Advertisement

ವಿಮಾನದಲ್ಲಿ ಬಂದು ಕಳವು  ಮಾಡುತ್ತಿದ್ದ ಹೈ-ಫೈ ಕಳ್ಳರ ಬಂಧನ

09:55 PM Mar 18, 2022 | Team Udayavani |

ಬೆಂಗಳೂರು: ವಿಮಾನದ ಮೂಲಕ ನಗರಕ್ಕೆ ಬಂದು ಮನೆ ಮುಂದೆ ಬಿದ್ದಿರುವ ದಿನಪತ್ರಿಕೆಗಳನ್ನು ಗಮನಿಸಿ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಕಳವು ಮಾಡುತ್ತಿದ್ದ ಮೂವರು ಪಶ್ಚಿಮ ಬಂಗಾಳ ಮೂಲದ “ಹೈ-ಫೈ’ ಕಳ್ಳರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಪಶ್ಚಿಮ ಬಂಗಾಳ ಮೂಲದ ಹರಿದಾಸ್‌ ಬರಾಯಿ (37), ಪಾರ್ಹಹಲ್ದಾರ್‌ ಅಲಿಯಾಸ್‌ ರಾಕೇಶ್‌(32), ರತನ್‌ ಸಾಹಾ (52) ಬಂಧಿತರು. ಅವರಿಂದ 38 ಲಕ್ಷ ರೂ. ಮೌಲ್ಯದ 745 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದರು.

ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ನಗರದಲ್ಲಿ ಬೈಕ್‌ಗಳನ್ನು ಕಳವು ಮಾಡಿ ಸುತ್ತಾಡುತ್ತಿದ್ದರು. ಮನೆ ಮುಂದೆ ಐದಾರು ದಿನಗಳಿಂದ ಬಿದ್ದಿರುವ ದಿನಪತ್ರಿಕೆಗಳನ್ನು ಗಮನಿಸುತ್ತಿದ್ದರು. ಬಳಿಕ ಅಕ್ಕ-ಪಕ್ಕದ ಮನೆಯವರ ಚಲನವಲನಗಳ ಮೇಲೆ ನಿಗಾವಹಿಸುತ್ತಿದ್ದರು. ಅದೇ ರಾತ್ರಿ ಆ ಮನೆಯ ಬೀಗ ಮುರಿದು ಮನೆ ಕಳವು ಮಾಡಿ ಪರಾರಿಯಾಗುತ್ತಿದ್ದರು. ಒಟ್ಟಿಗೆ ನಾಲ್ಕೈದು ಮಂದಿ ಬರುತ್ತಿದ್ದ ತಂಡ, 2-3 ಮನೆಗಳನ್ನು ಆಯ್ಕೆ ಮಾಡಿಕೊಂಡು ಕಳವು ಮಾಡುತ್ತಿದ್ದರು. ಬಳಿಕ ಸ್ಥಳೀಯ ಗಿರವಿ ಅಂಗಡಿಯಲ್ಲಿಯೇ ಚಿನ್ನಾಭರಣ ಅಡಮಾನ ಇಟ್ಟು ಹಣ ಪಡೆದು ಪರಾರಿಯಾಗುತ್ತಿದ್ದರು. ಕೆಲವೊಮ್ಮೆ ರೈಲು ಮಾರ್ಗದ ಮೂಲಕ ಪಶ್ಚಿಮ ಬಂಗಾಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಕೆಲ ದಿನಗಳ ಬಳಿಕ ಮತ್ತೆ ವಿಮಾನದಲ್ಲಿ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಹರಿದಾಸ್‌ ವಿರುದ್ಧ ದೆಹಲಿ ಮತ್ತು ಸಿಕಂದ್ರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಗಳು ದಾಖಲಾಗಿದ್ದು, ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ. ಅಲ್ಲದೆ, ಕಳ್ಳತನ ಕೃತ್ಯ ರೂವಾರಿ ಈತನೇ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕೆಲ ದಿನಗಳ ಹಿಂದೆ ಆರೋಪಿಗಳು ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮನೆ ಬೀಗ ಮುರಿದು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸ್ಥಳೀಯ ಸಿಸಿ ಕ್ಯಾಮೆರಾ ಹಾಗೂ ಇತರೆ ಮಾರ್ಗದಲ್ಲಿ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿ ಕರೆ ತರಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಸಾರ್ವಜನಿಕರಲ್ಲಿ ಮನವಿ:

ಸಾರ್ವಜನಿಕರು ಬೇರೆ ಊರಿಗೆ ಹೋಗುವಾಗ ದಯವಿಟ್ಟು ಪೇಪರ್‌ ಮತ್ತು ಹಾಲು ಮಾರಾಟಗಾರರಿಗೆ ಮನೆ ಮುಂದೆ ಹಾಕದಂತೆ ಸೂಚಿಸಬೇಕು. ಜತೆಗೆ ಸಾರ್ವಜನಿಕರಿಗೆ ಕಾಣುವಂತೆ ಮನೆ ಬೀಗ ಇಡಬೇಡಿ. ಸಾಧ್ಯವಾದರೆ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಎಂದು ಪೂರ್ವ ವಿಭಾಗ ಪೊಲೀಸರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next