Advertisement
ಪ್ರತ್ಯೇಕ ಡಿವೈಸ್ ಖರೀದಿ!ಈ ಹಿಂದೆ ದರೋಡೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಜೈಲು ಸೇರಿದ್ದ ಆರೋಪಿಗೆ ಕಾರು ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ರಾಕೇಶ್ ಎಂಬಾತನ ಪರಿಚಯವಾಗಿದೆ. ಆತನಿಂದ ತಂತ್ರಜ್ಞಾನದ ಮೂಲಕ ಕಾರು ಕದಿಯುವ ಬಗ್ಗೆ ತಿಳಿದುದುಕೊಂಡಿದ್ದ. ಬಳಿಕ ಯುಟ್ಯೂಬ್ ಮೂಲಕ ಕಾರು ಕಳವಿಗೆ ಬಳಸುವ ಡಿವೈಸ್ ಬಗ್ಗೆ ತಿಳಿದು 50-60 ಸಾವಿರ ರೂ.ಗೆ ಆನ್‌ಲೈನ್ ಮೂಲಕ “ಎಕ್ಸ್‌ಟೂಲ್ ಆಟೋ ಡಯಾಗ್ನಿಸ್ಟಿಕ್ ಟೂಲ್’ ಎಂಬ ಡಿವೈಸ್ ಖರೀದಿಸಿ ಅದರ ಬಳಕೆ ಬಗ್ಗೆಯೂ ತಿಳಿದುಕೊಂಡಿದ್ದಾನೆ.
ರಾತ್ರಿ ವೇಳೆ ಬೆಂಗಳೂರು ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಸುತ್ತಾಡಿ ರಸ್ತೆ ಬದಿ ನಿಂತಿದ್ದ ಕಾರುಗಳ ಗ್ಲಾಸ್ ಒಡೆದು ಒಳಗೆ ಹೋಗುತ್ತಿದ್ದ. ಅನಂತರ ಡಿವೈಸ್‌ನಲ್ಲಿರುವ ಕೇಬಲ್ ಅನ್ನು ಸ್ಟೇರಿಂಗ್‌ನ ಕೆಳ ಭಾಗದಲ್ಲಿರುವ ವೈರ್‌ಗೆ ಸಂಪರ್ಕಿಸಿ ಕಾರಿನ ಸಾಫ್ಟ್ ವೇರ್ ಅನ್ನು ಡಿವೈಸ್‌ಗೆ ವರ್ಗಾಯಿಸಿಕೊಳ್ಳುತ್ತಿದ್ದ. ಕಾರಿನ ನಕಲಿ ಕೀಯನ್ನು ಡಿವೈಸ್‌ಗೆ ಸಂಪರ್ಕಿಸಿ, ಡಿವೈಸ್‌ನಲ್ಲಿರುವ ಕಾರಿನ ಆ್ಯಪ್ ತೆರೆದು ಸಿಸ್ಟಮ್ ಆಪರೇಟ್ ಮಾಡಿ ಕೆಲವೇ ಕ್ಷಣಗಳಲ್ಲಿ ಕಾರಿನೊಂದಿಗೆ ಪರಾರಿಯಾಗುತ್ತಿದ್ದ. ಈ ಕಾರುಗಳನ್ನು ತಮಿಳುನಾಡು, ಆಂಧ್ರಪ್ರದೇಶದಲ್ಲಿ ನಂಬರ್ ಪ್ಲೇಟ್ ಮತ್ತು ಆರ್‌ಸಿ ಬದಲಾಯಿಸಿ ಮಾರಾಟ ಮಾಡುತ್ತಿದ್ದ. ಯುವತಿಯರ ಜತೆ ಸುತ್ತಾಟ
ಕದ್ದ ಕಾರು ಮಾರಾಟದಲ್ಲಿ ಬಂದ ಹಣದಲ್ಲಿ ಯುವತಿಯರ ಜತೆ ಗೋವಾ, ಪಾಂಡಿಚೇರಿ ಸಹಿತ ವಿವಿಧ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದ ಹಾಗೂ ಗೋವಾದ ಕ್ಯಾಸಿನೋ ಹಾಗೂ ಜೂಜಾಟದಲ್ಲೂ ಭಾಗಿಯಾಗುತ್ತಿದ್ದ. ಈತನ ವಿರುದ್ಧ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.