ದಾವಣಗೆರೆ: ರಂಗಕಲೆ ಶಿಕ್ಷಣದ ಕಲಿಕೆಯ ಒಂದು ಭಾಗ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಧಿಕಾರಿ ಜಿ.ಎಂ. ಬಸವಲಿಂಗಪ್ಪ ಹೇಳಿದರು. ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶನಿವಾರ ಸಮಾನ ಮನಸ್ಕ ಸಂಘಟನೆಗಳ ಗೆಳೆಯರ ಬಳಗ ಏರ್ಪಡಿಸಿದ್ದ ದಾವಣಗೆರೆ ತಾಲೂಕಿನ ನರಗನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ್ ಕೊಡಗನೂರ್ ವಿರಚಿತ ಇಂಗ್ಲಿಷ್ ನಾಟಕಗಳ ರಂಗ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಕಲೆ ಶಿಕ್ಷಣ ಪಠ್ಯದ ಒಂದು ಭಾಗವಾಗಿದೆ. ಆದ್ದರಿಂದ ಮಕ್ಕಳು ಪಠ್ಯದಲ್ಲಿರುವ ಪಾತ್ರಗಳನ್ನು ರೂಢಿಸಿಕೊಂಡರೆ ಕಲಿಕಾ ನ್ಯೂನತೆ ಹೋಗಲಾಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಗ್ರೀಕ್ ದೇಶ ಹೊರತುಪಡಿಸಿದರೆ, ಭಾರತದಲ್ಲಿ ಮಾತ್ರ ಹೆಚ್ಚಾಗಿ ರಂಗಕಲೆ ಪ್ರಚಲಿತವಾಗಿದೆ.
ದೇಶದಲ್ಲಿ ರಾಮಾಯಣ-ಮಹಾಭಾರತದ ಕಾಲದಿಂದಲೂ ರಂಗ ಕಲೆ ಜೀವಂತವಾಗಿದ್ದು, ಹಿಂದೆ ನಾಟಕ ಅಭಿನಯ ಮನೋಜ್ಞವಾಗಿ ಹಾಗೂ ರೂಢಿಗತವಾಗಿರುತ್ತಿತ್ತು ಎಂದು ಅವರು ಸ್ಮರಿಸಿದರು. ಶಿಕ್ಷಕ ಪ್ರಕಾಶ್ ಕೊಡಗನೂರ್ ಮನಸ್ಸು ಮಾಡಿದರೆ, ರೋಲ್‌ಪ್ಲೆಯ್ಸ ಅನ್ನು ಧಾರವಾಹಿಯ ಹಂತಕ್ಕೆ ಕೊಂಡೊಯ್ದು ನರಗನಹಳ್ಳಿಯ ಮಕ್ಕಳನ್ನು ಕಿರುತೆರೆಗೆ ಪರಿಚರಿಸಬಹುದಾಗಿದೆ.
ಅವರು ಈ ರಂಗಪ್ರದರ್ಶನ ಸಿಡಿ ಮಾಡಿಸಿ, ಶಿಕ್ಷಣ ಇಲಾಖೆಗೆ ನೀಡಿದರೆ, ಇಲಾಖೆಯ ನಲಿಕಲಿ ವಿಭಾಗಕ್ಕೆ ಕಳುಹಿಸಿಕೊಟ್ಟು, ನಲಿಕಲಿ ಯೋಜನೆಯಡಿ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೂ ರಂಗಕಲೆಯ ಬಗ್ಗೆ ಪರಿಚಯಿಸಿಕೊಡಲಾಗುವುದು ಎಂದು ಅವರು ತಿಳಿಸಿದರು. ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧ್ಯಕ್ಷ ವಾಸುದೇವ್ ರಾಯ್ಕರ್ ಮಾತನಾಡಿ, ವರನಟ ಡಾ| ರಾಜ್‌ಕುಮಾರ್ ಅವರಿಂದ ಹಿಡಿದು ಮೇರು ನಟರು ಚಿತ್ರರಂಗಕ್ಕೆ ಬಂದಿರುವುದು ರಂಗಕಲೆಯ ಮೂಲಕವೇ.
ಆದರೆ, ಇಂದಿನ ಹೊಡಿಬಡಿ ಸಂಸ್ಕೃತಿಯ ನಟರ ಹಾವಳಿಯ ಮಧ್ಯೆ, ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ನಟರು ಕಣ್ಮರೆಯಾಗುತ್ತಿದ್ದಾರೆ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಆರ್. ಅಣ್ಣೇಶಪ್ಪ, ನಿವೃತ್ತ ಮುಖ್ಯಶಿಕ್ಷಕ ಎಚ್. ಚಿನ್ನಪ್ಪ, ಮುಖ್ಯೋಪಾಧ್ಯಾಯ ಯಲ್ಲಪ್ಪ ಕಡೇಮನಿ, ಕೆ.ಎಂ. ನಾಗರಾಜ್ ಇತರರು ಈ ಸಂದರ್ಭದಲ್ಲಿದ್ದರು. ನರಗನಹಳ್ಳಿ ಶಾಲೆಯ 80 ಮಕ್ಕಳು ನಾಟಕ ಪ್ರದರ್ಶಿಸಿದರು.