ಹುಬ್ಬಳ್ಳಿ: ಅಮರಾವತಿ ಕಾಲೋನಿ ರೈಲ್ವೆ ನಿಲ್ದಾಣದಲ್ಲಿ ಉತ್ತರ ಗೂಮ್ಟಿ ರೀಲೆ ಕೋಣೆಯ ಮುಖ್ಯ ಬಾಗಿಲು ಮುರಿದು ರಿಲೇಗಳು, ಸಿಸಿಟಿವಿ ಕ್ಯಾಮರಾ ಸೇರಿದಂತೆ ಅಂದಾಜು 2,65,880ರೂ. ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಹಾಗೂ ಖರೀದಿಸಿದ್ದ ಓರ್ವನನ್ನು ದಾವಣಗೆರೆಯ ರೈಲ್ವೆ ಸುರಕ್ಷಾ ದಳ ಸಿಬ್ಬಂದಿ ಸಾಮಗ್ರಿಗಳೊಂದಿಗೆ ಬಂಧಿಸಿದ್ದಾರೆ.
ದಾವಣಗೆರೆ ನಿವಾಸಿಗಳಾದ ರೆಹಾನ ಎ., ಮೊಹಮ್ಮದ ಅಲ್ತಾಫ ಎ. ಹಾಗೂ ಗುಜರಿ ಅಂಗಡಿ ಮಾಲಿಕ ಮುಬಾರಖ ಬಿ. ಬಂಧಿತರಾದವರು.
ಶುಕ್ರವಾರ ರಾತ್ರಿ ರೆಹಾನ ಮತ್ತು ಮೊಹಮ್ಮದ ಗೂಮ್ಟಿ ರಿಲೇ ಕೋಣೆಯಲ್ಲಿ 33 ರಿಲೇಗಳು, 4 ಸಿಸಿಟಿವಿ ಕ್ಯಾಮೆರಾಗಳು, ಒಂದು ಸ್ವಿಚ್ ಬೋರ್ಡ್, ಎರಡು ಎಸ್ ಆ್ಯಂಡ್ ಟಿ ಸಾಮಗ್ರಿ, ನವ್ತಾಲ್ ಬೀಗಗಳನ್ನು ಕಳ್ಳತನ ಮಾಡಿದ್ದರು. ಇದರಿಂದ ರೂಟ್ ರಿಲೇ ಇಂಟರ್‌ಲಾಕಿಂಗ್ ಸಿಸ್ಟಮ್ ಪ್ಯಾನೆಲ್ ಮೇಲೆ ಪರಿಣಾಮವಾಗಿತ್ತು. ದಾವಣಗೆರೆಯ ಆರ್‌ಪಿಎಫ್ ಸಬ್ ಇನ್ಸ್ ಪೆಕ್ಟರ್, ಕಾನಸ್ಟೇಬಲ್ ಮತ್ತು ಸಿಗ್ನಲ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಒಂದು ವಿಶೇಷ ತಂಡ ರಚಿಸಿ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳ ಆಧಾರ ಮೇಲೆ ವಿಚಾರಣೆ ನಡೆಸಿದ್ದರು.
ಖಚಿತ ಮಾಹಿತಿ ಮೇರೆಗೆ ಆರ್‌ಪಿಎಫ್ ತಂಡವು ಗೂಡ್ಸ್ ಶೆಡ್ ಪ್ರದೇಶದಲ್ಲಿ ಬೈಕ್‌ನಲ್ಲಿ ಕಳ್ಳತನದ ಸಾಮಗ್ರಿಗಳೊಂದಿಗೆ ತೆರಳುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಅವರಿಂದ ಕಳುವು ಮಾಡಿದ್ದ ರೈಲ್ವೆಯ 15 ರಿಲೇಗಳನ್ನು ವಾಹನ ಸಮೇತ ವಶಪಡಿಸಿಕೊಂಡು ವಿಚಾರಿಸಿದಾಗ, ದಾವಣಗೆರೆ ಬೇತೂರು ಲಿಂಕ್ ರಸ್ತೆ, ಮಂಡಕ್ಕಿಬಟ್ಟಿ, ಡಬಲ್ ರೋಡ್‌ದ ಗುಜರಿ ಅಂಗಡಿಗೆ ಕಳ್ಳತನ ಮಾಡಿರುವ 18ರಿಲೇ ಬಾಕ್ಸ್, 4 ಸಿಸಿಟಿವಿ ಕ್ಯಾಮೆರಾಗಳು, ಒಂದು ಸ್ವಿಚ್ ಮೋಡೆಮ್ ಮತ್ತು ಎರಡು ನವಾ¤ಲ್ ಲಾಕ್‌ಗಳನ್ನು 1400 ರೂ.ಗೆ ಮಾರಾಟ ಮಾಡಿದ್ದಾಗಿ ಒಪ್ಪಿದ್ದರು. ಗುಜರಿ ಅಂಗಡಿಯ ಮಾಲೀಕನ ಸ್ವಾಧೀನದಲ್ಲಿದ್ದ ರೈಲ್ವೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.