ಬೆಂಗಳೂರು: ಸಂಬಳ ಕೊಡದೆ ಕಂಪನಿ ಮುಚ್ಚಿದ ಮಾಲೀಕನನ್ನು ಅಪಹರಿಸಿ ಹಲ್ಲೆ ನಡೆಸಿದ ನಾಲ್ವರು ಅರೋಪಿಗಳು ಹಲಸೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರ್ಶನ್ (27), ನಿರಂಜನ್ (25), ರಾಕೇಶ್ (23), ಸಂಜಯ್ (23) ಬಂಧಿತರು.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಮಾ.21ರಂದು ಹಲಸೂರಿನ ಕೆಂಬ್ರಿಡ್ಜ್ ಲೇಔಟ್‌ನ ನಿವಾಸಿ, ಖಾಸಗಿ ಕಂಪನಿ ಮಾಲೀಕ ಸುಜಯ್ ಅವರನ್ನು ಕರೆಸಿಕೊಂಡ ಆರೋಪಿಗಳು, ಬಳಿಕ ತಮ್ಮ ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಅಪಹರಣಕ್ಕೊಳಗಾದ ಸುಜಯ್ ಕಳೆದ ವರ್ಷ ಕೂಡ್ಲು ಸಮೀಪ ಸಾಫ್ಟ್ವೇರ್ ಕಂಪನಿಯೊಂದನ್ನು ತೆರೆದಿದ್ದರು. ಆದರೆ, ನಷ್ಟ ಹೊಂದಿದ್ದ ಕಾರಣ ಅದೇ ವರ್ಷ ಕಂಪನಿ ಮುಚ್ಚಿದ್ದರು. ಹೀಗಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಮೂರು ತಿಂಗಳ ವೇತನ ಕೊಟ್ಟಿರಲಿಲ್ಲ. ವೇತನ ಕೊಡುವಂತೆ ಸುಜಯ್‌ನನ್ನು ಆರೋಪಿಗಳು ಹಲವು ಬಾರಿ ಕೇಳಿಕೊಂಡಿದ್ದರು. ಆದರೂ ಸಂಬಳ ಕೊಟ್ಟಿರಲಿಲ್ಲ.
ಇದರಿಂದ ಆಕ್ರೋಶಗೊಂಡ ಆರೋಪಿಗಳು ಮಾ.21ರಂದು ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ವಿಜಯಾ ಬ್ಯಾಂಕ್ ಸಮೀಪ ಸುಜಯ್ ಅವರನ್ನು ಕರೆಸಿಕೊಂಡು, ದರ್ಶನ್ ಕಾರಿನಲ್ಲಿ ಅಪಹರಿಸಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ಮನೆಗೆ ಕರೆದೊಯ್ದು, ಎರಡು ದಿನ ಅಕ್ರಮ ಬಂಧನದಲ್ಲಿಟ್ಟು, ಹಲ್ಲೆ ನಡೆಸಿದ್ದರು.
ಮಾ.23 ರಂದು ರಾತ್ರಿ 9.30ರ ಸುಮಾರಿಗೆ ಸುಜಯ್ ಅವರನ್ನು ಅವರ ಮನೆ ಬಳಿ ಕರೆದುಕೊಂಡು ಬಂದು, ವೇತನ ಕೊಡದಿದ್ದರೆ ನಿಮ್ಮ ಕುಟುಂಬಕ್ಕೆ ತೊಂದರೆ ಕೊಡುವುದಾಗಿ ಬೆದರಿಸಿದ್ದರು. ಇದರಿಂದ ಹೆದರಿದ ಸುಜಯ್ ವೇತನ ಕೊಡಲು ಒಪ್ಪಿದ್ದರು. ಹೀಗಾಗಿ ಮನೆ ಬಳಿಯೇ ಅವರನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಮಾ.25ರಂದು ಹಣ ತರಲು ತಮಿಳುನಾಡಿಗೆ ಹೋಗುವಾಗ ಆರೋಪಿಗಳಾದ ವಿಶ್ವ, ಲಿಖೀತ್, ತನಜೀಮ್, ಸಂಜಯ್ ಎಂಬುವರು ಮತ್ತೂಮ್ಮೆ ಸುಜಯ್‌ರನ್ನು ಅಪಹರಿಸಿ ಮದ್ದೂರಿಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ ಮಾ.26ರಂದು ಬೆಂಗಳೂರಿನ ವಿರೂಪಾಕ್ಷಪುರದ ಸಮೀಪ ಬಿಟ್ಟು ಹೋಗಿದ್ದರು.
ಕೊನೆಗೆ ಆಟೋ ಹಿಡಿದುಕೊಂಡು ಮನೆಗೆ ಬಂದ ಸುಜಯ್, ಆರೋಪಿಗಳ ವರ್ತನೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಕುಟುಂಬಸ್ಥರು ಸುಜಯ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡ ಅವರು ನಂತರ ಹಲಸೂರು ಠಾಣೆಯಲ್ಲಿ ಏಳು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.