Advertisement

Thekkatte: ಇಂದಿನಿಂದ ಹೆದ್ದಾರಿ ಬದಿಯ ಅನಧಿಕೃತ ಒತ್ತುವರಿ ತೆರವು

01:30 PM Sep 23, 2024 | Team Udayavani |

ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್‌ ರಾ.ಹೆ.66 ಚತುಷ್ಪಥ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್‌ ರಸ್ತೆ ನಿರ್ಮಿಸುವ ನಿಟ್ಟಿನಿಂದ ಈಗಾಗಲೇ ಸಹಾಯಕ ಆಯುಕ್ತರ ಸರ್ವೆಯರ್‌ ಸಹಾಯದಿಂದ ಸರ್ವೇ ನಡೆಸಿ, ಉಡುಪಿ ಜಿಲ್ಲೆಯ ಕೋಟೇಶ್ವರ ಕುಂಭಾಶಿ, ತೆಕ್ಕಟ್ಟೆ, ಸಾಲಿಗ್ರಾಮ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಗುರುತಿಸಲಾಗಿದೆ. ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ತೆರವುಗೊಳಿಸಲು ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶದಂತೆ ಸಂಬಂಧಪಟ್ಟ ಜಾಗದ ಮಾಲಕರಿಗೆ ನೋಟಿಸ್‌ ನೀಡಲಾಗಿದ್ದು, ಸೆ.23ರಿಂದ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿದೆ.
ಉಡುಪಿ ಜಿಲ್ಲೆಯಲ್ಲಿ ಸರ್ವಿಸ್‌ ರಸ್ತೆ, ವಿಒಪಿ ಮತ್ತು ಫುಟ್‌ ಓವರ್‌ ಬ್ರಿಡ್ಜ್ ನಿರ್ಮಿಸುವ ಮೂಲಕ ಎನ್‌ಎಚ್‌ ಎಐ ಬ್ಲಾಕ್‌ ಸ್ಪಾಟ್‌ ಕಾಮಗಾರಿಯನ್ನು ಸರಿಪಡಿಸುವ ನಿಟ್ಟಿನಿಂದ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮತ್ತು ಕುಂದಾಪುರ ಸಹಾಯಕ ಆಯುಕ್ತರಿಗೆ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ರಕ್ಷಣೆಯನ್ನು ಒದಗಿಸುವಂತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್‌ ಅಬ್ದುಲ್ಲಾ ಜಾವೇದ್‌ ಅವರು ಸೆ.18ರಂದು ಮನವಿ ಸಲ್ಲಿಸಿದ್ದಾರೆ.

Advertisement

ಸಂಸದ ಕೋಟ ಅವರಿಗೆ ಮನವಿ ಸುಪ್ರೀಂ ಕೋರ್ಟ್‌ ಆದೇಶದಂತೆ ರಾ.ಹೆ.66 ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಜಾಗದ ಮಾಲಕರಿಗೆ ನೋಟಿಸ್‌ ಜಾರಿಗೊಳಿಸಿ ಸೆ.23ರಿಂದ ತೆರವು ಕಾರ್ಯಾಚರಣೆಗೆ ಪ್ರಾಧಿಕಾರ ಸನ್ನದ್ಧವಾದ ಹಿನ್ನೆಲೆಯಲ್ಲಿ ತೆಕ್ಕಟ್ಟೆ ಪ್ರಮುಖ ಭಾಗದಲ್ಲಿರುವ ಜಾಗ ಮಾಲಕರು ಹಾಗೂ ಅಂಗಡಿ ಮಾಲಕರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸೆ.22ರಂದು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ವ್ಯಾಪಾರ ವ್ಯವಹಾರಗಳನ್ನು ಮಾಡಿ ಬದುಕು ಕಟ್ಟಿಕೊಂಡಿದ್ದ ನಮ್ಮಂತಹ ಅಂಗಡಿ ಮಾಲಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ, ಸರ್ವಿಸ್‌ ರಸ್ತೆ ನಿರ್ಮಿಸುವ ಬಗ್ಗೆ ನಮ್ಮ ಸಹಮತವಿದೆ ಎಂದು ಅಂಗಡಿ ಮಾಲಕರು ಆಗ್ರಹಿಸಿದ್ದಾರೆ.

ಉದಯವಾಣಿಯಲ್ಲಿ ವರದಿ
ಕುಂದಾಪುರ – ಸುರತ್ಕಲ್‌ ರಾ.ಹೆ.66 ಚತುಷ್ಪಥ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣವಾಗದೇ ವಾಹನಗಳು ವಿರುದ್ಧ ದಿಕ್ಕಿನಿಂದ ಸಂಚರಿಸುತ್ತಿದೆ. ಇದರ ಪರಿಣಾಮ ಸ್ಥಳೀಯ ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯದ ಕುರಿತು ಉದಯವಾಣಿ ಜನಪರ ಕಾಳಜಿವಹಿಸಿ ಹಲವು ಬಾರಿ ವಿಸ್ತೃತವಾದ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿತ್ತು.

ತೀವ್ರ ತೊಂದರೆ
ರಾ.ಹೆ.66 ಚತುಷ್ಪಥ ಕಾಮಗಾರಿ ನಡೆದು ದಶಕಗಳೇ ಕಳೆದರೂ ಗ್ರಾಮಸ್ಥರ ಸುರಕ್ಷತೆ ದೃಷ್ಟಿಯಿಂದ ರಸ್ತೆಯ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಲು ಫುಟ್‌ ಓವರ್‌ ಬ್ರಿಡ್ಜ್ ನಿರ್ಮಿಸದೇ ಇರುವ ಪರಿಣಾಮ ಗ್ರಾಮೀಣ ಭಾಗದ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದರೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರ್ವೀಸ್‌ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಸಂತಸದ ವಿಷಯ. ಸರ್ವೀಸ್‌ ರಸ್ತೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿಯೇ ಆಯಾ ಗ್ರಾಮಗಳಲ್ಲಿ ಸುವ್ಯವಸ್ಥಿತವಾದ ಬಸ್‌ ತಂಗುದಾಣ, ಆಟೋ ತಂಗುದಾಣ ಕೂಡ ನಿರ್ಮಾಣವಾಗಲಿ.
– ಮಹೇಶ್‌ ಶೆಣೈ ಕುಂಭಾಶಿ, ಸ್ಥಳೀಯರು

ಮಾಲಕರಿಗೆ ನೋಟಿಸ್‌
ಕೋಟೇಶ್ವರ ಕುಂಭಾಶಿ, ತೆಕ್ಕಟ್ಟೆ, ಸಾಲಿಗ್ರಾಮ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿ ಗುರುತಿಸಲಾಗಿದೆ. ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ತೆರವುಗೊಳಿಸಲು ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶದಂತೆ ಜಾಗದ ಮಾಲಕರಿಗೆ ನೋಟಿಸ್‌ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್‌ ಅವರ ಮಾರ್ಗದರ್ಶನ ದಂತೆ ಸೆ.22ರಂದು ತೆಕ್ಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ಸ್ಥಳ ಪರಿಶೀಲಿಸಿ ಕಾರ್ಯಾಚರಣೆ ನಡೆಸಲಾಗುವುದು.
– ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next