ಬೆಂಗಳೂರು: ಹೋಟೆಲ್‌ಗೆ ಬರುವ ಗ್ರಾಹಕರ ಹೈಫೈ ಜೀವನ ಶೈಲಿ ಕಂಡು ತಾನೂ ಅದೇ ರೀತಿ ಇರಬೇಕೆಂದು ರಾತ್ರಿ ವೇಳೆ ಮನೆ ಕಳವು ಮಾಡುತ್ತಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿ.ಟಿ. ಮಾರ್ಕೆಟ್‌ನ ಮೊಹಮ್ಮದ್ ಸಾದಿಕ್(31) ಬಂಧಿತ. ಆರೋಪಿಯಿಂದ 18 ಲಕ್ಷ ರೂ. ಮೌಲ್ಯದ330 ಗ್ರಾಂ ತೂಕದ ಚಿನ್ನಾಭರಣಗಳು, 2 ಕೆ.ಜಿ. 619ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, ಎರಡು ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.
ಮೊಹಮ್ಮದ್ ಸಾದಿಕ್ ಕಳೆದ ಶುಕ್ರವಾರ ಟಾಟಾ ಸಿಲ್ಕ್ ಫಾರಂ, 1ನೇ ಅಡ್ಡರಸ್ತೆಯ ದಿವ್ಯ ರಿಜೆನ್ಸಿ ಅಪಾರ್ಟ್ ಮೆಂಟ್‌ನ ರಾಮಚಂದ್ರ ಕೌಲಗಿ ಎಂಬವರ ಫ್ಲ್ಯಾಟ್ ನಲ್ಲಿ ಕಿಟಕಿ ಮೂಲಕ ಕೈ ಹಾಕಿ ಬಾಗಿಲ ಲಾಕ್ ತೆಗೆದು ಒಳ ಪ್ರವೇಶಿಸಿ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂಬೆಳ್ಳಿ ಆಭರಣಗಳು ಹಾಗೂ ಮೊಬೈಲ್ ಕಳವು ಮಾಡಿಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು: ತರಕಾರಿ ಕತ್ತರಿಸುವ ಚಾಕುವಿಗಾಗಿ ಶುರುವಾದ ಅಡುಗೆ ಭಟ್ಟರ ಜಗಳ ಕೊಲೆಯಲ್ಲಿ ಅಂತ್ಯ
ಬೆಳಗ್ಗೆ ಹೋಟೆಲ್‌ನಲ್ಲಿ ಕೆಲಸ: ಮಂಗಳೂರಿನ ಕಂಕೆನಂಗಡಿ ಮೂಲದ ಆರೋಪಿ ಸಾದಿಕ್ ಅವಿದ್ಯಾವಂತ. 18 ವರ್ಷದ ಹಿಂದೆ ಪೋಷಕರು ಮೃತರಾಗಿದ್ದಾರೆ. ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಸಿಟಿ ಮಾರುಕಟ್ಟೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ. ಇದರೊಂದಿಗೆ ದುಶ್ಚಟಗಳ ದಾಸನಾಗಿದ್ದ. ಜತೆಗೆ ಹೋಟೆಲ್‌ಗೆ ಬರುವ ಹೈಫೈ ಜನರ ವರ್ತನೆಗಳು, ಜೀವನ ಶೈಲಿ ಕಂಡು ತಾನೂ ಅದೇ ರೀತಿ ಜೀವನ ನಡೆಸಬೇಕು ಎಂದು ನಿರ್ಧರಿಸಿದ್ದನು. ಹೀಗಾಗಿ ಬೆಳಗ್ಗೆ ಹೊತ್ತು ಹೋಟೆಲ್‌ನಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದು, ಆ ವಸ್ತುಗಳನ್ನು ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ.
ಈತ ಈ ಹಿಂದೆ ಕುಮಾರಸ್ವಾಮಿ ಲೇಔಟ್, ಕೆ.ಆರ್. ಮಾರುಕಟ್ಟೆ, ಬನಶಂಕರಿ ಹಾಗೂ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಅಪರಾಧ ಕೃತ್ಯ ಎಸಗುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.