ಬೆಂಗಳೂರು: ಯುವ ಪೀಳಿಗೆ ಹಾಸ್ಯ ಪ್ರಜ್ಞೆಯಿಂದ ದೂರಾಗುತ್ತಿರುವುದು ಆತಂಕದ ಸಂಗತಿ ಎಂದು ರಂಗಕರ್ಮಿ ಆರ್.ನರೇಂದ್ರಬಾಬು ಅಭಿಪ್ರಾಯಪಟ್ಟರು. ಹಾಸ್ಯ ತರಂಗ ಕಲಾ ಸಂಸ್ಥೆ ಹಾಗೂ ಪದ್ಮಾಲಯ ಪ್ರಕಾಶನ ಚಾಮರಾಜಪೇಟೆಯ ಕಸಾಪದಲ್ಲಿ ಭಾನುವಾರ ಆಯೋಜಿಸಿದ್ದ ಬೀಚಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಯಾಂತ್ರಿಕೃತ ಜಗತ್ತಿನೊಂದಿಗೆ ಬೆಸದುಕೊಂಡಿದ್ದು, ದಿನದ 24 ಗಂಟೆಯೂ ಮೊಬೈಲ್, ಕಂಪ್ಯೂಟರ್‌ನಂತಹ ಯಂತ್ರಗಳೊಂದಿಗೆ ಕಾಲಕಳೆಯುತ್ತಿದ್ದಾರೆ. ಹೀಗಾಗಿ, ಈ ಯಾಂತ್ರಿಕ ಬದುಕಿನಲ್ಲಿ ನಗುವಿನ ಸ್ಥಾನ ಕಳೆದು ಹೋಗುತ್ತಿದೆ ಎಂದು ಹೇಳಿದರು.
ಮುಖ್ಯವಾಗಿ ಸಾಮಾಜಿಕ ತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲೇ ಇಂದಿನ ಯುವಕ, ಯುವತಿಯರು ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯುವ ಪೀಳಿಗೆ ಹಾಸ್ಯ ಪ್ರವೃತ್ತಿ ಬೆಳಸಿಕೊಳ್ಳಬೇಕು. ಇದರಿಂದ ಯುವಜನತೆ ಹಾಗೂ ಸಮಾಜ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಜಡತ್ವದ ಬದುಕಿನಲ್ಲಿ ನಗು ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಾಸ್ಯಮಯ ಜೀವನಕ್ಕೆ ಎಲ್ಲರನ್ನೂ ಕೊಂಡೊಯ್ಯಲು ಬೀಚಿಯವರ ಸಂಚಿಕೆಯನ್ನು ಹೊರ ತರಲಾಗಿದೆ. ಬೀಚಿಯವರು ಅನಕೃರವರ ಸಂಧ್ಯಾರಾಗ ಕಾದಂಬರಿಯಿಂದ ಪ್ರೇರಣೆಗೊಂಡಿದ್ದರು.
ಮನುಷ್ಯ ನಗಬೇಕು, ಆ ನಗುವಿನ ಹಿಂದೆ ನೋವಿರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಅಲ್ಲದೆ, ಹಾಸ್ಯದ ಮೂಲಕವೇ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಕೆಲಸವಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಬೀಚಿ ಅವರ ಬರಹಗಳನ್ನು ನೆನೆದರು.
ಕಾರ್ಯಕ್ರಮದಲ್ಲಿ ಬೀಚಿ ಅವರ “ಹಾಸ್ಯ ದರ್ಶನ ವಿಶೇಷ ಸಂಚಿಕೆ’ ಹಾಗೂ ಶ್ರೀಧರರಾಯಸಂರ “ಬಾಳಬೆಳಕು ಕಥಾಸಂಕಲನ’ ಮತ್ತು “ಕರ್ನಾಟಕ ಮಹಾನುಭಾವ’, ಕೋ.ಲ.ರಂಗನಾಥರ ಸಂಪಾದಕತ್ವದಲ್ಲಿ “ಹೆಣ್ಣು ಮತ್ತು ನಗು’, “ಆನಂದ’, “ಹೆಣ್ಣು ಮತ್ತು ಕವಿ’ ಕೃತಿಗಳು ಲೋಕಾರ್ಪಣೆಗೊಂಡವು.