Advertisement

Shivamogga: ಸಮಿತಿಗೆ ಸೇರಿಸಲಿಲ್ಲವೆಂಬ ಕಾರಣಕ್ಕೆ ದೇವಸ್ಥಾನದಲ್ಲಿ ಕಳ್ಳತನ; ಮೂವರ ಬಂಧನ

06:53 PM Aug 14, 2023 | keerthan |

ಶಿವಮೊಗ್ಗ: ಸೊರಬದ ಐತಿಹಾಸಿಕ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನದ ಕಮಿಟಿಗೆ ಸೇರಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕಳ್ಳತನ ಮಾಡಿ ಕಮಿಟಿಗೆ ಕಳಂಕ ತರುವ ಯತ್ನ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

Advertisement

ಚಂದ್ರಗುತ್ತಿ ಗ್ರಾಮದ ಭೋವಿ ಕಾಲೋನಿಯ ಪ್ರವೀಣ್ (33), ದೇವರಾಜ (50), ಭೀಮಪ್ಪ (35) ಬಂಧಿತರು.

ಆ.3ರಂದು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಹುಂಡಿ ಒಡೆಯುವ ಪ್ರಯತ್ನವಾಗಿತ್ತು. ದೇವರ ಬೆಳ್ಳಿಯ ಮುಖವಾಡವನ್ನು ಕಳಚಲಾಗಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಆರೋಪಿಗಳ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ವಿಶೇಷ ತಂಡ ರಚಿಸಿದ್ದರು. ತನಿಖೆ ನಡೆಸಿದ ತಂಡ, ಬನವಾಸಿ ಬಸ್ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ:Ricky Kej; ರಾಷ್ಟ್ರಗೀತೆಗೆ ಹೊಸ ಟ್ಯೂನ್ ಕೊಟ್ಟ ರಿಕ್ಕಿ ಕೇಜ್

ಚಂದ್ರಗುತ್ತಿಯ ಭೋವಿ ಕಾಲೋನಿಯ ದೇವರಾಜ, ದೇವಸ್ಥಾನದ ಕಮಿಟಿಗೆ ಸೇರಲು ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕೃತಗೊಂಡಿತ್ತು. ದೇವಸ್ಥಾನ ಕಮಿಟಿಯ ಅಧ್ಯಕ್ಷರೇ ಇದಕ್ಕೆ ಕಾರಣ ಎಂದು ಆರೋಪಿಗಳು ಭಾವಿಸಿದ್ದರು. ಹಾಗಾಗಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಿದರೆ ಅಧ್ಯಕ್ಷರ ಹೆಸರಿಗೆ ಕಳಂಕ ಬರಲಿದೆ. ಅವರನ್ನು ಕಮಿಟಿಯಿಂದ ತೆಗೆಸಬಹುದು ಎಂದು ಭಾವಿಸಿ ಕಳ್ಳತನಕ್ಕೆ ಯತ್ನಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಎಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಶಿಕಾರಿಪುರ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸೊರಬ ಠಾಣೆ ಇನ್ಸ್ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸೊರಬ ಠಾಣೆ ಸಬ್ ಇನ್ಸ್ಪೆಕ್ಟರ್‌ಗಳಾದ ನಾಗರಾಜ್ ಮತ್ತು ಮಾಳಪ್ಪ ವೈ.ಚಿಪ್ಪಲಕಟ್ಟಿ, ಸಿಬ್ಬಂದಿ ಪಿ.ಸಿ.ರಾಘವೇಂದ್ರ, ವಿನಯ್, ಸಂದೀಪ್ ಅವರಿದ್ದ ತಂಡ ತನಿಖೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next