ಆಲಮಟ್ಟಿ: ಇಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಆವರಣದಲ್ಲಿ ಹಾಗೂ ಪ್ರವಾಸಿಮಂದಿರ ಆವರಣಗಳಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಹೃದಯದಂತಿರುವ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಹಿಂಭಾಗದಲ್ಲಿರುವ ಮರಗಳಲ್ಲಿ 4 ಹಾಗೂ ಪ್ರವಾಸಿ ಮಂದಿರದ ಆವರಣದಲ್ಲಿರುವ 1ಮರ ಸೇರಿದಂತೆ 5 ಮರಗಳನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆಲಮಟ್ಟಿ ಜಲಾಶಯದ ಭದ್ರತೆಗಾಗಿ 4ದಿಕ್ಕಿನಲ್ಲಿ ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿ ಕೆ ಎಸ್ ಐ ಎಸ್ ಎಫ್ ನ ನೂರಕ್ಕೂ ಅಧಿಕ ಸಿಬ್ಬಂದಿಗಳು ಪಾಳಿಯಲ್ಲಿ ಕಾವಲಿಗಿದ್ದಾರೆ.
ನಾಗರಿಕ ಸೇವಾ ಪೊಲೀಸ್ ಠಾಣೆ ಇದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನೂ ಮರಗಳು ಕಳ್ಳತನ ಆಗಿರುವ ಪ್ರದೇಶದಲ್ಲಿಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇದೆಲ್ಲದರ ಮಧ್ಯ ಕಳ್ಳತನ ಆಗಿರುವ ಸ್ಥಳಕ್ಕೆ ಕಂಪೌಂಡ್ ಹಾಗೂ ತಂತಿ ಜಾಳಿಗೆಯನ್ನು ಅಳವಡಿಸಲಾಗಿದೆ. ಕಳ್ಳರು ತಂತಿಜಾಳಿಗೆಯನ್ನು ಕತ್ತರಿಸಿ ಒಳಪ್ರವೇಶಿಸಿ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ.
ಇಷ್ಟೊಂದು ಭದ್ರತೆಯಿದ್ದರೂ ಕಳ್ಳರು ಮಾತ್ರ ಮೇಲಿಂದ ಮೇಲೆ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ಭದ್ರತೆಗೆ ನಿಯೋಜನೆಗೊಂಡಿರುವ ಕೆಎಸ್ ಐಎಸ್ ಎಫ್ ಅಧಿಕಾರಿಗಳು ಹಾಗೂ ನಾಗರಿಕ ಪೊಲೀಸ್ ಅಧಿಕಾರಿಗಳು ಯಾವ ಆರೋಪಿಯನ್ನೂ ಬಂಧಿಸದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.