ಬೆಂಗಳೂರು: ಕಾರಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಹೈಡ್ರೋಲಿಕ್ ಸ್ಟೀಲ್ ಕಟರ್‌ನಿಂದ ಕಿಟಕಿಯ ಸರಳು ತುಂಡರಿಸಿ ಮನೆಯೊಳಗೆ ನುಗ್ಗಿ ಚಿನ್ನಾಭರಣ ಕದಿಯುತ್ತಿದ್ದ ಖತರ್ನಾಕ್ ಅಳಿಯ-ಅತ್ತೆಯ ಗ್ಯಾಂಗ್ ಸೋಲದೇವನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತುಮಕೂರು ಮೂಲದ ವೆಂಕಟೇಶ್, ಆತನ ಅತ್ತೆ ಮಹದೇವಮ್ಮ ಸೇರಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1 ಕಾರು, 1 ಮಹೇಂದ್ರ ಥಾರ್ ವಾಹನ, 829 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 61.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 12 ಕನ್ನ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ವೆಂಕಟೇಶ್ ಬಾಡಿಗೆ ಕಾರುಗಳನ್ನು ಓಡಿಸಿಕೊಂಡಿದ್ದ. ಕೆಲ ದುಶ್ಚಟಗಳನ್ನು ಅಂಟಿಸಿಕೊಂಡು ವಿಲಾಸಿ ಜೀವನ ನಡೆಸಲು ಕಳ್ಳತನದ ಮಾರ್ಗ ಹಿಡಿದಿದ್ದ. ಇದಕ್ಕಾಗಿ ತನ್ನ ಸ್ನೇಹಿತರಾದ ಇತರ ಆರೋಪಿಗಳ ಸಹಕಾರ ಪಡೆದಿದ್ದ. ಹಗಲಿನಲ್ಲಿ ಕಾರಿನಲ್ಲಿ ಸುತ್ತಾಡಿ ನಗರದಲ್ಲಿ ಬೀಗ ಹಾಕಿದ ಹಾಗೂ ಯಾರೂ ಇಲ್ಲದಿರುವ ಮನೆ ಗುರುತಿಸುತ್ತಿದ್ದ. ಬೆಳಗ್ಗೆ ಗುರುತಿಸಿದ ಮನೆಯ ಬಳಿ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಬಂದು ಹೈಡ್ರೋಲಿಕ್ ಸ್ಟೀಲ್ ಕಟ್ಟರ್‌ನಿಂದ ಕಿಟಕಿಯ ಸರಳುಗಳನ್ನು ತುಂಡರಿಸಿ ಮನೆಯೊಳಗೆ ಪ್ರವೇಶಿಸಿ ಬೆಲೆ ಬಾಳುವ ವಸ್ತುಗಳನ್ನು ಕಾರಿನಲ್ಲಿ ತುಂಬಿ ಪರಾರಿಯಾಗುತ್ತಿದ್ದರು. ಬಳಿಕ ಕದ್ದಬಂಗಾರವನ್ನು ಅತ್ತೆ ಮಹದೇವಮ್ಮನಿಗೆ ನೀಡುತ್ತಿದ್ದ.
ಕಳವು ಮಾಡಿದ ಆಭರಣವನ್ನು ಮಾರಾಟ ಮಾಡಲೆಂದೇ ಕೆಲ ಯುವಕರನ್ನು ಆಕೆ ಬಳಸಿಕೊಳ್ಳುತ್ತಿದ್ದಳು. ಆರೋಪಿ ವೆಂಕಟೇಶ್ ಕಳೆದ ಮೂರು ವರ್ಷದಿಂದ ಮನೆಗಳ್ಳತನ ಮಾಡುತ್ತಿದ್ದ. ಈತನ ಎಲ್ಲ ಕಾರ್ಯಕ್ಕೆ ಅತ್ತೆ ಮಹದೇವಮ್ಮ ಬೆಂಬಲ ಇರುವುದು ತಿಳಿದು ಬಂದಿದೆ.