Advertisement

ಕೊಡಗಿನಲ್ಲಿ ಕಳ್ಳರ ಭಯ : ವೃದ್ಧರ ಮನೆಗಳೇ ಟಾರ್ಗೆಟ್‌ ; ತನಿಖಾ ತಂಡ ರಚನೆ

07:36 PM Jun 16, 2022 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ. ವಯೋವೃದ್ಧರು ಇರುವ ಮನೆಗಳನ್ನೇ ಟಾರ್ಗೆಟ್‌ ಮಾಡುತ್ತಿರುವ ಚೋರರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚುತ್ತಿದ್ದಾರೆ.

Advertisement

ಮಾಲ್ದಾರೆ ಗ್ರಾಮದ ವೃದ್ಧ ದಂಪತಿಗಳ ಮನೆಯಲ್ಲಿ ದರೋಡೆಯಾದ ಕೆಲವೇ ದಿನಗಳಲ್ಲಿ ಪಾಲಿಬೆಟ್ಟ ಸಮೀಪದ ಹೊಸೂರು ಗ್ರಾಮದಲ್ಲಿ ಇದೇ ರೀತಿಯ ಪ್ರಕರಣ ನಡೆದಿದೆ. ಕೂತಂಡ ಸುಬ್ಬಯ್ಯ ಹಾಗೂ ಪುಷ್ಪ ದಂಪತಿ ಮನೆಗೆ ಹಾಡ ಹಗಲೇ ನುಗ್ಗಿದ ಚೋರರು ಅಲ್ಮರಾದ ಬೀಗ ಮುರಿದು ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್‌ ಫೋನ್‌ ಕದ್ದೊಯ್ದಿದ್ದಾರೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದಂಪತಿ ಪಟ್ಟಣಕ್ಕೆ ತೆರಳಿದ್ದ ಸಂದರ್ಭ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವೃದ್ಧ ದಂಪತಿಗಳಿರುವ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂತಂಡ ಸುಬ್ಬಯ್ಯ ಅವರ ಮನೆಯ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ಯುವಕರ ಗುಂಪಿನ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುಳುಗೋಡುವಿನಲ್ಲಿ ಕಳ್ಳತನ:

ಪೊನ್ನಂಪೇಟೆ ತಾಲ್ಲೂಕಿನ ಸುಳುಗೋಡು ಗ್ರಾಮದಲ್ಲೂ ಕಳ್ಳತನವಾಗಿದ್ದು, ಸುಮಾರು 7.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಕಳ್ಳಿಚಂಡ ಆಶಿಕ್‌ ಅಪ್ಪಚ್ಚು ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ತಮ್ಮ ಲೈನ್‌ ಮನೆಯಿಂದ ಪರಾರಿಯಾಗಿರುವ ಕಾರ್ಮಿಕ ದಂಪತಿಗಳ ಮೇಲೆ ಸಂಶಯ ವ್ಯಕ್ತಪಡಿಸಿ ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಕಾರ್ಮಿಕರ ರೂಪದಲ್ಲಿ ಅಪರಿಚಿತರು :

ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಗಳು ಹೆಚ್ಚಾಗಿರುವುದರಿಂದ ಕೆಲಸಕ್ಕೆಂದು ಬರುತ್ತಿರುವ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿವಿಧ ತೋಟಗಳಲ್ಲಿ ಆಶ್ರಯ ಪಡೆಯುತ್ತಿರುವ ಕಾರ್ಮಿಕರ ಬಗ್ಗೆ ಸೂಕ್ತ ಮಾಹಿತಿ ಮತ್ತು ಗುರುತಿನ ಚೀಟಿ ಅಥವಾ ಸಂಬಂಧಿಸಿದ ದಾಖಲೆಯ ಪ್ರತಿಯನ್ನು ಹತ್ತಿರದ ಪೊಲೀಸ್‌ ಠಾಣೆಗಳಿಗೆ ನೀಡುವಂತೆ ಪೊಲೀಸ್‌ ಅಧಿಕಾರಿಗಳು ಈ ಹಿಂದಿನಿಂದಲೂ ಸೂಚನೆ ನೀಡುತ್ತಲೇ ಬಂದಿದ್ದಾರೆ. ಆದರೆ ಕಾರ್ಮಿಕರ ಅನಿವಾರ್ಯತೆ ಇರುವವರು ಕೆಲಸಕ್ಕೆಂದು ನಿಯೋಜಿಸಿಕೊಳ್ಳುವ ಸಂದರ್ಭ ಕಾನೂನಾತ್ಮಕ ಚೌಕಟ್ಟನ್ನು ಲೆಕ್ಕಿಸುತ್ತಿಲ್ಲ. ಇದೇ ಕಾರಣದಿಂದ ಕಾರ್ಮಿಕರ ನಾಪತ್ತೆ ಪ್ರಕರಣವೂ ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯವಿದೆ.

ಇತ್ತೀಚಿನ ವರ್ಷಗಳಲ್ಲಿ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಮಿಕರು ಕೊಡಗಿನ ತೋಟಗಳೆಡೆಗೆ ಮುಖ ಮಾಡುತ್ತಿದ್ದಾರೆ. ತೋಟ ಕೆಲಸಕ್ಕೆಂದು ಬರುತ್ತಿರುವವರು ಕಾರ್ಮಿಕರೆ ಅಥವಾ ಬೇರೆ ಉದ್ದೇಶಕ್ಕೆಂದು ಬಂದು ಸೇರಿದವರೇ ಎನ್ನುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಪರಿಚಿತರ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಪೊಲೀಸ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next