Advertisement

ಆರ್‌ಬಿಐ ಅಧಿಕಾರಿಗಳ ಮನೆಗಳಲ್ಲಿ ಸರಣಿ ಕಳವು

09:20 AM Sep 19, 2017 | Karthik A |

ಮೈಸೂರು: ಮೂರು ಮನೆಗಳ ಬೀಗ ಮುರಿದು ಒಳ ನುಗ್ಗಿರುವ ಖದೀಮರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ನಗರದ ಮೇಟಗಳ್ಳಿ ಆರ್‌ಬಿಐ ಕಾಲೋನಿಯಲ್ಲಿ ನಡೆದಿದೆ. ಆರ್‌ಬಿಐ ಕಾಲೋನಿ ನಿವಾಸಿಗಳಾದ ಆರ್‌ಬಿಐ ನೋಟು ಮುದ್ರಣ ಘಟಕದ ವ್ಯವಸ್ಥಾಪಕ ಶ್ರವಣ ಪ್ರಕಾಶ್‌, ಆರ್‌ಬಿಐ ಅಧಿಕಾರಿಗಳಾದ ದಿನೇಶ್‌, ಹರೀಶ್‌ರ ಮನೆಯಲ್ಲಿ ಕಳ್ಳತನ ನಡೆದಿದೆ. ಒಟ್ಟು 320 ಗ್ರಾಂ ತೂಕದ ಚಿನ್ನಾಭರಣ ಕಳುವಾಗಿದೆ. ಪಿತೃ ಪಕ್ಷದ ಹಿನ್ನೆಲೆಯಲ್ಲಿ ಮೂವರು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಇದನ್ನು ಗಮನಿಸಿರುವ ಖದೀಮರು ಈ ಕೃತ್ಯವೆಸಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿಪಿ ಡಾ.ವಿಕ್ರಮ್‌ಆಮಟೆ, ಮೇಟಗಳ್ಳಿ ಠಾಣೆ ಪ್ರಭಾರ ಇನ್ಸ್‌ಪೆಕ್ಟರ್‌ ಅನಿಲ್‌ಕುಮಾರ್‌, ಶ್ವಾನದಳ, ಬೆರಳಚ್ಚು ತಂಡದ ಸಿಬಂದಿ ಪರಿಶೀಲನೆ ನಡೆಸಿದರು. 

Advertisement

ಸ್ಥಳೀಯರಿಂದಲೇ ಕೃತ್ಯ?: ದಿನದ 24 ಗಂಟೆಗಳ ಕಾಲವೂ ಭದ್ರತಾ ಸಿಬಂದಿ ಇರುವ ಆರ್‌ಬಿಐ ಕಾಲೋನಿಯಲ್ಲಿ ನಡೆದಿರುವ ಸರಣಿ ಕಳ್ಳತನ ಸ್ಥಳೀಯರಲ್ಲಿ ಆತಂಕದ ಜತೆಗೆ ಅನು ಮಾನಕ್ಕೂ ಕಾರಣವಾಗಿದೆ. ಆರ್‌ಬಿಐ ಕಾಲೋನಿಗೆ ಸ್ಥಳೀಯ ನಿವಾಸಿಗಳನ್ನು ಹೊರತುಪಡಿಸಿ, ಹೊರಗಿನವರ ಪ್ರವೇಶಕ್ಕೆ ಅವಕಾಶವಿಲ್ಲ. ಅಲ್ಲದೆ ಕಾಲೋನಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಭದ್ರತಾ ಸಿಬಂದಿ ತಪಾಸಣೆ ನಡೆಸಿಯೇ ಒಳಗೆ ಬಿಡಲಿದ್ದಾರೆ. ಜತೆಗೆ ಕಾಲೋನಿಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹೀಗಾಗಿ ಸಾಕಷ್ಟು ಭದ್ರತೆ ನಡುವೆಯೂ ಕಾಲೋನಿಯಲ್ಲಿ ಸರಣಿ ಕಳ್ಳತನ ನಡೆದಿರುವುದರ ಹಿಂದೆ ಸ್ಥಳೀಯರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next