ಉಡುಪಿ: ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಚಟುವಟಿಕೆಯಿಂದ ಇರುವುದನ್ನು ರಂಗ ತರಬೇತಿ ಶಿಬಿರಗಳು ಕಲಿಸಿಕೊಡುತ್ತವೆ ಎಂದು ಲೇಖಕ ರಾಜಾರಾಮ್ ತಲ್ಲೂರು ಅಭಿಪ್ರಾಯಪಟ್ಟರು.
ಮಣಿಪಾಲ ಪ.ಪೂ. ಕಾಲೇಜಿನಲ್ಲಿ ರಥಬೀದಿ ಗೆಳೆಯರು ಉಡುಪಿ ಮತ್ತು ಸಂಗಮ ಕಲಾವಿದೆರ್ ಮಣಿಪಾಲ ಆಶ್ರಯದಲ್ಲಿ ಆಯೋಜಿಸಲಾಗಿರುವ “ಬಣ್ಣದ ಹೆಜ್ಜೆ’ ಮಕ್ಕಳ ರಂಗ ತರಬೇತಿ ಶಿಬಿರವನ್ನು ಎ.13ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಮಿಲಿಟರಿಯ ಶಿಸ್ತನ್ನೇ ಮಕ್ಕಳ ಮೇಲೆ ಹೇರಲಾಗುತ್ತಿದೆ. ಹಾಗಾಗಿ ಮಕ್ಕಳಲ್ಲಿ ಸಂವೇದನಾಶೀಲತೆ ಕಡಿಮೆಯಾಗಿ ಅವರು ಕಠಿನ ಮನಸ್ಸಿನವರಾಗುತ್ತಿದ್ದಾರೆ. ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತಿದೆ. ರಂಗ ತರಬೇತಿ ಶಿಬಿರಗಳು ಮಕ್ಕಳ ಹಿಂಜರಿಕೆ ದೂರ ಮಾಡುತ್ತವೆ. ಉತ್ತಮ ಮಾತುಗಾರಿಕೆ, ಸಂವಹನ ಕೌಶಲವನ್ನು ಕಲಿಸಿಕೊಡುತ್ತದೆ. ಆತ್ಮಸ್ಥೈರ್ಯ, ಪರಸ್ಪರ ನಂಬಿಕೆ, ಸಹಬಾಳ್ವೆಯನ್ನು ತಿಳಿಸಿಕೊಡುತ್ತದೆ. ಸವಾಲು, ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಕೂಡ ಬೆಳೆಸುತ್ತದೆ ಎಂದು ಅವರು ಹೇಳಿದರು.
10 ದಿನ ಶಿಬಿರ, 160 ಮಕ್ಕಳು ಭಾಗಿ
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗ ತರಬೇತಿ ಶಿಬಿರದ ನಿರ್ದೇಶಕ ಡಾ| ಶ್ರೀಪಾದ ಭಟ್ ಅವರು “ಇಂದು ನಾವು ಮಕ್ಕಳನ್ನು ಪ್ರೀತಿಸುತ್ತೇವೆ ಎನ್ನುತ್ತಲೇ ಹಿಂಸಿಸುತ್ತಿದ್ದೇವೆ. ಅವರ ಆಸಕ್ತಿಗಳನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವುದಿಲ್ಲ. ಮಕ್ಕಳು ಆದಷ್ಟು ಬೇಗನೆ ಹಣ ಗಳಿಸುವ ಯಂತ್ರಗಳಾಗಲಿ ಎಂದು ಬಯಸುತ್ತೇವೆ. ಇದು ತಪ್ಪು. ರಂಗ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಸಂಗೀತ ಸಂವಾದ, ಕತೆ ಕಾರಣ, ಸಿನೆಮಾ ನೋಡುವ ಬಗೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಬಿರದಲ್ಲಿ 160 ಮಕ್ಕಳು ಪಾಲ್ಗೊಂಡಿದ್ದು ಶಿಬಿರ 10 ದಿನಗಳ ಕಾಲ ಜರಗಲಿದೆ’ ಎಂದು ತಿಳಿಸಿದರು.
ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ರಥಬೀದಿ ಗೆಳೆಯರು ಸಂಘಟನೆಯ ಕಾರ್ಯದರ್ಶಿ ಪ್ರೊ| ಸುಬ್ರಹ್ಮಣ್ಯ ಜೋಷಿ, ಸಂಗಮ ಕಲಾವಿದೆರ್ ಸಂಸ್ಥೆಯ ಕಾರ್ಯದರ್ಶಿ ಶ್ರೀಪತಿ ಪೆರಂಪಳ್ಳಿ ಉಪಸ್ಥಿತರಿದ್ದರು. ಸಂಗಮ ಕಲಾವಿದೆರ್ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ್ ಪೆರಂಪಳ್ಳಿ ವಂದಿಸಿದರು. ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.