Advertisement

ತುಂಬೆ ನೀರಾ ಘಟಕ ಬಾಗಿಲು ಹಾಕಿ ಸಂದಿತು ವರ್ಷ

04:34 PM May 02, 2017 | Harsha Rao |

ಬಂಟ್ವಾಳ : ರಾಜ್ಯದ ಪ್ರಥಮ ನೀರಾ ಘಟಕ ಎಂಬ ಹೆಗ್ಗಳಿಕೆ ಪಡೆದಿದ್ದ ತುಂಬೆಯ ನೀರಾ ಘಟಕ ಮುಚ್ಚಲ್ಪಟ್ಟು ಇಂದಿಗೆ ವರ್ಷ ಒಂದು ಸಂದಿದೆ. ನೀರಾ ಉತ್ಪಾದನೆ, ಮಾರುಕಟ್ಟೆ ಕ್ಷೇತ್ರದಲ್ಲಿ ಹೊಸ ಭರವಸೆ, ಆಶಾಭಾವನೆ ಮೂಡಿಸಿದ್ದ ಘಟಕ ಸರಕಾರದ ನಿರ್ಲಕ್ಷ್ಯಕ್ಕೊಳಗಾಗಿ ಇತಿಹಾಸ ಸೇರಿದೆ.

Advertisement

ಘಟಕ ಸಾಗಿದ ಹಾದಿ
ಅತ್ಯಂತ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಈ ಘಟಕ 2011-12ನೇ ಸಾಲಿನಲ್ಲಿ ಬಂಟ್ವಾಳ ತಾಲೂಕು ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿ ಆರಂಭವಾಗಿತ್ತು. ತೋಟಗಾರಿಕಾ ಇಲಾಖೆ, ತೆಂಗು ಅಭಿವೃದ್ದಿ ಮಂಡಳಿ, ಪಾಲಕ್ಕಾಡ್‌ ತೆಂಗು ಉತ್ಪಾದಕರ ಕಂಪೆನಿಗಳು ಈ ಘಟಕವನ್ನು ನಿರ್ವಹಿಸಲು ಒಪ್ಪಿಕೊಂಡು ಘಟಕ ಆರಂಭವಾಗಿತ್ತು. ಮೂರ್ತೆದಾರರ ಮಹಾ ಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟ ಆರಂಭವಾಗಿತ್ತು. ಪ್ರಾಯೋಗಿಕ ಮಾರಾಟಕ್ಕಾಗಿ 2014 ಮೇ 6ರಂದು ನೀರಾ ತಂಪು ಪಾನೀಯವನ್ನು ಪ್ಯಾಕೆಟ್‌ ಮಾದರಿಯಲ್ಲಿ ಮಂಗಳೂರು ಹಾಫ್ಕಾಮ್‌ ಘಟಕಕ್ಕೆ ರವಾನಿಸಲಾಗಿತ್ತು.  

ತುಂಬೆ ಘಟಕವು ದಿನಕ್ಕೆ ಗರಿಷ್ಠ ಎರಡು ಸಾವಿರ ಲೀಟರ್‌ ಸಂಗ್ರಹ ಮತ್ತು ಸಂಸ್ಕರಣೆ  ಸಾಮರ್ಥ್ಯ ಹೊಂದಿತ್ತು. ಕನಿಷ್ಠ ನೂರು ಮಂದಿ ನೀರಾ ಮೂರ್ತೆದಾರರು, ಅಷ್ಟೆ ಸಂಖ್ಯೆಯ ಸಹಾಯಕರು, ಸಂಸ್ಕರಣೆ, ಮಾರಾಟ ಮತ್ತು ವಿತರಣೆಗೆ ಸುಮಾರು ಐವತ್ತು ಮಂದಿ ಸಿಬಂದಿ ಇದರಲ್ಲಿ ತೊಡಗಿಸಿಕೊಂಡಿದ್ದರು. ಇದೊಂದು ಪ್ರಥಮ ಪ್ರಾಯೋಗಿಕ ಘಟಕದಂತಿತ್ತು. ಇನ್ನಷ್ಟು ಸುಧಾರಣೆಯ ಬಳಿಕ ಗ್ರಾಮಾಂತರ ತೆಂಗು ಕೃಷಿಕರಿಗೆ ವರದಾನ ಆಗಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು. 2011-12 ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಒಂದು ಕೋಟಿ ರೂ. ಅನುದಾನವು ಇದಕ್ಕೆ ಬಿಡುಗಡೆ ಆಗಿತ್ತು. ಆದರೆ ಸಂಬಂಧಪಟ್ಟ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ನೀರಾ ಘಟಕ ನಿಂತು ಹೋಯಿತು. ಅನಂತರ ಸರಕಾರ ಕೂಡ ಈ ಬಗ್ಗೆ ಗಮನ ಹರಿಸಲೇ ಇಲ್ಲ. 

ಒರಿಸ್ಸಾದಲ್ಲಿ ಖಾಸಗಿ ವ್ಯವಸ್ಥೆ ಅಡಿಯಲ್ಲಿ  2005ರಲ್ಲಿ ನೀರಾ ಘಟಕಕ್ಕೆ ಅನುಮತಿ ದೊರೆತಿದೆ. ತಮಿಳುನಾಡು, ಆಂಧ್ರದಲ್ಲೂ ಖಾಸಗಿ ವ್ಯವಸ್ಥೆ ನಡೆಸುತ್ತದೆ ಮತ್ತು ಕೇರಳದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಘಟಕ ಸ್ಥಾಪಿಸಲಾಗಿದೆ. ಭಾರತ, ಶ್ರೀಲಂಕಾ, ಆಫ್ರಿಕ, ಮಲೇಶಿಯಾ, ತೈಲಾಂಡ್‌, ಮ್ಯಾನ್ಮರ್‌ ದೇಶಗಳಲ್ಲಿ ಇದರ ಉತ್ಪಾದನೆ ಮತ್ತು ಬಳಕೆ ಇದೆ ಪರಂಪರಾಗತ ಪದ್ದತಿಯಲ್ಲಿದೆ. ನೀರಾ ಘಟಕ ಸರಿಯಾಗಿ ರಾಜ್ಯದಾದ್ಯಂತ ಆರಂಭವಾದರೆ ತೆಂಗಿನಕಾಯಿಗೆ ಇಂದಿನ ಬೆಲೆಯ ಹತ್ತು ಪಟ್ಟು ಉತ್ತಮ ಧಾರಣೆ ಸಿಗಬಹುದು. ಯಶಸ್ವಿ ಅನುಷ್ಠಾನದ ಬಳಿಕ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ ಎಂಬ ನಿರೀಕ್ಷೆ-ಲೆಕ್ಕಾಚಾರಗಳಿವೆ. ತೆಂಗಿನ ಕೃಷಿಗೆ ಬರುವ ನುಸಿ ಪೀಡೆ ಸಂಪೂರ್ಣ ನಿವಾರಣೆ ಆಗುತ್ತದೆ ಎಂದು ಕೂಡ ಹೇಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next