Advertisement
ಮಂಗಳೂರು: ಬಾಲ್ಯದಲ್ಲಿ ವಿದ್ಯೆ ಕಲಿಯಲು, ಜೀವನ ಸಾಗಿಸುವುದಕ್ಕೆ ಕಷ್ಟಪಟ್ಟರೂ, ಮುಂದೊಂದು ದಿನ ದೇಶಕ್ಕೆ, ಊರಿಗೆ ಕೀರ್ತಿ ತಂದ ಹಲವರಿದ್ದಾರೆ. ಅಂತಹವರಲ್ಲೊಬ್ಬರು ಬಂಟ್ವಾಳ ತಾಲೂಕಿನ ಅಮ್ಟಾಡಿಯ ಮೈರ ಮನೆಯ ಯೋಧ ಸುಧಾಕರ್ ಶೆಟ್ಟಿ ಬಂಟ್ವಾಳ. ಸುಧಾಕರ್ ಅವರು ಬಾಲ್ಯದಲ್ಲಿ ಕಷ್ಟವನ್ನೇ ಕಂಡಿದ್ದು ಪೇಪರ್ ಹಾಕಿ, ಕ್ಯಾಟರಿಂಗ್ ಮಾಡಿ ವಿದ್ಯೆ ಕಲಿತರು. ಅವರೀಗ ದೇಶಸೇವೆಯ ಕೈಂಕರ್ಯದಲ್ಲಿದ್ದು ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಕಮಾಂಡೋ ಆಗಿದ್ದಾರೆ. ಕರ್ತವ್ಯ ನಿರತ ಸುಧಾಕರ ಶೆಟ್ಟಿ
ಕಿನ್ನಿಬೆಟ್ಟು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸುಧಾಕರ್ ಬಳಿಕ ಬಂಟ್ವಾಳ ಎಸ್‌ವಿಎಸ್ ಕನ್ನಡ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಶಿಕ್ಷಣ ಮುಗಿಸಿದ್ದಾರೆ. ಮುಂದೆ ಎಸ್‌ವಿಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನಲ್ಲಿ ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಮಾಡುತ್ತಿರುವಾಗಲೇ 2012ರಲ್ಲಿ ಸೇನೆಗೆ ಸೇರಿದ್ದರು. ಬಳಿಕ ಹುಬ್ಬಳ್ಳಿಯಲ್ಲಿ ತರಬೇತಿ ಮುಗಿಸಿ, ಲಕ್ನೋಕ್ಕೆ ಪೋಸ್ಟಿಂಗ್ ಆಗಿತ್ತು. ನಂತರದಲ್ಲಿ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ರಾಷ್ಟ್ರಪತಿ ಭವನದ ಭದ್ರತೆಗೆ ನಿಯೋಜನೆಯಾಗಿದ್ದಾರೆ. ಕರ್ತವ್ಯ ಅವಧಿಯಲ್ಲಿ 6 ತಿಂಗಳು ಆಫ್ರಿಕಾದ ಕಾಂಗೋದ ವಿಶ್ವಸಂಸ್ಥೆ ಕೇಂದ್ರದಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಸುಧಾಕರ್ ಅವರು ಆಗ್ರಾದಲ್ಲಿ ಪ್ಯಾರಾ ಕಮಾಂಡೋ ತರಬೇತಿಯನ್ನೂ ಪೂರೈಸಿದ್ದಾರೆ.
Related Articles
Advertisement
ಸಹೋದರಿಯ ತ್ಯಾಗಅಮ್ಟಾಡಿಯ ಮೈರ ಮನೆಯ ದಿ| ಸಂಜೀವ ಶೆಟ್ಟಿ-ಪದ್ಮಾವತಿ ದಂಪತಿಯ ಇಬ್ಬರು ಮಕ್ಕಳಲ್ಲಿ ಸುಧಾಕರ್ ಕಿರಿಯರು. ಅವರಕ್ಕ ಬಬಿತಾ ಶೆಟ್ಟಿ. ಸಣ್ಣ ವಯಸ್ಸಿಗೆ ತಂದೆ ತೀರಿಕೊಂಡಿದ್ದಾಗ ತಾಯಿ ಬೀಡಿ ಕಟ್ಟಿ ಇಬ್ಬರು ಮಕ್ಕಳನ್ನೂ ಸಲಹಿದ್ದರು. ಬಬಿತಾ ಅವರಿಗೆ ಮದುವೆಯಾಗಿ ಗುಜರಾತ್‌ನಲ್ಲಿದ್ದಾಗ, ತಾಯಿಗೆ ಅನಾರೋಗ್ಯವಾಗಿದ್ದು, ಅವರು ಕೂಡಲೇ ತಮ್ಮನ ನೆರವಿಗೆ ಬಂದಿದ್ದರು. ತಮ್ಮನ ಶಿಕ್ಷಣ, ಬೆಳವಣಿಗೆಗೆ ಆಸರೆಯಾಗಿದ್ದರು. ಅಕ್ಕ ಬಬಿತಾರಿಂದಾಗಿ ಸುಧಾಕರ್ ಅವರು ಒಂದು ಹಂತಕ್ಕೆ ಬಂದು ನಿಂತಿದ್ದರು. ಆಕೆಯ ತ್ಯಾಗದಿಂದಾಗಿಯೇ ನಾನಿಂದು ದೇಶಸೇವೆ ಮಾಡುವಂತಾಗಿದೆ ಎಂದು ಸೈನಿಕ ಸುಧಾಕರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
2016, ಸೆ.18ರ ಹೊತ್ತಿಗೆ ಸುಧಾಕರ್ ಶೆಟ್ಟಿ ಅವರು ಶ್ರೀನಗರ ಜೆಎಂಕೆಯ ಬಿಬಿ ಕ್ಯಾಂಪ್‌ನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ
ನರ್ಸಿಂಗ್ ಸೆಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆದಿದ್ದು, 17 ಮಂದಿ ಯೋಧರು ಮೃತಪಟ್ಟು, 39 ಮಂದಿ ಗಂಭೀರ ಗಾಯಗೊಂಡಿದ್ದರು. ಈ ವೇಳೆ ಮೃತದೇಹ ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಬೇಕಿತ್ತು. ಇದು ತನ್ನ ಸೇನಾವಧಿಯಲ್ಲಿ ಮರೆಯಲಾಗದ ಕ್ಷಣವಾಗಿದೆ ಎಂದು ಸುಧಾಕರ್ ವಿವರಿಸುತ್ತಾರೆ. ದೇಶದ ಸೇವೆಯ ಯೋಗ
ನಾನು ಬಡತನದಿಂದಲೇ ಮೇಲೆ ಬಂದವನು. ತಾಯಿ ಕಷ್ಟಪಟ್ಟು ಸಾಕಿದ್ದು, ಶಿಕ್ಷಣಕ್ಕಾಗಿ ಅಕ್ಕ ಬೆಂಬಲ ನೀಡಿದ್ದರಿಂದ ಇಂದು ದೇಶಸೇವೆಯ ಯೋಗ ಬಂದೊದಗಿದೆ.
-ಸುಧಾಕರ್ ಶೆಟ್ಟಿ
ಕಮಾಂಡೋ ಕಿರಣ್ ಸರಪಾಡಿ