂರೈಸಲು ಮುಂದಾಗಲು ಸೂಚಿಸಿದರು. ವಿಶೇಷ ತಹಶೀಲ್ದಾರ್‌ ಕಿರಣ ಬೆಳವಿ, ಉಪತಹಶೀಲ್ದಾರ್‌ ಶ್ರೀಕಾಂತ ಮಾಯನ್ನವರ, ಅಭಿಯಂತರ ಎಸ್‌.ಬಿ. ಮಾತಾಳಿ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಕಂದಾಯ ಅಧಿಕಾರಿ ಎಫ್‌.ಬಿ. ಗಿಡ್ಡಿ, ಸಚಿನ ಕೊಡತೆ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಅಲ್ಲಪ್ಪ ಬಾಬಗೊಂಡ, ಸದಾಶಿವ ಹೊಸಮನಿ, ಹಾಫೀಜ್‌ ಮೌಲಾಅಲಿ, ಚಿತ್ರಬಾನುಕೋಟೆ, ಕಾಶಿನಾಥ ರಾಠೊಡ, ಕೇದಾರಿ ಪಾಟೀಲ, ಸಂಗಮೇಶ ಕಾಲತಿಪ್ಪಿ, ಸಂತೋಷ ಅಕ್ಕೆನ್ನವರ, ಕಂದಾಯ ನಿರೀಕ್ಷಕ ಪಿ.ಎಸ್‌. ಮಠಪತಿ ಮತ್ತಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next