ಕುಷ್ಟಗಿ: ಪಟ್ಟಣದ ಹೊರವಲಯದ ಶಾಖಾಪೂರ ರಸ್ತೆಯಲ್ಲಿರುವ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಲಾಗಿದೆ.
ಹಣ್ಣಿನ ವ್ಯಾಪಾರಿ ಹನಮಂತಪ್ಪ ಭಜಂತ್ರಿ ಹಾಗೂ ಮನೆಯ ಎಲ್ಲರೂ ತಮ್ಮ ಅಳಿಯ ತಿಪ್ಪಣ್ಣ ಎಂಬವರನ್ನು ಮನೆಯಲ್ಲೇ ಬಿಟ್ಟು ಹುಲಿಗಿ ಶ್ರೀ ಹುಲಿಗೆಮ್ಮ ಕ್ಷೇತ್ರಕ್ಕೆ ಹೋಗಿದ್ದರು. ಮನೆಯಲ್ಲಿದ್ದ ಅಳಿಯ ಹಣ್ಣಿನ ಅಂಗಡಿಗೆ ಹೋಗಿ ಶಶಿಕುಮಾರ (ಹನುಮಂತಪ್ಪ ಭಜಂತ್ರಿ ಪುತ್ರ) ಕರೆದುಕೊಂಡು ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನವಾಗಿದೆ. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಕಳವಾಗಿದೆ ಎನ್ನಲಾಗಿದೆ.
ಕಾಂಪೌಂಡ್‌ನ ಎರಡು ಗೇಟ್ ಹಾಗೂ ಮನೆ ಬಾಗಿಲು ಮುರಿದು, ಮನೆಯಲ್ಲಿದ್ದ ಅಲ್ಮಾರ ಮುರಿದಿದ್ದಾರೆ. ಅಂದಾಜು 11 ತೊಲೆ ಬಂಗಾರ, 7 ಲಕ್ಷ ರೂ. ಕಳವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಿಎಸೈ ಮೌನೇಶ ರಾಠೋಡ್, ಕೊಪ್ಪಳದಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದಾರೆ.
ಕಳವಾದ ಸುದ್ದಿ ತಿಳಿಯುತ್ತಿದ್ದಂತೆ ಹುಲಿಗಿ ಕ್ಷೇತ್ರದಲ್ಲಿದ್ದ ಹನುಮಂತಪ್ಪ, ದೇವಮ್ಮ ಸ್ಥಳಕ್ಕೆ ದೌಡಾಯಿಸಿದ್ದಾರೆ. ತೋಟ, ಹಣ್ಣಿನ ಮಾಲು ಖರೀದಿಸಲು ಮನೆಯಲ್ಲಿ ಹಣ ಇಟ್ಟಿದ್ದರು. ಕಷ್ಟಪಟ್ಟು ದುಡಿದ ಹಣ, ಕಳ್ಳರು ದೋಚಿರುವುದರಿಂದ ಕುಟುಂಬದವರು ಕಂಗಾಲಾಗಿದ್ದಾರೆ.