ಬೆಂಗಳೂರು: ಸಿನಿಮಾ ನಟಿಯಾಗಬೇಕು. ಜಗತ್ತೇ ತನ್ನ ಕಡೆ ನೋಡಬೇಕು. ಬಣ್ಣದ ಲೋಕದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕು ಎಂಬ ಕನಸು ಹೊತ್ತು ಬೆಂಗಳೂರಿಗೆ ಬರುವವರಿಗೆ ಕೊರತೆಯಿಲ್ಲ. ಹಾಗೇ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಎಂಥ ಮಾರ್ಗ ತುಳಿಯಲೂ ಕೆಲವರು ಹಿಂಜರಿಯುವುದಿಲ್ಲ. ಆದರೆ ಹೀಗೆ ಕನಸು ಹೊತ್ತು ಬರುವ ಮುಗ್ಧರನ್ನು ವಂಚಿಸಿ, ಅವರಿಂದ ಹಣ ಕೀಳುವವರಿಗೂ ರಾಜಧಾನಿಯಲ್ಲಿ ಕೊರತೆಯಿಲ್ಲ.
ತಾನೂ ಸಿನಿಮಾ ನಟಿಯಾಗಬೇಕು. ಬಣ್ಣದ ಲೋಕದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಹೊತ್ತಿದ್ದ ನಗರದ ಯುವತಿಯೊಬ್ಬಳು, ಆ ಆಸೆ ಈಡೇರಿಸಿಕೊಳ್ಳಲು ಕೆಲ ನಯವಂಚಕರ ನೆರವು ಪಡೆದು ಈಗ ಪರಿತಪಿಸುತ್ತಿದ್ದಾಳೆ. ವಿಚಿತ್ರವೆಂದರೆ, ಅದೇನೇ ಆಗಲಿ, ನಟಿ ಆಗಿಯೇ ತೀರಬೇಕು ಎಂದು ಹಟಕ್ಕೆ ಬಿದ್ದಿದ್ದ ಆ ಯುವತಿ, ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮಗು ಬಲಿ ಕೊಡುವ ಪೂಜೆಯೊಂದನ್ನು ನಡೆಸಲು ಸಿದ್ಧಳಾಗಿದ್ದಳು! ಆ ಪೂಜೆ ಮಾಡಿಸುವ ಉದ್ದೇಶದಿಂದ ವಂಚಕರ ಕೈಗೆ ಬರೋಬ್ಬರಿ 8 ಲಕ್ಷ ರೂ. ಕೊಟ್ಟಿದ್ದಳು. ಆಕೆಯ ಪರಿಸ್ಥಿತಿಯ ಲಾಭ ಪಡೆದ ವಂಚಕರು ಅಷ್ಟೂ ಹಣ ಹಿಂದಿರುಗಿಸದೆ ಕೈಕೊಟ್ಟಿದ್ದಾರೆ.
ಈ ಸಂಬಂಧ ಚೇತನಾ ಎಂಬುವರು ವೀಣಾ ಹಾಗೂ ನಾಗೇಶ್ ಎಂಬ ಆರೋಪಿಗಳ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಒಂದು ವರ್ಷದಿಂದ ಹೊಸಕೆರೆ ಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಚೇತನಾಗೆ ಕಾರ್ಯಕ್ರಮ ಒಂದರಲ್ಲಿ ಆರೋಪಿ ನಾಗೇಶ್ ಪರಿಚಯವಾಗಿತ್ತು. ಈ ವೇಳೆ ಆರೋಪಿ ತಾನು ಖ್ಯಾತ ಸಿನಿಮಾ ನಟರೊಬ್ಬರ ಹೊಸ ಸಿನಿಮಾದ ನಿರ್ಮಾಪಕ ಎಂದು ಸುಳ್ಳು ಹೇಳಿದ್ದ. ಈ ಚಿತ್ರದ ನಾಯಕನ ಸಹೋದರಿಯ ಪಾತ್ರಕ್ಕೆ ನಿಮಗೆ ಅವಕಾಶ ಕೊಡುತ್ತೇನೆ ಎಂದು ನಂಬಿಸಿದ್ದ. ರೋಪಿಯ ನಯವಾದ ಮಾತುಗಳನ್ನು ನಂಬಿದ ಚೇತನಾ, ಆ ಪಾತ್ರ ಮಾಡಲು ಒಪ್ಪಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಲಿ, ಪೂಜೆ ನಡೆದಿಲ್ಲ: ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ವಲಯ ಡಿಸಿಪಿ ಡಾ ಶರಣಪ್ಪ, ಸಿನಿಮಾ ಕ್ಷೇತ್ರದಲ್ಲಿ ಬೆಳೆಯಬೇಕು ಎಂದರೆ, ಮಗು ಬಲಿಕೊಟ್ಟು ಪೂಜೆ ಮಾಡಬೇಕು ಎಂದು ಆರೋಪಿಗಳು ದೂರುದಾರರಾದ ಚೇತನಾಗೆ ಸಲಹೆ ನೀಡಿದ್ದಾರೆ. ಆದರೆ, ಅಂತಹ ಯಾವುದೇ ಪೂಜೆ, ಬಲಿ ನಡೆದಿಲ್ಲ. ಹಣ ಪಡೆದು ವಂಚನೆ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಮಗು ಬಲಿ ಕೊಡಬೇಕು!: ಕಾರ್ಯಕ್ರಮ ಒಂದರಲ್ಲಿ ಭೇಟಿಯಾದ ನಂತರ ಒಂದು ವರ್ಷ ಸುಮ್ಮನಿದ್ದ ನಾಗೇಶ್, ವರ್ಷದ ಬಳಿಕ ಚೇತನಾರ ಮೊಬೈಲ್ ನಂಬರ್ ಪಡೆದು ಆಕೆಗೆ ಆಗಾಗ ಕರೆ ಮಾಡುತ್ತಿದ್ದ. ಮನು ಎಂಬ ಹೆಸರಿನಲ್ಲಿ ಚಾಟಿಂಗ್ ಮಾಡುತ್ತಿದ್ದ. ಈ ವೇಳೆ ಸಿನಿಮಾ ಕ್ಷೇತ್ರದಲ್ಲಿ ಬೆಳೆಯಬೇಕೆಂದರೆ ಗೌರಿ ಎಂಬಾಕೆಯ ಜತೆ ಮಾತನಾಡು ಎಂದು ಆಕೆಯ ಮೊಬೈಲ್ ನಂಬರ್ ಕೊಟ್ಟಿದ್ದ.
ಆದರೆ, ಗೌರಿ ಕರೆ ಸ್ವೀಕರಿಸದೆ ಕೇವಲ ವಾಟ್ಸ್‌ಆ್ಯಪ್‌ನಲ್ಲಿ ಮಾತ್ರ ಚಾಟ್ ಮಾಡುತ್ತಿದ್ದಳು. ನಿನ್ನ ಹೆಸರಲ್ಲಿ ಪೂಜೆ ಒಂದನ್ನು ಮಾಡಿಸಬೇಕು. ಆ ಪೂಜೆಗೆ ಮಗು ಬಲಿ ಕೊಡಬೇಕು. ಇದಕ್ಕೆ ಸಾಕಷ್ಟು ಹಣ ವ್ಯಯವಾಗುತ್ತದೆ. ಪೂಜೆ ಮಾಡಿಸಲು ನಾಗೇಶ್‌ಗೆ ದುಡ್ಡು ಕೊಡು ಎಂದು ವಾಟ್ಸ್‌ಆ್ಯಪ್ ಮೂಲಕವೇ ಗೌರಿ ಸೂಚಿಸಿದ್ದಳು ಎಂದು ಚೇತನಾ ದೂರಿನಲ್ಲಿ ಉಲ್ಲೇಖೀಸಿರುವುದಾಗಿ ಪೊಲೀಸರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಚೇತನಾ ತನ್ನ ಬಳಿಯಿದ್ದ ಚಿನ್ನಾಭರಣ ಅಡವಿಟ್ಟು, ನಾಗೇಶ್‌ಗೆ ಹಂತ-ಹಂತವಾಗಿ 8 ಲಕ್ಷರೂ. ಕೊಟ್ಟಿದ್ದಾರೆ. ಹಾಗೆಯೇ ವೀಣಾ ಎಂಬುವವರ ಖಾತೆಗೂ 50 ಸಾವಿರ ರೂ. ವರ್ಗಾಯಿಸಿದ್ದಾರೆ. ಆದರೆ, ಆರೋಪಿಗಳು ಹಣ ಕೊಡದೆ ವಂಚಿಸಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಚೇತನಾ ದೂರಿನಲ್ಲಿ ಮನವಿ ಮಾಡಿರುವುದಾಗಿ ಪೊಲೀಸರು ತಿಳಿಸಿದರು.