ಕೊಟ್ಟಿಗೆಹಾರ: ಸೂಕ್ಷ್ಮಗ್ರಾಹಿಯಾಗಿ ತಮ್ಮ ಸುತ್ತಲಿನ ಜಗತ್ತನ್ನು ಕಂಡು ಆ ಅನುಭವವಗಳನ್ನು ಬರಹವಾಗಿಸಿದವರು ತೇಜಸ್ವಿ ಎಂದು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಹೇಳಿದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ‘ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕೃತಿಯ ಬಗ್ಗೆ ಅವರು ಮಾತನಾಡಿದರು.
ತೇಜಸ್ವಿ ಅವರು ಬಹುಮುಖ ಪ್ರತಿಭೆಯ ವ್ಯಕ್ತಿ. ಎಲ್ಲವನ್ನೂ ಕುತೂಹಲದ ಕಣ್ಣಿನಿಂದ ಕಂಡವರು ತೇಜಸ್ವಿ. ಪರಿಸರ, ಸಮಾಜ, ಆಧುನಿಕ ಬೆಳವಣಿಗೆ ಮುಂತಾದವುಗಳನ್ನು ಚಿಕಿತ್ಸಕ ದೃಷ್ಟಿಯಿಂದ ಕಂಡ ಅನ್ವೇಷಕ ತೇಜಸ್ವಿ. ಸಾಹಿತ್ಯ ಲೋಕದಲ್ಲಿ ತೇಜಸ್ವಿ ಅವರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದರು.
ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತಿಸುವ ಆಶಯದ ಕಥಾನಕವನ್ನು ‘ಕಿರಗೂರಿನ ಗಯ್ಯಾಳಿಗಳು’ ಕತೆ ಹೊಂದಿದ್ದು ಈ ಕತೆಯಲ್ಲಿ ಪರಿಸರದ ಬದಲಾವಣೆಗಳು ಮನುಷ್ಯನ ಬದುಕಿನ ಮೇಲೆ ಬೀರುವ ಪರಿಣಾಮಗಳ ಚಿತ್ರಣ ಮನೋಜ್ಞವಾಗಿ ಮೂಡಿಬಂದಿದೆ ಎಂದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕರಾದ ಆಕರ್ಷ್, ನಂದನ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್ ಇದ್ದರು.