Advertisement
ಮೈಸೂರು ಪ್ರಾಂತದಲ್ಲಿ ಪ್ಲೇಗ್ ಹಾವಳಿ ತಾಂಡವ ವಾಡುತ್ತಿದ್ದಾಗ ಇಬ್ಬರಲ್ಲಿ ನಡೆದ ಸಂಭಾಷಣೆ ಹೀಗಿತ್ತು… ಇದು 100 ವರ್ಷಗಳ ಹಿಂದೆ…
“ಭೂಭಾರ ಕಡಿಮೆಯಾಗುವುದಕ್ಕೆ ಯಾವುದಾದ ರೊಂದು ನೆಪ ಬೇಕಲ್ಲ? ನಡೆದಷ್ಟು ದಿವಸ ನಾಣ್ಯ”
“ಅದು ಸರಿ ಅನ್ನು. ಈ ವಿಷಯ ಏಕೆ ಎತ್ತಿದೆ ಎಂದರೆ ಪ್ಲೇಗ್ ಮಾರಿಗೆ ನಾನೂ ನೀನೂ ತುತ್ತಾಗುವುದಕ್ಕೆ ಮೊದಲು ನಮ್ಮ ಜ್ಞಾಪಕಾರ್ಥವಾಗಿ ಏನನ್ನಾದರೂ ಬಿಟ್ಟುಹೋಗಬೇಡವೆ?’
“ನಾವೇ ಹೋಗುವಾಗ ಬಿಟ್ಟು ಹೋಗುವದೇನನ್ನ?’
“ನಿನ್ನ ಪರಿಹಾಸ್ಯ ಹಾಗಿರಲಿ. ದೇವರು ನಿನಗೆ ಸಂಗೀತ ಮತ್ತು ಸಾಹಿತ್ಯ ಈ ಎರಡು ವಿದ್ಯೆಗಳಲ್ಲಿ ಪಾಂಡಿತ್ಯ ದಯಪಾಲಿಸಿದ್ದಾನೆ. ನೀನು ಏಕೆ ನಿನ್ನ ಹೆಸರು ಶಾಶ್ವತ ವಾಗಿ ಉಳಿಯುವಂತೆ ಕೀರ್ತನೆಗಳನ್ನು ರಚಿಸಬಾರದು?’
“ದೊಡ್ಡವರು ಮಾಡಿಟ್ಟು ಹೋಗಿರುವ ಕೀರ್ತನೆ ಗಳನ್ನು ಹಾಡಿ ಜೀರ್ಣಿಸಿಕೊಂಡರೆ ಸಾಕಾಗಿದೆ. ನಾನು ಬೇರೆ ಕೀರ್ತನೆ ಮಾಡಬೇಕೆ ಇನ್ನು?”
“ಹಾಗಲ್ಲ ವಾಸು. ನಿನ್ನಂಥ ತಿಳಿದವನೆ ಹೀಗೆ ಹೇಳಿದರೆ ಹೇಗೆ? ದೊಡ್ಡವರು ಬಿಟ್ಟು ಹೋಗಿರುವ ಆಸ್ತಿಯೇ ಸಾಕು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಯಾವ ನ್ಯಾಯ? ಅದನ್ನು ಊರ್ಜಿತಪಡಿಸಬೇಕಾದದ್ದು ನಿನ್ನಂಥ ವಿದ್ವಾಂಸನ ಕರ್ತವ್ಯ. ಕಲಿತ ವಿದ್ಯೆಯೂ ಸಾರ್ಥಕವಾಗುತ್ತದೆ. ನಿನ್ನ ಹೆಸರೂ ಚಿರಸ್ಥಾಯಿ ಯಾಗುತ್ತದೆ. “ಹೂವಿನ ಜತೆಯಲ್ಲಿ ನಾರಿಗೂ ಸ್ವರ್ಗ’ ಎಂಬಂತೆ ನಿನ್ನ ಕೀರ್ತಿಯೊಂದಿಗೆ ನನ್ನ ಜ್ಞಾಪಕವೂ ಉಳಿದೀತು. ಖಂಡಿತ ನನ್ನ ಮಾತು ನಡೆಸಿಕೊಡಬೇಕು” ಈ ಸಂಭಾಷಣೆ ನಡೆದದ್ದು ಹೆಸರಾಂತ ವಾಗ್ಗೇಯ ಕಾರ ಮೈಸೂರು ವಾಸುದೇವಾಚಾರ್ಯ (28.5.1865 -17.5.1961) ಮತ್ತು ಮೈಸೂರು ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಬಂಧು ಗೋಪಾಲರಾಜೇ ಅರಸು(ಚಾಮರಾಜೇಂದ್ರ ಒಡೆಯರ್ ಅವರ ಅಜ್ಜ) ಅವರ ನಡುವೆ.
Related Articles
Advertisement
ವಾಸುದೇವಾಚಾರ್ಯರಿಂದ ರಾಮಚಂದ್ರನ ಕುರಿತಾಗಿ “ಚಿಂತಯೇಹಂ ಜಾನಕೀಕಾಂತಂ ಸಂತತಂ| ಚಿಂತಿತಾರ್ಥದಾಯಕಮನಿಲಸುತನುತಂ| ಕಾಂತಿ ವಿಜಿತದಿನಪತಿ ದಯಾನ್ವಿತಂ|ಪ||’ ಎಂಬ ಮಾಯಾ ಮಾಳವಗೌಳ ರಾಗ, ರೂಪಕ ತಾಳದಲ್ಲಿ ಮೊದಲ ಕೀರ್ತನೆ ರೂಪತಾಳಿತು. ಅನಂತರ ಕೇಶವಾದಿ ದ್ವಾದಶನಾಮ ಸಂಕೀರ್ತನೆ, ತ್ಯಾಗರಾಜರ ಕುರಿತು ಹೀಗೆ ಹಾಡುಗಾರಿಕೆ ಯೊಂದಿಗೆ ಎಗ್ಗಿಲ್ಲದೆ ಸಂಗೀತ ಸಾಹಿತ್ಯವೂ ನಡೆಯಿತು.
ಹೆಸರಾಂತ ಹಾಡುಗಾರರು ಸಾಕಷ್ಟು ಇದ್ದರೂ, ಅವರೆಲ್ಲರಿಗೂ ಕೀರ್ತನೆಗಳನ್ನು ರಚಿಸಿದವರಿಗೆ ಸಿಗುವ “ವಾಗ್ಗೇಯಕಾರತ್ವ’ ಸಿದ್ಧಿಸಿರಲಿಲ್ಲ. “ಬ್ರೋಚೆವಾರೆವರುರಾ ನನುವಿನ…’, “ರಾರಾ ರಾಜೀವಲೋಚನ ರಾಮಾ…’ ಇವೆರಡು ಕೃತಿಗಳಿಲ್ಲದೆ ಸಂಗೀತ ಕಛೇರಿಗಳು ನಡೆಯದ ಕಾಲವಿತ್ತು. ಈಗಲೂ ಇದೆ. ಅಷ್ಟು ಜನಪ್ರಿಯ ಕೃತಿಗಳು’ ಎಂಬುದನ್ನು ಬೆಟ್ಟು ಮಾಡುತ್ತಾರೆ ಹಿರಿಯ ಸಂಗೀತ ಸಾಧಕ ಉಡುಪಿಯ ಪ್ರೊ| ವೀ. ಅರವಿಂದ ಹೆಬ್ಟಾರ್. ಹೀಗಾಗಿ ಸಂಗೀತ ಕ್ಷೇತ್ರದಲ್ಲಿ ವಾಸುದೇವಾಚಾರ್ಯರ ಹೆಸರು ಚಿರಸ್ಥಾಯಿಯಾಗಿದೆ. ಈ ಪಾಂಡಿತ್ಯವು ಬೀಜರೂಪದಲ್ಲಿದ್ದರೂ ಅದನ್ನು ಗುರುತಿಸಿ ಪ್ರೋತ್ಸಾಹಿಸಿದವರು ಗೋಪಾಲರಾಜೇ ಅರಸು.
ಪ್ಲೇಗ್ ಕಾಲ ಹೋಗಿ ಶತಮಾನದ ಬಳಿಕ ಕೋವಿಡ್ ಹಾವಳಿ ಜಗತ್ತಿನಾದ್ಯಂತ ಹರಡಿ ಆ ವೈರಸ್ ರೂಪಾಂತರದೊಂದಿಗೆ “ಗುರ್’ “ಗುರ್’ ಎನ್ನುತ್ತ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಾಕೃತಿಕ ದಾಳಿ ನಮ್ಮ ಕೈಮೀರಿದ ವಿಷಯ. ಈಗ ಮಾತ್ರವಲ್ಲದೆ ಸಾರ್ವಕಾಲಿಕವಾಗಿ ಮಾಡಬಹುದಾದ ಕೆಲಸವೆಂದರೆ 360 ಡಿಗ್ರಿಯ ಸ್ವಯಂಜಾಗೃತಿ. ಇದಕ್ಕೂ ಮಿಗಿಲಾಗಿ ವಾಸುದೇವಾಚಾರ್ಯ ಮತ್ತು ಗೋಪಾಲರಾಜೇ ಅರಸು ಅವರು ಮಾಡಿದ ಕೆಲಸಗಳನ್ನು ಮಾಡಬೇಕಿದೆ.
ಪ್ರತಿಯೊಬ್ಬರಿಗೂ ದೇವರು ವಿಶಿಷ್ಟ ಶಕ್ತಿಯನ್ನು ಕರುಣಿಸಿದ್ದಾನೆ. ಆ ಶಕ್ತಿಯನ್ನು ಗುರುತಿಸುವುದು ಮತ್ತು ಅದನ್ನು ಸಾರ್ವಜನಿಕ ಉಪಯೋಗಕ್ಕಾಗಿ ಪ್ರವರ್ಧ ಮಾನಗೊಳಿಸುವುದು ಅತ್ಯಗತ್ಯವಾಗಿದೆ. ಪ್ರತಿಯೊಂದು ಕಾಲಘಟ್ಟದ ಸಮಾಜ ಏನಾದರೂ ತುಸು ನೆಮ್ಮದಿ ಯಿಂದಿರಲು ಮುಖ್ಯ ಕಾರಣ ಹಿರಿಯರು ನಿರಂತರ ವಾಗಿ ಪೋಷಿಸಿದ ಸನ್ಮಾರ್ಗಗಳು. ನಾವೀಗ ಏನಾದರೂ ಸುಖ ಅನುಭವಿಸುತ್ತಿದ್ದರೆ ಹಿಂದಿನವರು ಉಳಿಸಿಕೊಟ್ಟ ಕೊಡುಗೆಗಳಿಂದ. ಅದು ಭೌತಿಕ(ವಸ್ತು)ವಾಗಿರ ಬಹುದು, ಅಭೌತಿಕ(ಮೌಲ್ಯ)ವಾಗಿರಲೂಬಹುದು. ಈಗ “ಬಳಸು ಬಿಸಾಡು’ ಎಂಬ ಕೊಳ್ಳುಬಾಕತನ(ಹೊಟ್ಟೆಬಾಕತನ)ದ ಥೀಮ್ (ಧ್ಯೇಯವಾಕ್ಯ) ಮಾತ್ರ ಕಾಣುತ್ತಿದೆ. “ನಾನು ಖುಷಿಯಾಗಿ ಬದುಕಿದರೆ ಸಾಕು’, “ನನ್ನ ನಿವೃತ್ತಿವರೆಗೆ ಸಂಸ್ಥೆ ಇದ್ದರೆ ಸಾಕು’ ಇತ್ಯಾದಿ ಮನೋಧೋರಣೆಗಳು ಧಾರ್ಮಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕಂಡುಬರುತ್ತಿವೆ. “ದೋಚಿ ಓಡಿ ಹೋಗುವ ಕಳ್ಳರಂತೆ’ ಪ್ರಕೃತಿ ಸಂಪತ್ತನ್ನು ಬರಿದುಮಾಡಿ ಜಾಗ ಖಾಲಿ ಮಾಡಲು ಸ್ಪರ್ಧೆ ಏರ್ಪಟ್ಟಂತಿದೆ. ಇದರ ಬದಲು ಮುಂದಿನ ಪೀಳಿಗೆಗಾಗಿ “ಬೆಳೆಸು ಬಳಸು ಉಳಿಸು’ ಎಂಬ ಥೀಮ್ ಅಳವಡಿಸಿಕೊಳ್ಳಬೇಕಾಗಿದೆ.
ವಾಸುದೇವಾಚಾರ್ಯರು ಬಾಲ್ಯದಲ್ಲಿ ಉನ್ನತ ಸಂಗೀತ ಶಿಕ್ಷಣ ಪಡೆಯುವ ಶಿಷ್ಯವೇತನಕ್ಕೆ ಎರಡು ವರ್ಷ ದೊರೆಯ ಸ್ಥಾನಕ್ಕೆ ಅಲೆದಿದ್ದರು. “ಗುರುವಿನ ಗುಲಾಮನಾಗದ ತನಕ ದೊರಕದಣ್ಣ ಮುಕುತಿ’ ಎಂಬಂತೆ, ತಿರುವಯ್ನಾರಿನ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಮನೆಯಲ್ಲಿ ಗುರುಗಳ ಬಟ್ಟೆ ಒಗೆದು, ಹಟ್ಟಿಯ ಕೆಲಸ ಮಾಡಿ ವಿದ್ಯಾರ್ಜನೆ ಮಾಡಿದವರು. ನಮಗೆ ಅಷ್ಟು ಕಷ್ಟ ಸಿಗಲೇ ಇಲ್ಲ. ಮೇಲಾಗಿ ಸೌಲಭ್ಯಗಳು ದೊರಕುತ್ತಿವೆ. ಆದರೆ ಅವುಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದೇವೆಯೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಬಹುತೇಕ “ಶೂನ್ಯ’ ಎಂಬ ಉತ್ತರ ಗೋಚರಿಸದೆ ಇರದು.
“ಮೃತ್ಯು ಎಡತಲೆಯಲ್ಲಿದೆ’ ಎಂದು ಧರ್ಮರಾಯ ಹೇಳಿರುವ ಮಾತೊಂದು ಮಹಾಭಾರತದಲ್ಲಿದೆ. ಮೃತ್ಯು ಎಷ್ಟು ಹೊತ್ತಿಗೂ ಬರಬಹುದು. ಆದ್ದರಿಂದ ಈಗ ನಾವು ಬದುಕಿರುವುದೇ ಪುಣ್ಯ. ಮೃತ್ಯು ದಾಳಿ ಮಾಡುವುದರೊಳಗೇನಾದರೂ ಒಳಿತನ್ನು ಮಾಡಿ ಬಿಟ್ಟು ಹೋಗಬೇಕು. ಪ್ರತಿಯೊಬ್ಬರೂ ಬೆಟ್ಟದಷ್ಟು ಕಾರ್ಯ ಸಾಧನೆ ಮಾಡಬೇಕೆಂದಿಲ್ಲ. ರಾಮಸೇತು ನಿರ್ಮಾಣ ದಲ್ಲಿ ಅಳಿಲು ಕೂಡ ಸೇವೆ ಸಲ್ಲಿಸಿದೆಯಲ್ಲ? ಸಣ್ಣ ಸಣ್ಣ ನಿಸ್ವಾರ್ಥ ಸೇವೆಯೂ “ಹನಿಗೂಡಿ ಹಳ್ಳದಂತೆ’ ಸಮಾಜಕ್ಕೆ ಉಪಯುಕ್ತವೇ ಆಗುತ್ತದೆ, ಕನಿಷ್ಠ ಆಯಾ ಮನೆಯವರಿ ಗಾದರೂ ಉಪಯೋಗ ಆಗುತ್ತದೆ. ಒಂದೊಂದು ಮನೆ ಅಭಿವೃದ್ಧಿಗೊಂಡರೂ ದೇಶ, ಜಗತ್ತು ಅಭಿವೃದ್ಧಿ ಗೊಂಡಂತೆ. ಹೀಗೆ ಮಾಡದಂತೆ ತಡೆಯುವುದು ನಮ್ಮಲ್ಲಿರುವ ದ್ವೇಷ, ಅಸೂಯೆ, ಸಂಕುಚಿತ ಭಾವನೆ, ದುರಾಸೆಯಂತಹ ನೇತ್ಯಾತ್ಮಕ ಚಿಂತನೆಗಳು, ಅವು ನಮ್ಮನ್ನು ಪರಸ್ಪರ ಹೊಡೆದಾಡಿಕೊಂಡೇ ಸಾಯುವಂತೆ ಮಾಡುತ್ತಿವೆ. ಇವುಗಳನ್ನು “ಕುತ್ತಿಗೆಗೆ ಕೈ ಹಾಕಿ ಹೊರದೂಡಿದಂತೆ’ ಎಂಬ ಗಾದೆ ಮಾತಿನ ಪ್ರಕಾರ ಪ್ರಯತ್ನಪೂರ್ವಕವಾಗಿ, ಸ್ವಯಂ ಆಸಕ್ತಿಯಿಂದ ನಮ್ಮ ಮನಸ್ಸಿನಿಂದ ಹೊರದಬ್ಬಿದರೆ ಪ್ರತಿಯೊಬ್ಬರೂ ವಾಸುದೇವಾಚಾರ್ಯರು ಆಗಬಹುದು, ತುರ್ತಾಗಿ ಆಗಲೇಬೇಕಾಗಿದೆ. ಇಲ್ಲವಾದರೆ ಭವಿಷ್ಯ ಕರಾಳವಾಗುತ್ತದೆ.
ಮಟಪಾಡಿ ಕುಮಾರಸ್ವಾಮಿ