Advertisement

ಸಿಸಿ ಕೆಮರಾ ತೆರವು: ದುರ್ಲಾಭ ಪಡೆಯುತ್ತಿರುವ ಕಳ್ಳರು

10:50 PM Sep 29, 2020 | mahesh |

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಿಕರ ವಾಹನಗಳಿಗೆ ಸೂಕ್ತ ರಕ್ಷಣೆಯ ವ್ಯವಸ್ಥೆಯಿಲ್ಲವೆಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಕಳೆದ 10 ದಿನಗಳ ಅಂತರದಲ್ಲಿ ಎರಡು ಆಮ್ನಿ ಕಾರುಗಳು ಕಳವಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಿತ್ಯ ರಾಜ್ಯ-ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿಗೆ ಭೇಟಿ ನೀಡುವ ಹೆಚ್ಚಿನವರು ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಬಂದರೆ, ಕೆಲವರು ಸರಕಾರಿ ಬಸ್‌ಗಳಲ್ಲಿ ಆಗಮಿಸುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ತಮ್ಮ ವಾಹನಗಳನ್ನು ಪಾರ್ಕ್‌ ಮಾಡಲು ದೇಗುಲದ ರಥಬೀದಿ ಬಳಿಯ ಆಂಜನೇಯ ದೇವಸ್ಥಾನದ ಬಳಿ ಹಾಗೂ ಪಕ್ಕದ ಸವಾರಿ ಮಂಟಪ ಬಳಿ ಜಾಗ ಗುರುತಿಸಲಾಗಿದ್ದು, ಇಲ್ಲಿ ಸುಮಾರು 300-400 ವಾಹನಗಳು ಪಾರ್ಕ್‌ ಮಾಡಲು ಅವಕಾಶವಿದೆ. ಅಲ್ಲದೇ ಪೊಲೀಸ್‌ ಹಾಗೂ ಗೃಹರಕ್ಷಕ ದಳದ ವತಿಯಿಂದಲೂ ಗಸ್ತು ವ್ಯವಸ್ಥೆ ಮಾಡಲಾಗಿದೆ.

ಕ್ಷೇತ್ರದಲ್ಲಿ ಯಾತ್ರಿಕರ, ಪ್ರತಿದಿನದ ಚನವಲನಗಳ ಮೇಲೆ ಕಣ್ಣಿಡುವ ದೃಷ್ಟಿ ಯಿಂದ ದೇಗುಲದ ಒಳಗೆ ಹಾಗೂ ಪೇಟೆಯಲ್ಲಿ ದೇಗುಲದ ವತಿಯಿಂದ ಸಿಸಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಪ್ರಸ್ತುತ ದೇಗುಲದ ಒಳಭಾಗದಲ್ಲಿ 90 ಕೆಮರಾಗಳು ಕಾರ್ಯಚರಿಸುತ್ತಿವೆ.

ಉಳಿದಂತೆ ಪೇಟೆಯ ಪ್ರಮುಖ ನಾಲ್ಕು ಕಡೆಗಳಲ್ಲಿ ಕೆಮರಾಗಳನ್ನು ಅಳವ ಡಿಸಲಾಗಿತ್ತು. ಆದರೆ ಕ್ಷೇತ್ರದ ಅಭಿವೃದ್ಧಿ ಕೆಲಸದ ಹಿನ್ನೆಲೆಯಲ್ಲಿ ಅದನ್ನು ಇದೀಗ ತೆರವು ಮಾಡಲಾಗಿದೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ವತಿಯಿಂದಲೂ ಕೆಲವೆಡೆ ಕೆಮರಾಗಳನ್ನು ಅಳವಡಿಸಲಾಗಿದೆ.

Advertisement

ಕೆಮರಾ ತೆರವು
ಕ್ಷೇತ್ರದಲ್ಲಿ ಮಾಸ್ಟರ್‌ ಪ್ಲಾನ್‌ನಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಹಿನ್ನೆಲೆಯಲ್ಲಿ ಪೇಟೆಯ ಅಲ್ಲಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾಗಳನ್ನು ತೆರವು ಮಾಡಲಾಗಿದ್ದು, ಅಭಿವೃದ್ಧಿ ಕೆಲಸ ಪೂರ್ಣಗೊಳ್ಳದೇ ಇರುವುದರಿಂದ ಕೆಮರಾ ಅಳವಡಿಸಲಾಗಿಲ್ಲ. ಇದರಿಂದ ಕಳ್ಳರ ಕೃತ್ಯಗಳ ಬಗ್ಗೆ ಮಾಹಿತಿ ಕಲೆಹಾಕಲು ಪೋಲಿಸರಿಗೆ ಅಡ್ಡಿಯಾಗಿದೆ ಎನ್ನಲಾಗಿದೆ.

ವಾಹನ ಕಳವು
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರನ್ನೇ ಗುರಿಯಾಗಿಸಿಕೊಂಡಿರುವ ಕಳ್ಳರ ತಂಡ ಅವರ ವಾಹನಗಳನ್ನು ಕಳವು ಮಾಡಲು ಮುಂದಾಗುತ್ತಿರುವುದು ಆತಂಕ ಉಂಟು ಮಾಡಿದೆ. ಕಳ್ಳರು ನಕಲಿ ಕೀ ಬಳಸಿ ವಾಹನ ಕಳವು ಮಾಡುತ್ತಿದ್ದಾರೆ ಎನ್ನಲಾಗಿದೆ. 10 ದಿನಗಳ ಅಂತರದಲ್ಲಿ ಎರಡು ಆಮ್ನಿ ಕಾರುಗಳು ಕಳವಾಗಿವೆ. ಸೆ. 19ರಂದು ಬೆಳ್ತಂಗಡಿ ಮೂಲದ ಹಾಗೂ ಸೆ. 27ರಂದು ಕುಂದಾಪುರ ಮೂಲದ ವ್ಯಕ್ತಿಗಳ ಆಮ್ನಿ ಕಾರು ಕಳವಾದ ಬಗ್ಗೆ ದೂರು ದಾಖಲಾಗಿದೆ. ಅಲ್ಲದೆ ಕಳೆದ ಷಷ್ಠಿ ಮಹೋತ್ಸವ ಸಂದರ್ಭದಲ್ಲೂ ಭಕ್ತರೋರ್ವರ ಕಾರು ಕಳವು ಸಹಿತ ಇತ್ತೀಚೆಗೆ ಹಲವಾರು ಇಂತಹ ಘಟನೆಗಳ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳ್ಳರ ಪತ್ತೆಗೆ ಅಡ್ಡಿ
ಅಭಿವೃದ್ಧಿ ಕೆಲಸಗಳಿಗಾಗಿ ಪೇಟೆಯಲ್ಲಿ ಅಳವಡಿಸಲಾದ ಸಿಸಿ ಕೆಮರಾಗಳನ್ನು ತೆಗೆಯಲಾಗಿದೆ. ಆದುದರಿಂದ ಕಳ್ಳರ ಚಲನವಲನಗಳ ಮೇಲೆ ಕಣ್ಣಿಡಲು ತೊಂದರೆಯಾಗಿದ್ದು, ಅಪರಾಧಿಗಳ ಪತ್ತೆಗೆ ಇದರಿಂದ ಅಡ್ಡಿಯಾಗಿದೆ. ಜತೆಗೆ ಠಾಣೆಯಲ್ಲಿ ಸಿಬಂದಿ ಕೊರತೆಯೂ ಇದೆ.
-ಓಮನ, ಉಪನಿರೀಕ್ಷಕರು ಸುಬ್ರಹ್ಮಣ್ಯ ಪೊಲೀಸ್‌ ಠಾಣೆ

ಅಭಿವೃದ್ಧಿ ಕೆಲಸ ಬಳಿಕ ಕೆಮರಾ ಅಳವಡಿಕೆ
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗಾಗಿ ಸಿಸಿ ಕೆಮರಾಗಳ ತೆರವು ಅನಿವಾರ್ಯವಾಗಿತ್ತು. ಕಾಮಗಾರಿಗಳು ಪೂರ್ಣಗೊಂಡ ತತ್‌ಕ್ಷಣ ಸಿಸಿ ಕೆಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
-ರವೀಂದ್ರ ಎಂ.ಎಚ್‌. ಕಾರ್ಯನಿರ್ವಹಣಾಧಿಕಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

 

Advertisement

Udayavani is now on Telegram. Click here to join our channel and stay updated with the latest news.

Next