Advertisement

ಜೂ.21ರಂದು ಅರಮನೆ ಮುಂದೆ ಯೋಗ ದಿನಾಚರಣೆ

12:45 PM May 20, 2017 | |

ಮೈಸೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ನಗರಿ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ಈ ಬಾರಿ ಜೂನ್‌ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಂದಾಜು 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Advertisement

ಯೋಗ ದಿನಾಚರಣೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪೂರ್ವ ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ ಡಿ.ರಂದೀಪ್‌, ಯೋಗ ದಿನಾಚರಣೆ ಯಶಸ್ಸಿನ ದೃಷ್ಟಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರಮನೆ ಆವರಣದಲ್ಲಿ 10 ಸಾವಿರ ಜನರು ಯೋಗ ಪ್ರದರ್ಶನ, ಅರಮನೆ ಸುತ್ತ ಮುತ್ತಲಿನ ರಸ್ತೆಗಳಾದ ಬೆಂಗಳೂರು-ನೀಲಗಿರಿ ರಸ್ತೆ, ಜೆಎಸ್‌ಎಸ್‌ ವೃತ್ತ, ನಗರಪಾಲಿಕೆ ಮುಂಭಾಗದ ಸಯ್ನಾಜಿರಾವ್‌ ರಸ್ತೆ, ಕೆ.ಆರ್‌.ವೃತ್ತ, ಅಶೋಕರಸ್ತೆ, ಚಾಮರಾಜ, ಜಯಚಾಮರಾಜ ವೃತ್ತಗಳಲ್ಲಿಯೂ ಯೋಗ ಪ್ರದರ್ಶನ ನಡೆಯಲಿದೆ.

ನಗರ ವ್ಯಾಪ್ತಿಯ ಶಾಲಾ-ಕಾಲೇಜುಗಳು, ವಿವಿಧ ಯೋಗ ಸಂಸ್ಥೆಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಸೇರಿದಂತೆ ಸುಮಾರು 50 ಸಾವಿರ ಜನರು ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 6 ಗಂಟೆಗೆ ಯೋಗ ಪ್ರದರ್ಶನ ಆರಂಭಗೊಳ್ಳಲಿದ್ದು, 8.30ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.

ಯೋಗ ಪ್ರದರ್ಶನಕ್ಕಾಗಿ ಅರಮನೆ ಅವರಣದಲ್ಲಿ ಮೂರು ವೇದಿಕೆ ನಿರ್ಮಿಸಲಾಗುವುದು. ಒಂದು ವೇದಿಕೆ ಗಣ್ಯರಿಗೆ,ಉಳಿದ ಎರಡು ವೇದಿಕೆಯಲ್ಲಿ ಯೋಗ ಶಿಕ್ಷಕರು ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಅರಮನೆ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಒಟ್ಟು 125 ಸಣ್ಣ-ಸಣ್ಣ ವೇದಿಕೆಗಳನ್ನು ನಿರ್ಮಿಸಿ ಯೋಗ ಶಿಕ್ಷಕರು ಯೋಗ ಪ್ರಾತ್ಯಕ್ಷಿಕೆ ನೀಡಲು ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು.

Advertisement

ಅರಮನೆ ಒಳಗೆ ನಡೆಯುವ ಯೋಗ ಪ್ರದರ್ಶನ ವೀಕ್ಷಿಸಲು ಅರಮನೆ ಸುತ್ತ ಮುತ್ತ ಬೃಹತ್‌ ಎಲ್‌ಇಡಿ ಪರದೆ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಯೋಗಪಟುಗಳಿಗೆ ಅಂದು ಬೆಳಗಿನ ಉಪಹಾರ, ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಯೋಗಪಟುಗಳಿಗೆ ಸಮವಸ್ತ್ರ: ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಪ್ರತಿಯೊಂದು ಸಂಘ ಸಂಸ್ಥೆಯವರನ್ನೂ ಒಂದೊಂದು ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗುವುದು. ಹೀಗಾಗಿ ಯಾವುದೇ ಸಂಘ ಸಂಸ್ಥೆಯಿಂದ ಭಾಗವಹಿಸುವವರು ಒಂದೇ ಬಣ್ಣದ ಸಮವಸ್ತ್ರ ಧರಿಸಿಬರುವಂತೆ ಸೂಚಿಸಿದರು.

ಕಾರ್ಯಕ್ರಮ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜ್‌, ಡಿಸಿಪಿ ರುದ್ರಮುನಿ, ಡಿಡಿಪಿಐ ಎಚ್‌.ಆರ್‌.ಬಸಪ್ಪ, ಪಿಯು ಉಪ ನಿರ್ದೇಶಕ ಜಯಪ್ರಕಾಶ್‌, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ, ಮೈಸೂರು ವಿವಿ ಆಡಳಿತಾಧಿಕಾರಿ ರಾಮಸ್ವಾಮಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ, ಯುವಜನ ಸೇವಾ ಇಲಾಖೆಯ ಸುರೇಶ್‌, ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳಾದ ಶ್ರೀಹರಿ, ರಂಗನಾಥ್‌ ಇದ್ದರು.

ಪ್ರಧಾನಿ ಮೋದಿ ಭಾಗಿ ಸಾಧ್ಯತೆ
ಜೂನ್‌ 21ರಂದು ನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ “ಯೋಗ ನಗರಿ’ ಗರಿಮೆಯೂ ಮೂಡಿ ದೇಶ-ವಿದೇಶಗಳಿಂದ ಪ್ರತಿ ವರ್ಷ ಸಾವಿರಾರು ಜನರು ಯೋಗ ಕಲಿಯಲು ಬರುತ್ತಿದ್ದಾರೆ.

ಹೀಗಾಗಿ ಪ್ರಧಾನಿ ಮೋದಿ ಭಾಗವಹಿಸಿದರೆ ಯೋಗ ದಿನಾಚರಣೆಗೆ ಇನ್ನಷ್ಟು ಮೆರಗು ದೊರೆತಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಅಭಿಪ್ರಾಯಪಟ್ಟರು. ಅಂತಾರಾಷ್ಟ್ರೀಯ ಯೋಗದಿನಕ್ಕೆ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ.

ಮೊದಲ ವರ್ಷ ದೆಹಲಿ, ಎರಡನೇ ವರ್ಷ ಚಂಡೀಗಡದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಈ ವರ್ಷ ತಮ್ಮಲ್ಲಿ ಭಾಗವ ಹಿಸುವಂತೆ ಲಕ್ನೋ, ನಾಗಪುರ ಹಾಗೂ ಮೈಸೂರು ಆಹ್ವಾನ ನೀಡಿದ್ದು, ನಗರದಲ್ಲಿ ಭಾಗವಹಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇವರೊಂದಿಗೆ ಕ್ರೀಡಾಪಟುಗಳಾದ ರಾಹುಲ್‌ ದ್ರಾವಿಡ್‌, ಪಿ.ಸಿಂಧು, ಸೈನಾ ನೆಹ್ವಾಲ್‌ರನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next