ತೆಕ್ಕಟ್ಟೆ : ಬೇಳೂರು ಗ್ರಾಮ ಪಂಚಾಯತ್ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಸೆ.29ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಶೀಲ ಶೆಟ್ಟಿ ಗುಳ್ಳಾಡಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಅಕ್ರಮ ಮರಳುಗಾರಿಕೆ ವಿರುದ್ದ ಗ್ರಾಮಸ್ಥರ ವಿರೋಧ
ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದಲೂ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಗ್ರಾಮಸಭೆಯ ಆರಂಭವಾಗುತ್ತಿದ್ದಂತೆಯೇ ಅಕ್ರಮ ಮರಳುಗಾರಿಕೆಯ ವಿರುದ್ದ ತೀವ್ರ ತೆರನಾದ ವಿರೋಧ ವ್ಯಕ್ತಪಡಿಸಿ, ಗ್ರಾಮಸ್ಥರು ವೇದಿಕೆಯೆಡೆಗೆ ಆಗಮಿಸಿ, ಪ್ರತಿಭಟಿಸಿ ಗ್ರಾಮಕ್ಕೆ ಉಪಯೋಗವಿಲ್ಲದೆ ಈ ಮರಳುಗಾರಿಕೆಯನ್ನು ನಿಷೇಧಿಸುವಂತೆ ಬಿಗಿ ಪಟ್ಟು ಹಿಡಿಯುತ್ತಿದ್ದಂತೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಾಮಕಿ ಕೂಡಾ ನಡೆಯಿತು.
ಮರಳುಗಾರಿಕಾ ನಿಷೇಧದ ಬಗ್ಗೆ ಗ್ರಾಮಸಭೆಯಲ್ಲಿ ತತ್‌ಕ್ಷಣವೇ ಮಹತ್ವದ ನಿರ್ಣಯ ಕೈಗೊಳ್ಳಿ ಇಲ್ಲದಿದ್ದಲ್ಲಿ ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯರಾದ ನ್ಯಾಯವಾದಿ ಅವಿನಾಶ್ ಶೆಟ್ಟಿ ಬೇಳೂರು ,ದಯಾನಂದ ಕೊಠಾರಿ , ದಿನೇಶ್ ಶೆಟ್ಟಿ ಚಾವಡಿಮನೆ, ವಿನಯ ಶೆಟ್ಟಿ , ಅನಿಲ್ ಶೆಟ್ಟಿ, ಮಧುಕರ ಶೆಟ್ಟಿ, ರವಿಕುಮಾರ್ ಶೆಟ್ಟಿ , ಸದಾಶಿವ ಶೆಟ್ಟಿ, ಪ್ರಶಾಂತ್ ದೇಲಟ್ಟು, ಸುಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಜಾತ ಶೆಟ್ಟಿ ದೇಲಟ್ಟು, ನಂದಿನಿ ಶೆಟ್ಟಿ ಅವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ನೊಡೆಲ್ ಅಧಿಕಾರಿ ರವೀಂದ್ರ ಆಚಾರ್ಯ ಅವರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಗಣಿ ಇಲಾಖೆಯಿಂದ ಮುಂದಿನ ಆದೇಶ ಬರುವವರೆಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಮರಳುಗಾರಿಕೆ ನಡೆಸುವಂತಿಲ್ಲ ಎಂದು ನಿರ್ಣಯಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಮಹತ್ವದ ಆದೇಶ ಹೊರಡಿಸಿದ ಘಟನೆ ಕೂಡಾ ನಡೆಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಉಷಾ ಕೊಠಾರಿ, ಗ್ರಾ.ಪಂ. ಸದಸ್ಯರಾದ ಕರುಣಾಕರ ಶೆಟ್ಟಿ, ದೇವಕಿ ವಿ.ಶೆಟ್ಟಿ, ಕರುಣಾಕರ ಶೆಟ್ಟಿ ಎಂ., ರಾಣಿ ಆರ್.ಶೆಟ್ಟಿ, ರಾಘವೇಂದ್ರ ಮರಕಾಲ, ಮುಕ್ತಾ, ನಿರ್ಮಲ ಹಾಗು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಜಯಂತ್ ಸ್ವಾಗತಿಸಿ, ವೀಣಾ ವರದಿ ವಾಚಿಸಿ, ಗ್ರಾ.ಪಂ. ಸಿಬಂದಿ ಮನೀಶ್‌ಶೆಟ್ಟಿ , ಸುರೇಖಾ, ವೀರೇಂದ್ರ ಸಹಕರಿಸಿ, ವಂದಿಸಿದರು.