ಬೆಂಗಳೂರು: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನಾಭರಣ ಕದ್ದಿದ್ದ ಇಬ್ಬರನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಕೇತುರಾಮ್ ಮತ್ತು ಈತನ ಸ್ನೇಹಿತ ರಾಕೇಶ್ ಬಂಧಿತರು.
ಆರೋಪಿ ಶ್ಯಾಮ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿ ರಾಕೇಶ್ ವಿರುದ್ಧ ವಿವಿಧ ಠಾಣೆಗಳಲ್ಲಿ ಮನೆಗಳವು, ಎನ್‌ಡಿಪಿಎಸ್ ಕಾಯ್ದೆ ಅಡಿ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಆತ ಈ ಹಿಂದೆ ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ತಿಳಿದು ಬಂದಿದೆ.
ಬಂಧಿತರಿಂದ 1.2 ಕೋಟಿ ರೂ. ಬೆಲೆ ಬಾಳುವ 1.624 ಕೆ.ಜಿ ಚಿನ್ನ, 6.4 ಕೆ.ಜಿ. ಬೆಳ್ಳಿ ಹಾಗೂ 5.50 ಲಕ್ಷ ನಗದು ಜಪ್ತಿ ಮಾಡಲಾಗಿದೆ.
ಮಾಲಿಕರ ಕಣ್ತಪ್ಪಿಸಿ ಕೀ ಪಡೆದಿದ್ದ ಆರೋಪಿ: ರಾಜಸ್ಥಾನ ಮೂಲದ ಅರವಿಂದ್ ಕುಮಾರ್ ತಾಡೆ ನಗರತ್‌ಪೇಟೆಯಲ್ಲಿ ಕಾಂಚನಾ ಜ್ಯುವೆಲ್ಲರ್ಸ್ ಹೆಸರಿನ ಚಿನ್ನದ ಅಂಗಡಿ ಹೊಂದಿದ್ದಾರೆ. ಈ ನಡುವೆ ಕೆಲಸಕ್ಕಾಗಿ ಅಲೆಯುತ್ತಿದ್ದ ಆರೋಪಿ ಕೇತರಾಮ್ ನನ್ನು ಒಂದು ತಿಂಗಳು ಹಿಂದೆ ಅರವಿಂದ್ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ತಮ್ಮದೇ ಊರಿನವನಾದ ಕಾರಣ ಆರೋಪಿಯ ಹಿನ್ನೆಲೆ ಪರಿಶೀಲಿಸಿರಲಿಲ್ಲ. ಈ ನಡುವೆ ಮನೆ ಶುಚಿಗೊಳಿವ ವೇಳೆ ಮಾಲೀಕರು ಕೀ ಇಡುವ ಜಾಗವನ್ನು ಆರೋಪಿಯು ಗಮನಿಸಿದ್ದ. ಮಾಲೀಕರು ಊರಿಗೆ ಹೋಗುವ ಹಿಂದಿನ ದಿನ ಅವರ ಕಣ್ತಪ್ಪಿಸಿ ಅಂಗಡಿಯ ಕೀ ಹಾಗೂ ಅಲ್ಲಿರುವ ಲಾಕರ್‌ಗಳ ಕೀ ತೆಗೆದುಕೊಂಡಿದ್ದ.
ಅ.29 ರಂದು ತಮ್ಮ ಕುಟುಂಬದೊಂದಿಗೆ ಹಬ್ಬಕ್ಕಾಗಿ ಅರವಿಂದ್ ಮುಂಬೈಗೆ ಹೋಗಿದ್ದರು. ಆ ವೇಳೆ ಆರೋಪಿ ಕೇತರಾಮ್ ತನ್ನ ಸ್ನೇಹಿತರಾದ ರಾಜಸ್ತಾನದ ರಾಕೇಶ್ ಹಾಗೂ ಶ್ಯಾಮ್ ಎಂಬಾತನನ್ನು ಇಲ್ಲಿಗೆ ಕರೆಸಿಕೊಂಡಿದ್ದ. ನಂತರ ಮೂವರೂ ಜೊತೆಯಾಗಿ ಅರವಿಂದ್ ಚಿನ್ನದ ಅಂಗಡಿಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ಅಂಗಡಿ ತೆರೆದಿರುವುದನ್ನು ಗಮನಿಸಿದ ಅಕ್ಕಪಕ್ಕದ ಅಂಡಿಯವರು ಅರವಿಂದ್‌ಗೆ ಕರೆ ಮಾಡಿ ತಿಳಿಸಿದ್ದರು. ಆತಂಕಗೊಂಡ ಅರವಿಂದ್ ಊರಿನಿಂದ ವಾಪಸ್ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.