Advertisement

ಸಸ್ಯಕಾಶಿಯಲ್ಲಿ ಇನ್ನಿಲ್ಲ ಪಾರ್ಕಿಂಗ್‌ ಪ್ರಾಬ್ಲಿಂ

01:51 PM Apr 19, 2018 | |

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ಭೇಟಿ ನೀಡಿದರೆ ಪಾರ್ಕಿಂಗ್‌ನದ್ದೇ ದೊಡ್ಡ ಸಮಸ್ಯೆ ಎಂದು ಇನ್ನುಮುಂದೆ ಪ್ರವಾಸಿಗರು ಮೂಗು ಮುರಿಯಬೇಕಿಲ್ಲ. ಕಾರಣ, ಪ್ರವಾಸಿಗರ ವಾಹನಗಳ ನಿಲುಗಡೆಗೆ ಸುಸಜ್ಜಿತ ಪಾರ್ಕಿಂಗ್‌ ತಾಣ ನಿರ್ಮಾಣ ವಾಗುತ್ತಿದ್ದು, ಮುಂದಿನ ತಿಂಗಳು ಲೋಕಾರ್ಪಣೆ ಗೊಳ್ಳಲಿದೆ.

Advertisement

ವಾಯು ಮಾಲಿನ್ಯ ತಡೆಯುವುದು ಹಾಗೂ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಿಂದೆ ಸಿದ್ದಾಪುರ ಗೇಟ್‌ ಬಳಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ತೋಟಗಾರಿಕೆ ಇಲಾಖೆ ಅನುಮತಿ ನಿರಾಕರಿಸಿತ್ತು. ಜತೆಗೆ ಗೇಟ್‌ ನಂ.2ರ ಬಳಿ ಜಾಗವಿದ್ದರೂ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಹಾಗೂ ನಿರ್ವಹಣೆ ಇರಲಿಲ್ಲ.

ಇದರಿಂದಾಗಿ ಸಸ್ಯಕಾಶಿಗೆ ಪ್ರವಾಸಿಗರು ಬರುವ ಬಸ್‌, ಮಿನಿಬಸ್‌ಗಳನ್ನು ನಿಲ್ಲಿಸುವುದೇ ದೊಡ್ಡ ಸಮಸ್ಯೆಯಾಗುತ್ತಿತ್ತು. ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಬಾಷ್‌ ಸಂಸ್ಥೆ ಮುಂದೆ ಬಂದಿದ್ದು, ತಮ್ಮ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) 65,000 ಚದರ ಅಡಿ ಜಾಗದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಾಹನ ನಿಲುಗಡೆ ತಾಣ ನಿರ್ಮಿಸುತ್ತಿದೆ. 

ಪ್ರತ್ಯೇಕ ಪಾರ್ಕಿಂಗ್‌: ಉದ್ಯಾನದ ಒಳ ಬರುವ ಮತ್ತು ಹೊರ ಹೋಗುವ ವಾಹನಗಳಿಗೆ ಸಮಸ್ಯೆಯಾಗದಂತೆ ನಿಲುಗಡೆ ತಾಣದಲ್ಲಿ ಎಲ್ಲ ರೀತಿಯ ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ದ್ವಿಚಕ್ರ ವಾಹನ, 150 ಕಾರುಗಳು, 15 ಮಿನಿ ಬಸ್‌ ಹಾಗೂ 6 ಟ್ರಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಬೀದಿ ವ್ಯಾಪಾರಿಗಳಿಗೂ ಪ್ರತ್ಯೇಕ ಜಾಗ ಮೀಸಲಿಡಲಾಗಿದೆ. ಪಾರ್ಕಿಂಗ್‌ ಜಾಗದಲ್ಲಿ ಮಳೆನೀರು ನಿಲ್ಲದಂತೆ ಅಗತ್ಯ ವ್ಯವಸ್ಥೆ ಕೈಗೊಂಡಿದ್ದು, ಸಂಗ್ರಹವಾಗುವ ನೀರುನ್ನು ಸಮೀಪದ ಮಳೆನೀರು ಕಾಲುವೆಗಳಿಗೆ ಪೂರೈಸಲು ಪೂರಕ ಕಾಲುವೆಗಳನ್ನು ನಿರ್ಮಿಸಲಾಗಿದೆ. 

ಗಿಡ-ಮರಗಳಿಗೆ ಹಾನಿಯಿಲ್ಲ: ಲಾಲ್‌ಬಾಗ್‌ ನಲ್ಲಿ 350ಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ 65 ಸಾವಿರ ಚದರ ಅಡಿ ಜಾಗದಲ್ಲಿ ನಿಲುಗಡೆ ತಾಣ ನಿರ್ಮಿಸುತ್ತಿದ್ದರೂ ಈ ವೇಳೆ ಉದ್ಯಾನದಲ್ಲಿನ ಯಾವುದೇ ಗಿಡ-ಮರಗಳಿಗೆ ಹಾನಿಯಾಗದಂತೆ ಕಾಮಗಾರಿ ಕೈಗೆತ್ತಿಕೊಂಡಿರುವುದು ವಿಶೇಷ. ಅಲ್ಲದೆ, ಪಾರ್ಕಿಂಗ್‌ ಸ್ಥಳದಲ್ಲಿ ಖಾಲಿ ಇರುವ ಜಾಗಗಳಲ್ಲೂ ಹಲವು ಮಾದರಿಯ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಜತೆಗೆ ವಾಹನ ಹೋಗಿ ಬರಲು ನಿರ್ಮಿಸಿರುವ ಪಥದ ಮಧ್ಯೆ ಇರುವ ಡಿವೈಡರ್‌ಗಳಲ್ಲಿ ಹುಲ್ಲಿನ ಹಾಸು ಹಾಕಲಾಗುತ್ತಿದೆ.
 
ಬೆಳಕಿನ ವ್ಯವಸ್ಥೆಗೆ ನೂರಕ್ಕೂ ಹೆಚ್ಚು ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗುತ್ತಿದ್ದು, ಪರಿಸರ ಸ್ನೇಹಿ ಪಾರ್ಕಿಂಗ್‌ ತಾಣ ನಿರ್ಮಿಸಲಾಗುತ್ತಿದೆ ಎಂದು ಕಾಮಗಾರಿ ಗುತ್ತಿಗೆ ಪಡೆದ ಡಿಸೈನ್‌ ವೆಂಚರ್ ಕಂಪನಿಯ ಎಂಜಿನಿಯರ್‌ ಅಮೃತ್‌ ದತ್ತ ಹೇಳಿದ್ದಾರೆ.

Advertisement

ಕೆರೆಯಲ್ಲಿ ಹೊಸ 9 ಕಾರಂಜಿಗಳು ಪಾರ್ಕಿಂಗ್‌ ವ್ಯವಸ್ಥೆಯೊಂದಿಗೆ ಲಾಲ್‌ಬಾಗ್‌ ಕೆರೆಯ ಸಂರಕ್ಷಣೆಗೂ ಕೈಜೋಡಿಸಿರುವ ಬಾಷ್‌ ಸಂಸ್ಥೆ, ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ವಿವಿಧೆಡೆ 9 ನೀರಿನ ಕಾರಂಜಿಗಳನ್ನು ಅಳವಡಿಸಿದೆ. ಇವುಗಳಲ್ಲಿ 8 ಕಾರಂಜಿಗಳು 14 ಅಡಿ ಸುತ್ತಳತೆಯಲ್ಲಿ ಚಿಮ್ಮಿಸಿದರೆ, 1 ಕಾರಂಜಿ ಮಾತ್ರ ಐ ಜೆಟ್‌ ಆಗಿದ್ದು, 50 ಅಡಿ ಎತ್ತರ ಹಾಗೂ 10 ಅಡಿ ಅಗಲದವರೆಗೂ ಚಿಮ್ಮುತ್ತದೆ. ಇದರಿಂದಾಗಿ ಕೆರೆಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗಲಿದ್ದು, ಕೆರೆಯ ನೀರು ಸಹ ಶುದ್ಧವಾಗಲಿದೆ. ಈಗಾಗಲೇ ಕಾರ್ಯ ಆರಂಭಿಸಿರುವ ಕಾರಂಜಿಗಳು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿವೆ. ಮುಂದಿನ 3 ವರ್ಷದವರೆಗೂ ಕಾರಂಜಿಗಳ ನಿರ್ವಹಣೆಯನ್ನು ಬಾಷ್‌ ಸಂಸ್ಥೆಯೇ ನೋಡಿಕೊಳ್ಳಲಿದೆ.  

ಮೊದಲ ಬಾರಿ ಸಿಎಸ್‌ಆರ್‌ ಯೋಜನೆಗೆ ಅನುಮತಿ ನೀಡಿದ್ದು, ಬಾಷ್‌ ಸಂಸ್ಥೆ ಉದ್ಯಾನಕ್ಕೆ ಹಾನಿಯಾಗದಂತೆ ಕಾರ್ಯನಿರ್ವಹಿಸಲು ಒಪ್ಪಿ ಕಾರ್ಯ ಪೂರ್ಣಗೊಳಿಸಲು ಮುಂದಾಗಿದೆ. 
  ಚಂದ್ರಶೇಖರ್‌, ತೋಟಗಾರಿಕೆ ಉಪನಿರ್ದೇಶಕರು

ಲಾಲ್‌ಬಾಗ್‌ನ ಮರಗಿಡಗಳಿಗೆ ಹಾನಿ ಮಾಡದಂತೆ ಆತ್ಯಾಧುನಿಕ ಪಾರ್ಕಿಂಗ್‌ ತಾಣ ನಿರ್ಮಿಸಲಾಗುತ್ತಿದೆ. ಮುಂದಿನ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
  ಸಯ್ಯದ್‌ ಅಮೀನ್‌, ಗುತ್ತಿಗೆದಾರ

ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಪಾರ್ಕಿಂಗ್‌ನದ್ದೇ ಸಮಸ್ಯೆ. ಹೊರಗೆ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ಹಾಕುತ್ತಿದ್ದರು. ಒಳಗೆ ಪಾರ್ಕಿಂಗ್‌ ಕಲ್ಪಿಸಿರುವುದು ಸ್ವಾಗತಾರ್ಹ.
  ಅಂಜನ್‌ಕುಮಾರ್‌, ಮಿನಿ ಬಸ್‌ ಚಾಲಕ, ಹಾಸನ

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next