Advertisement

Politics: ಆಗ ಅವರು, ಈಗ ಇವರು, ಏನಿದು ಲೆಕ್ಕಾಚಾರ?

11:36 PM Sep 10, 2023 | Team Udayavani |

“ರಾಜಕಾರಣದಲ್ಲಿ ಸದಾಕಾಲ ಒಂದೇ ರೀತಿ ಇರುವುದಿಲ್ಲ. ರಾಜಕಾರಣದ ಚಕ್ರ ಉರುಳುತ್ತಿರುತ್ತದೆ’ ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಹಿಂದೆ ಹಲವು ರೀತಿಯ ರಾಜಕೀಯ ಲೆಕ್ಕಾಚಾರಗಳು ಅಡಗಿದ್ದಂತಿದೆ. ರಾಜಕಾರಣ ನಿಂತ ನೀರಲ್ಲ, ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ- ಮಿತ್ರರೂ ಅಲ್ಲ ಎಂಬ ಸಂದೇಶ ನೀಡಿದಂತಿದೆ.

Advertisement

ಜೆಡಿಎಸ್‌ ನಾಯಕರಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಸಹವಾಸ ಆಗಿರುವುದರಿಂದ ಅವರಿಗೆ “ಸಿಹಿ-ಕಹಿ’ ಎರಡೂ ಅನುಭವವಿದೆ. ಅಧಿಕಾರ ಇದ್ದಾಗ (ಸಮ್ಮಿಶ್ರ ಸರಕಾರ) ಮಿತ್ರರು, ಅಧಿಕಾರ ಕಳೆದುಕೊಂಡಾಗ ಶತ್ರುಗಳು. ಹೀಗಾಗಿ ಕಾಲಬದಲಾದಂತೆ ಪಾತ್ರಗಳು-ಸಂಭಾಷಣೆಗಳು ಬದಲಾಗಿವೆ. ವಿಪಕ್ಷದ ಸಾಲಿನಲ್ಲಿ ಕುಳಿತಿದ್ದಾಗ ಆಡಳಿತ ಪಕ್ಷದ ವಿರುದ್ಧ ಸಂಘಟಿತ ಹೋರಾಟ, ಅದೇ ಆಡಳಿತ ಪಕ್ಷ ವಿಪಕ್ಷದ ಸಾಲಿಗೆ ಬಂದಾಗ ಅವರೊಂದಿಗೆ ಕೈಜೋಡಿಸಿ, ವಿಪಕ್ಷದಿಂದ ಆಡಳಿತ ಪಕ್ಷದ ಸಾಲಿಗೆ ಹೋದ ಪಕ್ಷದ ವಿರುದ್ಧ ಹೋರಾಟ. ಈ ರೀತಿ ಜೆಡಿಎಸ್‌ನ ಪಾತ್ರ ಆಯಾಯ ಸನ್ನಿವೇಶಕ್ಕೆ ತಕ್ಕಂತೆ ಇರುತ್ತದೆ. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯಾವುದೇ ಪಕ್ಷಕ್ಕೆ ಅದು ತಪ್ಪಲ್ಲ, ಅದು ಕೆಲವೊಮ್ಮೆ ಅನಿವಾರ್ಯವೂ ಹೌದು, ಅಗತ್ಯವೂ ಹೌದು.

ಈಗ ಮತ್ತೆ ಜೆಡಿಎಸ್‌ ಅಂತಹದೇ ಸ್ಥಿತಿಗೆ ಬಂದು ನಿಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ಹೋರಾಡಿ ಜಯಸಿಗದೆ ಒಂದು ರೀತಿ ಗಾಯಾಳು ಸೈನಿಕನಂತಿದೆ. ಆದರೂ ಕಣದಿಂದ ಹಿಂದೆ ಸರಿದಿಲ್ಲ. ಮತ್ತೆ ಸಮರಕ್ಕೆ ಸಜ್ಜಾಗುತ್ತಿದೆ. ಸೋತರೂ ಮನೆಯಲ್ಲಿ ಕೂರುವ ಜಾಯಮಾನ ನಮ್ಮದಲ್ಲ ಎಂಬುದನ್ನು ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಲವು ಸಲ ಜನಪರ ಹೋರಾಟಗಳ ಮೂಲಕ ಸಾಬೀತುಪಡಿಸಿದ್ದಾರೆ. ಅದೇ ಹೋರಾಟದ ಕಿಚ್ಚನ್ನು ಪುತ್ರ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಗೂ ಧಾರೆಯೆರೆದಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದ ಮಾರನೇ ದಿನವೇ ಪಕ್ಷದ ಮುಖಂಡರ ಸಭೆ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಮೂಡಿದ್ದ ಅನಿಶ್ಚಿತತೆಗೆ ತೆರೆ ಎಳೆದಿದ್ದಾರೆ. ಆರೋಗ್ಯವನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಈ ಇಳಿವಯಸ್ಸಿನಲ್ಲೂ ದೇವೇಗೌಡರು ಆ ಸಭೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು. ಇದೇ ಜೆಡಿಎಸ್‌ಗಿರುವ ವಿಶೇಷತೆ ಹಾಗೂ ಗಟ್ಟಿತನ.

ಒಂದು ಚುನಾವಣೆ ಮುಗಿದ ಬಳಿಕ ಫ‌ಲಿತಾಂಶ ಏನೇ ಇರಲಿ ಮತ್ತೆ ಚುನಾವಣೆ ಯಾವಾಗ ? ಎಂಬುದನ್ನು ಎದುರು ನೋಡುವುದೇ ಜೆಡಿಎಸ್‌ನ ರಾಜಕೀಯ ತಂತ್ರಗಾರಿಕೆ. ಸದಾ ಪಕ್ಷದ ಶಾಸಕರು, ನಾಯಕರು ಹಾಗೂ ಮುಖಂಡರನ್ನು ಹಿಡಿದಿಟ್ಟುಕೊಂಡು ಪಕ್ಷದ ಕೆಲಸದಲ್ಲಿ ತಲ್ಲೀನರನ್ನಾಗಿ ಮಾಡುತ್ತಲೇ ರಾಜಕೀಯ ಭವಿಷ್ಯದ ಬಗ್ಗೆ ಯೋಚನೆ-ಯೋಜನೆ ರೂಪಿಸುವುದು ಜೆಡಿಎಸ್‌ನ ಲಕ್ಷಣ. ಆ ಕಾರಣದಿಂದಲೇ 2 ದಶಕಗಳು ಕಳೆದರೂ ಜೆಡಿಎಸ್‌ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಆದರೆ ಈಗ ಜೆಡಿಎಸ್‌ನ ಸ್ಥಿತಿ ವಿಭಿನ್ನವಾಗಿದೆ. ದೇವೇಗೌಡರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪಕ್ಷದ ಕ್ಯಾಪ್ಟನ್‌ನಂತಿರುವ ಕುಮಾರಣ್ಣಗೆ ಪದೇಪದೆ ಆರೋಗ್ಯ ಕೈಕೊಡುತ್ತಿದೆ. ಆದರೂ ಛಲದಂಕ ಮಲ್ಲನಂತೆ ಪುಟಿದೇಳುವ ವಿಶ್ವಾಸ ಅವರಲ್ಲಿದೆ. ಹೀಗಾಗಿಯೇ ಅವರು ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದಾರೆ.

ಏಕಾಂಗಿಗಿಂತ ಜಂಟಿ ಹೋರಾಟಕ್ಕೆ ಸಂಕಲ್ಪ: ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಜತೆ ಮೈತ್ರಿ ಸರಕಾರದಲ್ಲಿದ್ದ ಜೆಡಿಎಸ್‌ ಆಗ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್‌ ಜತೆ ಸೀಟು ಹೊಂದಾಣಿಕೆ ಮಾಡಿಕೊಂಡು ಕೈ ಸುಟ್ಟು ಅನುಭವವಾಯಿತು. ಜೆಡಿಎಸ್‌ಗೆ ಅದೊಂದು ರೀತಿ “ಮಿತ್ರ ದ್ರೋಹ’ದ ಅನುಭವ. ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿದ್ದರೂ ಮಂಡ್ಯದಲ್ಲಿ ಪುತ್ರ ನಿಖೀಲ್‌, ತುಮಕೂರಿನಲ್ಲಿ ತಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸೋಲು ನೋಡಬೇಕಾಯಿತು. ಜೆಡಿಎಸ್‌ 7 ಕಡೆ ಸ್ಪರ್ಧಿಸಿದ್ದರೂ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹೊರತುಪಡಿಸಿ ಉಳಿದವರು ಗೆಲ್ಲಲಿಲ್ಲ. ಆ ಚುನಾವಣೆಯಲ್ಲಿ ಮಿತ್ರಪಕ್ಷಗಳು (ಕಾಂಗ್ರೆಸ್‌-ಜೆಡಿಎಸ್‌) ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಿಜೆಪಿ ದಾಖಲೆ 25 ಕ್ಷೇತ್ರ ಗೆದ್ದಿತು. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಭೇರಿ ಬಾರಿಸಿದರು. ಈಗ ಮತ್ತೆ ಏಳೆಂಟು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಆದರೆ ಈಗ ಜೆಡಿಎಸ್‌ಗೆ ಕಾಂಗ್ರೆಸ್‌ ಪ್ರಮುಖ ಎದುರಾಳಿ. ಆಗ ವಿಪಕ್ಷದಲ್ಲಿದ್ದ ಬಿಜೆಪಿ ಈಗ ಜೆಡಿಎಸ್‌ಗೆ ಮಿತ್ರಪಕ್ಷವಾಗುವ ಸಾಧ್ಯತೆಗಳಿವೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫ‌ಲಿತಾಂಶದಿಂದ ಕಂಗೆಟ್ಟಿರುವ ಜೆಡಿಎಸ್‌ಗೆ ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಬಿಜೆಪಿ ಜತೆ ಕೈಜೋಡಿಸುವುದು ಅನಿವಾರ್ಯವಾಗಿದೆ. ಅದೇ ರೀತಿ ಬಿಜೆಪಿಗೂ ಮೈತ್ರಿ ಸದ್ಯಕ್ಕೆ ಅನಿವಾರ್ಯ. ಲೋಕಸಭಾ ಚುನಾವಣೆಗೆ ಈ ಎರಡೂ ಪಕ್ಷಗಳು ಸೀಟು ಹೊಂದಾಣಿಕೆ ಮಾಡಿಕೊಂಡು ಜಂಟಿಯಾಗಿ ಕಣಕ್ಕಿಳಿಯುವ ಬಗ್ಗೆ ಆರಂಭಿಕ ಚರ್ಚೆಗಳು ನಡೆದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಉಭಯ ಪಕ್ಷಗಳ ಕಡೆಯಿಂದ ಸಕಾರಾತ್ಮಕ ಹೇಳಿಕೆಗಳು ಹೊರಬಂದಿವೆ.ಆದರೆ ಕಾಂಗ್ರೆಸ್‌ ಮಾತ್ರ ಈ ಸಂಭವನೀಯ ಮೈತ್ರಿಯಿಂದ ಏನೂ ಆಗುವುದಿಲ್ಲವೆಂಬ ನಿರ್ಲಿಪ್ತ ಭಾವನೆ ತಳೆದಂತೆ ಕಾಣುತ್ತಿದೆ. ಒಂದು ವೇಳೆ ಈ ಪಕ್ಷಗಳು ಒಟ್ಟಾಗಿ ಚುನಾವಣೆಗೆ ಹೊರಟರೆ ಜೆಡಿಎಸ್‌ನ ಜಾತ್ಯತೀತತೆಯ ಬದ್ಧತೆಯನ್ನು ಕಾಂಗ್ರೆಸ್‌ ಪ್ರಶ್ನಿಸಬಹುದು. ಆದರೆ ವಾಸ್ತವವಾಗಿ ಯಾವ ಪಕ್ಷವೂ ಸೈದ್ಧಾಂತಿಕ ನೆಲೆಯಲ್ಲಿ ನಿಂತಿಲ್ಲ ಎಂಬುದು ಕಟುಸತ್ಯ.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್‌, ಪ್ರಧಾನಿ ಕುರ್ಚಿಯಿಂದ ಕೆಳಗಿಳಿಸಿದ್ದು ಬಿಜೆಪಿ, ಅದೇ ರೀತಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್‌, 2ನೇ ಸಲ ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ದು ಬಿಜೆಪಿ. ಹೀಗೆ ಜೆಡಿಎಸ್‌ಗೆ ಬಿಜೆಪಿಯಿಂದಲೇ ಹೆಚ್ಚು ರಾಜಕೀಯ ಹೊಡೆತಗಳು ಬಿದ್ದಿವೆ. ರಾಜ್ಯದ 224 ಕ್ಷೇತ್ರದಲ್ಲೂ ಕಾಂಗ್ರೆಸ್‌ ತನ್ನದೇ ನೆಲೆ ಹೊಂದಿದ್ದರೆ, ಜೆಡಿಎಸ್‌ ಪ್ರಾಬಲ್ಯ ಕೇವಲ ಹಳೆ ಮೈಸೂರು ಅಂದರೆ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಸೀಮಿತ. ಅದೇ ರೀತಿ ಬಿಜೆಪಿ ಕರಾವಳಿ, ಕಲ್ಯಾಣ ಕರ್ನಾಟಕ, ಮುಂಬಯಿ ಕರ್ನಾಟಕದ ಜತೆಗೆ ಬೆಂಗಳೂರಿನಲ್ಲೂ ತನ್ನ ನೆಲೆ ಹೊಂದಿದೆ. ಕರಾವಳಿ ಭಾಗದಲ್ಲಿ ಜೆಡಿಎಸ್‌ ನೆಲೆ ಶೂನ್ಯ.

ಆದರೆ ರಾಜ್ಯ ಬಿಜೆಪಿಯದು ಸದ್ಯಕ್ಕೆ ದಯನೀಯ ಸ್ಥಿತಿ. ಉಭಯ ಸದನಗಳಲ್ಲಿ ವಿಪಕ್ಷ ನಾಯಕರು, ಸಚೇತಕರು ಇಲ್ಲ. ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರವಿಲ್ಲ. ಬಿಜೆಪಿ ಒಂದು ರೀತಿ ಒಡೆದ ಮನೆಯಾಗಿದೆ. ಜೆಡಿಎಸ್‌ನ ಆಂತರಿಕ ವಿಷಯಗಳು ಸಹ ಬಿಜೆಪಿಯಂತೆ ಒಡೆದ ಮನೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ಗೆ ನಷ್ಟಕ್ಕಿಂತ ಲಾಭ ತರಲಿದೆ ಎಂಬುದು ಕಾಂಗ್ರೆಸ್‌ನ ವಿಶ್ವಾಸ.

ಆದರೆ ವಿಧಾನಸಭಾ ಚುನಾವಣೆ ಸ್ಥಳೀಯ ನಾಯಕತ್ವ- ಸ್ಥಳೀಯ ವಿಷಯಗಳ ಆಧಾರದ ಮೇಲೆ ನಡೆದರೆ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ನಾಯಕತ್ವ,  ರಾಷ್ಟೀಯ ವಿಷಯಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಾಗಲಿ ಬೀಗುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಮನಾದ ನಾಯಕ ಐಎನ್‌ಡಿಐಎ ಒಕ್ಕೂಟದಲ್ಲಿ ಯಾರೂ ಇಲ್ಲ. ಹೀಗಾಗಿ ಲೋಕಸಭಾ ಚುನಾವಣೆ ವಿಷಯದಲ್ಲಿ ಮೋದಿ ಕಡೆ ಜನ ಒಲವು ತೋರುವ ಸಾಧ್ಯತೆಗಳಿರುವುದರಿಂದ ಮೈತ್ರಿಗೆ ಲಾಭ ಆಗಬಹುದು ಎಂಬ ಲೆಕ್ಕಾಚಾರಗಳಿವೆ.

ಸದ್ಯ ಸೀಟು ಹಂಚಿಕೆ ವಿಷಯದಲ್ಲಿ ನಡೆದಿರುವ ಆರಂಭಿಕ ಮಾತುಕತೆಯಲ್ಲಿ ಜೆಡಿಎಸ್‌ 6 ಕ್ಷೇತ್ರಗಳಿಗೆ ಅಂದರೆ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಅಂತಿಮವಾಗಿ ಒಂದೆರಡು ಹೆಚ್ಚುಕಡಿಮೆ ಆಗಬಹುದು. ಮಾಜಿ ಪ್ರಧಾನಿ ದೇವೇಗೌಡರು ಕಳೆದ ಸಲ ಸೋತಿದ್ದ ತುಮಕೂರಿನಿಂದಲೇ ಕಣಕ್ಕಿಳಿದರೆ ಈ ಸಲ ಅವರದು ಕೊನೆ ಚುನಾವಣೆ. ಹೀಗಾಗಿ ಅನುಕಂಪದ ಜತೆಗೆ ಬಿಜೆಪಿ ಮತಗಳು ಸೇರಿದಂತೆ ಗೆಲುವು ಸಾಧ್ಯತೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಟಾರ್ಗೆಟ್‌-20 ಇಟ್ಟುಕೊಂಡಿದ್ದರೆ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟ ಸಹ ಟಾರ್ಗೆಟ್‌-20 ಇಟ್ಟುಕೊಂಡಂತಿದೆ. ಒಟ್ಟಾರೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕೆಂದು ಸಂಕಲ್ಪ ತೊಟ್ಟಿರುವ ಬಿಜೆಪಿ-ಜೆಡಿಎಸ್‌ ಪರಸ್ಪರ ಕೈಜೋಡಿಸುವುದು ನಿಶ್ಚಿತವಾಗಿದೆ.

ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next