ಚಿತ್ರದುರ್ಗ: ಭೀಮಸಮುದ್ರದಿಂದ ದೆಹಲಿಗೆ ಕೊಂಡೊಯ್ಯುತ್ತಿದ್ದ ಅಡಕೆ ತುಂಬಿದ ಲಾರಿ ಕಳುವು ಮಾಡಿದ ಅಂತಾರಾಜ್ಯ ಡಕಾಯಿತರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿ ಸಿದ್ದು, 90 ಲಕ್ಷ ರೂ. ಮೌಲ್ಯದ ಅಡಕೆ ವಶಪಡಿಸಿಕೊಂಡಿದ್ದಾರೆ.
ಅಂತಾರಾಜ್ಯ ಡಕಾಯಿತನಾದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ರಿಜ್ವಾನ್, ಇದೇ ಗ್ರಾಮದ ಸಲ್ಮಾನ್ ಹಾಗೂ ಪಕ್ಕದ ಢಣಾಯಕಪುರದ ಲಿಂಗರಾಜ ಬಂ ಧಿತರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾ ಧಿಕಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು.
ಜ.5ರಂದು ರಾಜಸ್ಥಾನ ಮೂಲದ ಲಾರಿ ಭೀಮಸಮುದ್ರದ ಶ್ರೀ ರಂಗನಾಥ ಟ್ರೇಡಸ್ ನಿಂದ ಅಡಕೆ ತುಂಬಿಕೊಂಡು ದೆಹಲಿಗೆ ತೆರಳುತ್ತಿತ್ತು. ಲಾರಿಯನ್ನು ಹಿಂಬಾಲಿಸಿದ ಕಳ್ಳರ ಗ್ಯಾಂಗ್, ರಾತ್ರಿ 10.30ರ ಸುಮಾರಿಗೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಬಳಿ ಲಾರಿ ಅಡ್ಡಗಟ್ಟಿತ್ತು. ಚಾಲಕ ಭೂಪ್ ಸಿಂಗ್‌ಗೆ ಚಾಕು ತೋರಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಕಣ್ಣಿಗೆ ಬಟ್ಟೆ ಹಾಗೂ ಕೈಕಾಲು ಕಟ್ಟಿ ತಮ್ಮ ಎರ್ಟಿಗಾ ಕಾರಿನಲ್ಲಿ ಕೂಡ್ರಿಸಿಕೊಂಡು ಹುಬ್ಬಳ್ಳಿ ಬಳಿಯ ತಡಸ ಬಳಿ ಬಿಟ್ಟಿದ್ದರು. ಲಾರಿಯನ್ನು ಬಿಲ್ಲಹಳ್ಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅಡಕೆಯನ್ನು ಪಾಲು ಮಾಡಿಕೊಂಡು ಖಾಲಿ ಲಾರಿಯನ್ನು ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ನಲ್ಲಿ ಬಿಟ್ಟು ಬಂದಿದ್ದಾರೆ.
ಈ ಬಗ್ಗೆ ಭೂಪ್‌ಸಿಂಗ್ ಮಾಲೀಕರಿಗೆ ಮಾಹಿತಿ ನೀಡಿದಾಗ ಆತನ ಮೇಲೆ ಅನುಮಾನಗೊಂಡು ದೂರು ದಾಖಲಿಸಲಾಗಿತ್ತು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ದೂರಿನ ಬೆನ್ನು ಹತ್ತಿದ ಪೊಲೀಸರು, ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಸಿ ಮೂರು ಜನ ಆರೋಪಿಗಳನ್ನು ಪತ್ತೆ ಮಾಡಿ 90 ಲಕ್ಷ ರೂ. ಮೌಲ್ಯದ 300 ಚೀಲ ಅಡಕೆಯನ್ನು ಜಪ್ತಿ ಮಾಡಿದ್ದಾರೆ. ಇದರೊಟ್ಟಿಗೆ 25 ಲಕ್ಷ ರೂ. ಮೌಲ್ಯದ ಲಾರಿ, 6 ಲಕ್ಷ ರೂ. ಮೌಲ್ಯದ ಕಾರು, 50 ಸಾವಿರ ರೂ. ಮೌಲ್ಯದ ಮಾರುತಿ ಆಲ್ಟೋ ಸೇರಿದಂತೆ 1.21 ಕೋಟಿ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಪರಾರಿ: ಪ್ರಕರಣದ ಪ್ರಮುಖ ಆರೋಪಿ ಆಶ್ರಫ್ ಅಲಿಯನ್ನು ಪೊಲೀಸರು ಬಂ ಧಿಸಲು ಹೋದಾಗ ಬಿಲ್ಲಹಳ್ಳಿಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಶ್ರಫ್ ಅಲಿ ತಪ್ಪಿಸಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಇನ್ನೂ 9 ಜನರನ್ನು ಗುರುತಿಸಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ, ತುರುವನೂರು ಪಿಎಸ್‌ಐ ಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ಮಹೇಶ್ ಗೌಡ, ಯಶೋದಮ್ಮ, ಕೋಟೆ ಠಾಣೆ ಪಿಎಸ್‌ಐ ಗಾದಿಲಿಂಗಪ್ಪ, ಸಿಬ್ಬಂದಿ ಬಿ.ಎನ್. ರಘುನಾಥ್, ಓಂಕಾರಪ್ಪ, ಪೋಲ ರೆಡ್ಡಿ, ರಂಗನಾಥ್, ಎನ್. ಕೆಂಚಪ್ಪ, ಮಂಜಪ್ಪ, ಅವಿನಾಶ್, ತಿಪ್ಪೇಸ್ವಾಮಿ, ರಾಜು ಮೂಡಬಾಗಿಲು, ಹರಿ, ರುದ್ರಮುನಿ, ರಾಘವೇಂದ್ರ, ಸತೀಶ್ ಮತ್ತು ರಘು ಭಾಗವಹಿಸಿದ್ದರು ಎಂದರು. ಈ ವೇಳೆ ಡಿವೈಎಸ್ಪಿ ಪಾಂಡುರಂಗ ಇದ್ದರು.