Advertisement

ಅಭಿಮಾನಿಗಳೇ ನಮ್ಮನೆ ದೇವ್ರು.. ಇನ್ನು ಪ್ರೇಕ್ಷಕರ ತೀರ್ಮಾನವೇ ಅಂತಿಮ

09:01 AM Feb 01, 2021 | Team Udayavani |

ಚಿತ್ರಮಂದಿರದ ಮಾಲೀಕರಿಂದ ಹಿಡಿದು ಸಿನಿಮಾ ನಿರ್ಮಾಪಕರು, ಪ್ರೇಕ್ಷಕರು ಎಲ್ಲರೂ ಖುಷಿಯಾಗಿದ್ದಾರೆ. ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಸಿನಿಮಾ ಮಂದಿಯ ಬಹುದಿನಗಳ ಬೇಡಿಕೆಯಾದ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿರೋದು.

Advertisement

ಇಷ್ಟು ದಿನ ಸ್ಟಾರ್‌ಗಳ ಹಾಗೂ ಹೊಸಬರ ಸಿನಿಮಾಗಳು ರೆಡಿ ಇದ್ದರೂ, ಚಿತ್ರಮಂದಿರಗಳಲ್ಲಿ ಕೇವಲ ಶೇ. 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶವಿದ್ದ ಕಾರಣ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದರು. ಕೋಟಿ ಕೋಟಿ ಬಂಡವಾಳ ಹೂಡಿ ಮಾಡಿರುವ ಸಿನಿಮಾ ಶೇ 50 ಸೀಟು ಭರ್ತಿಯಲ್ಲಿ ರಿಲೀಸ್‌ ಮಾಡಿದರೆ ಕಷ್ಟವಾಗುತ್ತದೆ ಎಂಬ ಲೆಕ್ಕಾಚಾರ ಅವರದ್ದಾಗಿತ್ತು.

ಆದರೆ, ಈಗ ಸರ್ಕಾರ ಶೇ. 100 ಅವಕಾಶ ನೀಡಿದ್ದರಿಂದ ಕನ್ನಡ ಚಿತ್ರರಂಗ, ಅದರಲ್ಲೂ ನಿರ್ಮಾಪಕ ವರ್ಗ ಖುಷಿಯಾಗಿದೆ. ಅದರಲ್ಲೂ ಈಗಾಗಲೇ ಸ್ಟಾರ್‌ ಸಿನಿಮಾಗಳ ಬಿಡುಗಡೆಯನ್ನು ಘೋಷಿಸಿಕೊಂಡಿರುವ ನಿರ್ಮಾಪಕರ ಮೊಗದಲ್ಲಿ ನಗುಮೂಡಿದೆ.

ಸದ್ಯ ಚಿತ್ರಮಂದಿರ ಹಾಗೂ ಇತರ ಸಮಸ್ಯೆಗಳು ಬಗೆಹರಿದಿವೆ. ಇನ್ನೇನಿದ್ದರೂ ಪ್ರೇಕ್ಷಕನ ನಿರ್ಧಾರವೇ ಅಂತಿಮ. ಅತ್ತ ಕಡೆ ಸ್ಟಾರ್‌ ಸಿನಿಮಾಗಳು ಅನೌನ್ಸ್‌ ಆಗಿವೆ. ಯಾವುದೇ ಗೊಂದಲವಿಲ್ಲದಂತೆ ಮೂರು ವಾರಗಳ ಅಂತರದಲ್ಲಿ ಬಿಡುಗಡೆ ಕಾಣಲಿದೆ. ಈಗ ಇರೋದು ಪ್ರೇಕ್ಷಕನ ಕಡೆಯಿಂದ ಗ್ರೀನ್‌ ಸಿಗ್ನಲ್‌. ಪ್ರೇಕ್ಷಕರು ಧೈರ್ಯ ಮಾಡಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದರೆ ಮತ್ತೂಂದಿಷ್ಟು ಸಿನಿಮಾಗಳ ನಿರ್ಮಾಪಕರು ರಿಲೀಸ್‌ ಮಾಡಲು ಮುಂದೆ ಬರಬಹುದು.

ಬಿಡುಗಡೆಯಾಗಲಿರುವ ಸಿನಿಮಾಗಳು ಮತ್ತು ದಿನಾಂಕ

Advertisement

* ಫೆ. 5: ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ’

* ಫೆ.05: ವಿನೋದ್‌ ಪ್ರಭಾಕರ್‌ ನಟನೆಯ ಶ್ಯಾಡೋ

* ಫೆ. 19: ಧ್ರುವ ಸರ್ಜಾ ಅಭಿನಯದ “ಪೊಗರು’

* ಮಾ. 11: ದರ್ಶನ್‌ ಅಭಿನಯದ “ರಾಬರ್ಟ್‌’

* ಏ. 01: ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’

* ಏ. 15: ದುನಿಯಾ ವಿಜಯ್‌ ಅಭಿನಯ, ನಿರ್ದೇಶನದ “ಸಲಗ’

* ಏ. 29: ಸುದೀಪ್‌ ಅಭಿನಯದ “ಕೋಟಿಗೊಬ್ಬ-3′

* ಮೇ. 14 :ಶಿವರಾಜಕುಮಾರ್‌ ಅಭಿನಯದ “ಭಜರಂಗಿ-2”

* ಜುಲೈ 16: ಕೆಜಿಎಫ್ 2

ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗಿದೆ. ಈ ನಿರ್ಧಾರಕ್ಕಾಗಿಯೇ ನಾವೆಲ್ಲರೂ ಕಾಯುತ್ತಿದ್ದೆವು. ಇಷ್ಟು ತಿಂಗಳು ಅನುಭವಿಸಿದ ಕಷ್ಟ ಇನ್ನು ದೂರವಾಗುವ ವಿಶ್ವಾಸವಿದೆ. ನನ್ನ ನಿರ್ಮಾಣದ “ಸಲಗ’ ಚಿತ್ರ ಏಪ್ರಿಲ್‌ 15ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೈಟಲ್‌ ಟ್ರ್ಯಾಕ್‌ 1 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆಯೊಂದಿಗೆ ಮುನ್ನುಗ್ಗುತ್ತಿದೆ. ಈಗ ಚಿತ್ರಮಂದಿರಕ್ಕೆ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಪ್ರೇಕ್ಷಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ವಿಶ್ವಾಸವಿದೆ.

ಕೆ.ಪಿ.ಶ್ರೀಕಾಂತ್‌, ನಿರ್ಮಾಪಕ- “ಸಲಗ’

ನಮ್ಮ ಸಿನಿಮಾ (ಪೊಗರು) ಬಿಡುಗಡೆಯಾಗುತ್ತಿರುವ ಸಮಯದಲ್ಲಿ ಈಗ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಿರೋದು ತುಂಬಾ ಖುಷಿಕೊಟ್ಟಿದೆ. ಮುಂದೆ ಚಿತ್ರರಂಗಕ್ಕೆ ಒಳ್ಳೆದಾಗಲಿದೆ.

ಬಿ.ಕೆ.ಗಂಗಾಧರ್‌, ನಿರ್ಮಾಪಕ -ಪೊಗರು

ನಿರ್ಮಾಪಕರಿಗೆ ಒಳ್ಳೆಯದಾಗಲಿ. ಹೊಸ ಹೊಸ ಸಿನಿಮಾಗಳು ಬರಲಿ.

ಸೂರಪ್ಪ ಬಾಬು, ನಿರ್ಮಾಪಕ- ಕೋಟಿಗೊಬ್ಬ-3

ನಮ್ಮ ದೇಶದಲ್ಲಿ ಸಿನಿಮಾ ಇಂಡಸ್ಟ್ರಿ ಕೂಡಾ ದೊಡ್ಡ ಬಿಝಿನೆಸ್‌. ಸರ್ಕಾರದ ರೆವೆನ್ಯೂನಲ್ಲೂ ಸಿನಿಮಾದ ಪಾಲು ದೊಡ್ಡದಿದೆ. ಇದನ್ನೇ ನಂಬಿಕೊಂಡಿರುವ ನಮ್ಮಂತಹ ದೊಡ್ಡ ವರ್ಗವೇ ಇದೆ. ಆದರೆ, ಕೋವಿಡ್‌ ನಿಂದಾಗಿ ನಾವೆಲ್ಲರೂ ದೊಡ್ಡ ಮಟ್ಟದಲ್ಲಿ ಕಷ್ಟ-ನಷ್ಟ ಅನುಭವಿಸಿದ್ದೆವು. ಆದರೆ, ಈಗ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಿದ್ದಾರೆ. ಮುಂದೆ ನಿಧಾನವಾಗಿ ಸಿನಿಮಾ ಮಂದಿಯ ಕಷ್ಟ ಕಡಿಮೆಯಾಗಲಿದೆ. ಈ ವರ್ಷ ನಮ್ಮ ಬ್ಯಾನರ್‌ನಿಂದಲೂ 6 ಸಿನಿಮಾಗಳು ತೆರೆಕಾಣಲಿವೆ.

ಪುಷ್ಕರ್‌, ನಿರ್ಮಾಪಕ

ಇದು ಉದ್ಯಮದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ. ಶೇ. 100 ಸೀಟು ಭರ್ತಿಗೆ ಅವಕಾಶ ಕೊಟ್ಟಿರುವುದರಿಂದ ಎಲ್ಲವೂ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಇನ್ನೇನಿದ್ದರೂ ಪ್ರೇಕ್ಷಕರಿಗೆ ಬಿಟ್ಟಿದ್ದು. ಅವರು ಒಳ್ಳೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಚಿತ್ರರಂಗದ ಮಂದಿ ಕ್ವಾಲಿಟಿ ಸಿನಿಮಾಗಳನ್ನು ಕೊಡಬೇಕು.

ಕೆ.ವಿ.ಚಂದ್ರಶೇಖರ್‌, ಅಧ್ಯಕ್ಷರು, ಪ್ರದರ್ಶಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next