Advertisement
ಇದೇ ಜುಲೈ 15ರಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದ ಮನೋರಮಾ ಅವರು, ತಮ್ಮೆಲ್ಲ ನಿತ್ಯಕರ್ಮಗಳನ್ನು ತಾವೇ ಮಾಡಿಕೊಳ್ಳುತ್ತಾ ದೇಹ, ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಿದ್ದವರು, ಮಾತ್ರವಲ್ಲ ಜೀವನ ಪ್ರೀತಿ, ಜೀವನೋತ್ಸಾಹದ ಮಾತುಗಳಿಂದ, ನಿತ್ಯವೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಅದರ ಬಗ್ಗೆ ವಿಮರ್ಶೆ ಮಾಡುತ್ತಾ ಅಂದಿನ ಕಾರ್ಯಕ್ರಮಗಳನ್ನು ನೀಡಿದವರು ಪರಿಚಿತರಾಗಿದ್ದರೆ ಅವರಿಗೇ ಆಗಲೇ ಫೋನ್ ಮಾಡಿ ತನ್ನ ಸಂತೋಷವನ್ನು ಹಂಚಿಕೊಂಡು ಅವರಿಗೆ ಉತ್ಸಾಹ ತುಂಬುತ್ತಿದ್ದರು.
Related Articles
Advertisement
ಜತೆಗೆ ಬರವಣಿಗೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ “ಸಾಹಿತ್ಯ ಸದನ’ದ ಸ್ವತ್ಛತೆಯ ಹೊಣೆಗಾರಿಕೆಯೊಂದಿಗೆ ಬಂದವರಿಗೆಲ್ಲ ಅವರದ್ದೇ ಆದ ವಿಶಿಷ್ಟ ಶುಂಠಿ ಜ್ಯೂಸ್‌ನ ಆತಿಥ್ಯ ಇವೆಲ್ಲವು ಗಳೊಂದಿಗೆ ನಿತ್ಯವೂ ತನ್ನನ್ನು ಕ್ರಿಯಾಶೀಲರಾಗಿಸಿ ಕೊಂಡುದುದು ನಮಗೆಲ್ಲ ಮಾದರಿ. ಉರ್ವಾಸ್ಟೋರ್ ಪೊಲೀಸ್ ಠಾಣೆಯ ಆರಕ್ಷಕರೆಲ್ಲರು ಈ ಅಮ್ಮನ ದೈನಂದಿನ ಭೇಟಿಗೆ ಕಾಯುತ್ತಿದ್ದುದು ಕೂಡ ಸತ್ಯ.
ಆರು ಮಕ್ಕಳುಳ್ಳ ತುಂಬಿದ ಕುಟುಂಬದಲ್ಲಿ 5ನೆಯವಳಾಗಿ ಮೂರು ಮಂದಿ ಅಣ್ಣಂದಿರ ಪ್ರೀತಿಯ ತಂಗಿಯಾಗಿ, ಅಕ್ಕನೋರ್ವಳ ಅಕ್ಕರೆಯ ತಂಗಿಯಾಗಿ, ಒಬ್ಬ ತಂಗಿಗೆ ಪ್ರೀತಿಯ ಅಕ್ಕನಾಗಿ ಇದ್ದ ಮನೋರಮಾ ಬಾಲ್ಯದಿಂದಲೇ ಇದ್ದ ಬಹಳ ಚುರುಕಿನ ಮಾತ್ರವಲ್ಲ ಅಣ್ಣಂದಿರಿಗೆ ಸಮನಾಗಿ ಗಂಡು ಮಕ್ಕಳಂತೆಯೇ ಬೆಳೆದವರು. ಇದಕ್ಕೆ ಕಾರಣ ಅವರ ತಂದೆ ಪುತ್ತೂರಿನ ಸಂಸ್ಕೃತ ಮಹೋಪಾಧ್ಯಾಯರಾಗಿದ್ದ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು. ಹೆಣ್ಣುಮಕ್ಕಳೂ ವಿದ್ಯೆ ಯನ್ನು ಕಲಿಯಬೇಕೆಂದು ಬಯಸಿದವರು. ಮನೋರಮಾರವರು ಬಾಲ್ಯದಲ್ಲಿ ಸಂಗೀತ ಕಲಿತವರು. ಕಛೇರಿ ನೀಡದಿದ್ದರೂ ಕೊನೆಯವರೆಗೂ ರಾಗ, ತಾಳ, ಜ್ಞಾನವುಳ್ಳವರು. ನಮ್ಮಿಬ್ಬರ ಮಾತುಕತೆಯ ವಿಷಯಗಳೇ ಸಾಹಿತ್ಯ ಮತ್ತು ಸಂಗೀತ.
ಮನೋರಮಾರವರನ್ನು ಮೆಚ್ಚಿ ಮದುವೆಯಾದವರು ಕನ್ನಡ ಸಾಹಿತ್ಯ ಕ್ಷೇತ್ರದ ನಾಡೋಜನೆಂದೇ ಪ್ರಸಿದ್ಧರಾದ ಮುಳಿಯ ತಿಮ್ಮಪ್ಪಯ್ಯನವರ ಮಗ ವಕೀಲರಾದ ಮುಳಿಯ ಮಹಾಬಲ ಭಟ್ಟರು. ಸಾಹಿತ್ಯಾಸ್ತಕರು, ಯಕ್ಷಗಾನ ಅರ್ಥಧಾರಿಗಳಾಗಿದ್ದವರು. ಹೀಗೆ ಅನುರೂಪ ದಾಂಪತ್ಯದ ಈ ದಂಪತಿಗೆ ಈರ್ವರು ಪುತ್ರರು. ಎರಡೂ ಕುಟುಂಬಗಳ ಹಿರಿಯರು, ಕಿರಿಯರು ಎಲ್ಲರೂ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳನ್ನು ತಮ್ಮ ನೆಮ್ಮದಿಯ ಬದುಕುಗಳಿಗೆ ಉಸಿರಾಗಿಸಿಕೊಂಡವರು.
ಈ ಎಲ್ಲ ಹಿನ್ನೆಲೆಯೊಂದಿಗೆ ಪುತ್ತೂರಿನ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಉಸಿರಾಡಿದ ಮನೋರಮಾ 1987ರಲ್ಲಿ ಪುತ್ತೂರಿನಲ್ಲಿ ಮಹಿಳಾ ವಿಚಾರ ಗೋಷ್ಠಿ ಯೊಂದನ್ನು ಏರ್ಪಡಿಸಿ ಅಲ್ಲಿಯೇ ತಾತ್ಕಾಲಿಕವಾಗಿ ಲೇಖಕಿಯರ ಸಂಘವೊಂದು ಸ್ಥಾಪನೆಯಾಗುವುದಕ್ಕೆ ಕಾರಣರಾದವರು. ಮುಂದೆ ಅವಿಭಜಿತ ದ.ಕ. ಜಿಲ್ಲೆ ಕಾಸರಗೋಡು ಸಹಿತವಾದ ವ್ಯಾಪ್ತಿಯ “ಕರಾವಳಿ ಲೇಖಕಿಯರ ವಾಚಕಿಯರ ಸಂಘ’ ಸ್ಥಾಪನೆಯಾದಾಗ ಸ್ಥಾಪಕ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಕ.ಲೇ.ವಾ.ಸಂಘಕ್ಕೆ ಸ್ವಂತ ಜಾಗಕ್ಕಾಗಿ ಆಗ ಸಂಘದ ಉಪಾಧ್ಯಕ್ಷೆಯಾಗಿದ್ದ ಮನೋರಮಾ ಮತ್ತು ಅಧ್ಯಕ್ಷರಾಗಿದ್ದ ಸಾರಾ ಅಬೂಬಕ್ಕರ್‌ಮತ್ತು ಲೀಲಾವತಿ ಎಸ್. ರಾವ್ ಅವರೊಂದಿಗೆ ತನ್ನ ವಯಸ್ಸನ್ನೂ ಮರೆತೂ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಲುಗಳನ್ನು ಹತ್ತಿ ಇಳಿದು ಸ್ವಂತ ಜಾಗವನ್ನು ಸಾಧ್ಯವಾಗಿಸಿದವರು. “ಸಾಹಿತ್ಯ ಸದನ’ದ ಕನಸನ್ನು ನನಸು ಮಾಡಿದವರಲ್ಲಿ ಮುಖ್ಯರು.
ವಿಧವೆಯಾದ ಹೆಣ್ಣು ತಲೆ ಬೋಳಿಸುವ ಕಾಲವನ್ನು ಬಾಲ್ಯದಲ್ಲಿ ನೋಡಿದ್ದ, ಆ ಬಗೆಗೆ ಕಾನೂನಾತ್ಮಕವಾದ ಹೋರಾಟಗಳ ಇತಿಹಾಸ, ಸಾಹಿತ್ಯಗಳನ್ನು ತಿಳಿದ ಮನೋರಮಾ ಆಧುನಿಕ ಕಾಲದ ವಿಧವೆಯ ಅಮಂಗಳೆಯ ರೂಪವನ್ನು ಪ್ರಶ್ನಿಸಿದವರು. “ಹೆಣ್ಣಿಗೇಕೆ ಈ ಶಿಕ್ಷೆ’ ಎಂಬ ಅವರ ಲೇಖನ ಪತ್ರಿಕೆಗಳಿಗೆ ಮಾತ್ರವಲ್ಲದೆ ನೇರವಾಗಿ ಮಠಾಧಿಪತಿಗಳಿಗೆ, ಸ್ವಾಮೀಜಿಗಳಿಗೆ, ನ್ಯಾಯಾಧೀಶರುಗಳಿಗೆ, ವಕೀಲರುಗಳಿಗೆ ಕಳುಹಿಸಿ ಸಮಾಜದಲ್ಲಿ ಸಂಚಲನ ಉಂಟು ಮಾಡಿದ ಹೋರಾಟ ಗಾರ್ತಿ, ತಾನು ಸ್ವತಃ ಮಂಗಳೆಯಾಗಿಯೇ ಬದುಕಿ ಇತರರಿಗೆ ಮಾದರಿಯಾದುದು ಇಂದು ಇತಿಹಾಸ.
ಮಂಗಳೂರು ಆಕಾಶವಾಣಿಯಲ್ಲಿ ನಾಟಕ ಕಲಾವಿದೆಯಾಗಿ, ರಂಗ ಕಲಾವಿದೆಯಾಗಿ, ಅಭಿನಯಿಸಿರುವ ಇವರು ಸಿನೆಮಾದಲ್ಲೂ ನಟಿಸಿದ್ದಾರೆ ಎನ್ನುವುದು ಅವರ ಜೀವನೋತ್ಸಾಹಕ್ಕೆ ಸಾಕ್ಷಿ. ಕಥೆಗಾರ್ತಿಯಾಗಿ, ಆಶು ಕವಯತ್ರಿಯಾಗಿ, ರೇಡಿಯೋ ನಾಟಕಗಳ ಸಂಕಲನ, ಪುಸ್ತಕ ಪ್ರಕಟನೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಹೆಸರಲ್ಲಿ “ಮುಳಿಯ ಪ್ರಶಸ್ತಿ’ಗಳನ್ನು ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ನಿರ್ವಹಿಸಿದ್ದಾರೆ. ಉಡುಪಿಯಲ್ಲಿ ನಡೆದ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ಅನಾರೋಗ್ಯವನ್ನು ಲೆಕ್ಕಿಸದೆ ಭಾಗವಹಿಸಿ, ಭಾಷಣ ಮಾಡಿದ್ದು ಅವರ ಇಚ್ಛಾಶಕ್ತಿ, ಬದ್ಧತೆಗೆ ಸಾಕ್ಷಿ.
ಹತ್ತು ಹಲವು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದ ಮನೋರಮಾ ಅವರು ಕಿನ್ನಿಗೋಳಿಯಲ್ಲಿ ಸೆಪ್ಟಂಬರ್ 1ರಂದು ನಡೆದ “ಅನಂತ ಪ್ರಕಾಶ’ ಪತ್ರಿಕೆಯ 29ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ನಗುನಗುತ್ತಾ ಭಾಷಣ ಮಾಡಿದುದು ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಕೇವಲ ನಾಲ್ಕು ದಿನಗಳ ವಯೋಸಹಜ ಕಾರಣಗಳಿಂದ ಸೆಪ್ಟಂಬರ್ 15ರಂದು ನಮ್ಮನ್ನಗಲಿದ ಮನೋರಮಾ ಅವರು ತಮ್ಮ ತುಂಬು ಜೀವನವನ್ನು ಸಾರ್ಥಕಗೊಳಿಸಿಕೊಂಡವರು.
ಅವರ ಬದುಕಿನ ಭಗವದ್ಗೀತೆಯಂತೆ ಇದ್ದ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ “ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುತ ನಗಿಸುವುದು ಅತಿಶಯದ ಧರ್ಮ’ ಎಂಬಂತೆ ಬದುಕಿದರು. “ನಗುತ ನಲಿಸುವ ವರವಮಿಗೆ ಬೇಡಿಕೊಳ್ಳಿರೋ’ ಎಂದು ನಮಗೆ ಸಾರುತ್ತಾ ಸಾಗಿದರು. ಜಾತಿ, ಧರ್ಮ ಭೇದವಿಲ್ಲದ, ಗಂಡು ಹೆಣ್ಣುಗಳೆಂಬ ಭಿನ್ನತೆ ಇಲ್ಲದ ಅನಕ್ಷರಸ್ಥರಿಂದ ಹಿಡಿದು ವಿದ್ಯಾವಂತರ ವರೆಗೆ ಹಲವು ಊರುಗಳಲ್ಲಿ ಹಬ್ಬಿರುವ ಅವರ ಮಾನಸ ಮಕ್ಕಳ ಪರವಾಗಿ ಮನೋರಮಾ ಅಮ್ಮನಿಗೆ ಪ್ರೀತಿಯ ಗೌರವದ ನುಡಿನಮನಗಳು.
– ಚಂದ್ರಕಲಾ ನಂದಾವರ