Advertisement

ಹತ್ತರ ಹರೆಯದ ಯೋಗಸಾಧಕಿಯ ಯಕ್ಷನೃತ್ಯ

01:54 AM Jul 26, 2019 | mahesh |

ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಜೂ. 30ರಂದು ಜರಗಿದ ಬ್ಯಾಂಕ್‌ ಅಧಿಕಾರಿ ಯು. ಶ್ರೀಧರ ಅವರ ಕೃತಿ ಬಿಡುಗಡೆ ಹಾಗೂ 80ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವು ಕೆಲವು ಕಾರಣಗಳಿಂದ ಸ್ಮರಣೀಯವಾಗಿ ಉಳಿಯುತ್ತದೆ. ಇಲ್ಲಿ ಮೂವರು ಸಾಧಕರಿಗೆ ಸಮ್ಮಾನ ನೆರವೇರಿತ್ತು. ಸಮ್ಮಾನ ಪಡೆದವರಲ್ಲಿ ಯೋಗ ಸಾಧಕಿ, 10ರ ಹರೆಯದಲ್ಲೇ ಕೆಲವು ವಿಶ್ವದಾಖಲೆ ಬರೆದಿರುವ ತನುಶ್ರೀ ಪಿತ್ರೋಡಿ ಅವರೂ ಇದ್ದರು. ಬಳಿಕ ತನುಶ್ರೀ ಅವರಿಂದ ಪ್ರದರ್ಶನಗೊಂಡ ಯಕ್ಷನೃತ್ಯವು ಮನಮೋಹಕವಾಗಿತ್ತು.

Advertisement

ತನುಶ್ರೀ ಯೋಗದಲ್ಲಿ ಮಹಾನ್‌ ಸಾಧನೆ ಮಾಡಿರುವ ಬಾಲೆ ಎಂಬುದು ಜನಜನಿತ. ಅವರು ಉತ್ತಮ ಯಕ್ಷಗಾನ ಕಲಾವಿದೆ ಎಂಬುದು ಮೊನ್ನೆಯ ಕಾರ್ಯಕ್ರಮದಲ್ಲಿ ಸಾಬೀತಾಯಿತು. ಅವರು ದಶಾವತಾರ ಮತ್ತು ತುಳುನಾಡಿನ ಸೊಬಗು ಮತ್ತು ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವಂಥ ಎರಡು ಯಕ್ಷ ನೃತ್ಯಗಳನ್ನು ಪ್ರದರ್ಶಿಸಿದರು.

ಆರಂಭದಲ್ಲಿ ಅವರು ದಶಾವತಾರ ನೃತ್ಯವನ್ನು ಪ್ರಸ್ತುತಪಡಿಸಿದರು. ಇದರಲ್ಲಿ ಇವರ ಚುರುಕುನಡೆ ಎದ್ದು ಕಾಣುತ್ತಿತ್ತು. ವಿಷ್ಣುವಿನ ಹತ್ತು ಅವತಾರಗಳನ್ನು ಅವರ ನಾಟ್ಯಾಭಿನಯದ ಮೂಲಕ ಪ್ರದರ್ಶಿಸಿದ ಪರಿ ಮೆಚ್ಚುವಂತಿತ್ತು. ಕ್ಷಣಕ್ಷಣಕ್ಕೂ ಬದಲಾಗುವ ಮುಖಸ್ವರೂಪವು ಅವರ ಪ್ರತಿಭೆಗೆಯನ್ನು ಸಾಬೀತು ಮಾಡುತ್ತಿತ್ತು. ಕೊನೆಗೆ ಒಂದೆರಡು ಸಾಲುಗಳ ಮೂಲಕ ಪೂರ್ತಿ ಹತ್ತು ಅವತಾರಗಳನ್ನು ಅಭಿನಯದ ಮೂಲಕ ಅತ್ಯಂತ ವೇಗದಲ್ಲಿ ತೋರಿಸಿಕೊಟ್ಟರು. ಇಲ್ಲಿ ಅವರ ಚುರುಕುತನ ಎಲ್ಲರಿಂದಲೂ ಶ್ಲಾಘಿಸಲ್ಪಟ್ಟಿತು. ಪ್ರತಿಯೊಂದು ಅವತಾರವನ್ನೂ ನಾವು ಬೇಗನೆ ಗುರುತಿಸಿ ಅರ್ಥೈಸುವಂತಿತ್ತು ಅವರ ಅಭಿನಯ ಕೌಶಲ.

ಬಳಿಕ ಪ್ರಸ್ತುತಪಡಿಸಿದ ತುಳುನಾಡಿನ ಸೊಬಗಿಗೆ ಸಂಬಂಧಿಸಿದ ಹಾಡಿನ ಯಕ್ಷನೃತ್ಯವೂ ಖುಷಿ ಕೊಟ್ಟಿತು. ಇದಕ್ಕೆ ಹಿನ್ನೆಲೆಯಲ್ಲಿ ತುಳುನಾಡಿನ ವಿಶೇಷತೆಗಳನ್ನು ಸಾರುವ ಚಿತ್ರಗಳನ್ನು ಪರದೆ ಮೂಲಕ ಪ್ರದರ್ಶಿಸಲಾಯಿತು. ಇದು ಇಡೀ ತುಳುನಾಡಿನ ಸೊಬಗನ್ನು ಕಣ್ಣಮುಂದೆ ತರುವುದಕ್ಕೆ ಸಹಕಾರಿಯಾಯಿತು. ಅದಕ್ಕೆ ಪೂರಕವಾಗಿ ಇವರ ಯಕ್ಷ ನೃತ್ಯವಿತ್ತು.

ತೆಂಕುತಿಟ್ಟಿನ ವೇಷದೊಂದಿಗೆ ಇವರು ಕಾರ್ಯಕ್ರಮ ನೀಡಿದರಾದರೂ, ಬಡಗಿನ ಮೊಣಕಾಲು ಕುಣಿತವನ್ನೂ ಪ್ರದರ್ಶಿಸುವ ಮೂಲಕ ತಾನು ಎರಡೂ ತಿಟ್ಟುಗಳಿಗೆ ಒಗ್ಗುವ ಕಲಾವಿದೆ ಎಂಬುದನ್ನು ತೋರಿಸಿಕೊಟ್ಟರು. ಮೊಣಕಾಲು ಕುಣಿತದಲ್ಲಿ ಅವರು ತೋರಿದ್ದ ಚುರುಕುತನವೂ ಭರ್ಜರಿ ಚಪ್ಪಾಳೆ ಗಿಟ್ಟಿಸಿತು.

Advertisement

ಎರಡೂ ನೃತ್ಯಗಳ ಕೊನೆಯಲ್ಲಿ ಯೋಗಶೈಲಿಯಲ್ಲಿ ಇಡೀ ದೇಹವನ್ನು ಉಲಾr ಬಾಗಿಸಿ ಮಾಡಿರುವ ನಮಸ್ಕಾರವು ಬೆರಗುಗೊಳಿಸಿತು. ಕಾರ್ಯಕ್ರಮದಲ್ಲಿ ಹಾಡಿಗೆ ಧ್ವನಿಮುದ್ರಿಕೆ ಬಳಸಲಾಗಿತ್ತು. ಹಿನ್ನೆಲೆ ಕಲಾವಿದರ ಉಪಸ್ಥಿತಿಯಲ್ಲಿಯೇ ಈ ಕಾರ್ಯಕ್ರಮ ನೀಡುತ್ತಿದ್ದರೆ ಉತ್ತಮವಿತ್ತು. ಆದರೂ ಇವರ ಯಕ್ಷನಾಟ್ಯಾಭಿನಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರು ಮತ್ತೂ ಎರಡು ಯಕ್ಷನೃತ್ಯ ಮಾಡುವವರಿದ್ದರು ಮತ್ತು ಸಮಯಾಭಾವದಿಂದ ಅದು ಸಾಧ್ಯವಾಗಲಿಲ್ಲ ಎಂದು ಶ್ರೀಧರ್‌ ಅವರು ತಿಳಿಸಿದ್ದಾರೆ. ಮತ್ತೆರಡು ನೃತ್ಯ ಮಾಡುತ್ತಿದ್ದರೆ ಒಳ್ಳೆಯದಿತ್ತು ಎಂದು ಅನಿಸದಿರಲಿಲ್ಲ.

ಯಕ್ಷನಾಟ್ಯದ ಬಳಿಕ ಅವರಿಂದ ಸುಮಾರು 5 ನಿಮಿಷಗಳ ಕಾಲ ಯೋಗ ಪ್ರದರ್ಶನವೂ ಇತ್ತು. ಕೇವಲ 5 ನಿಮಿಷಗಳ ಅವಧಿಯಲ್ಲಿ ಅವರು ಹಲವಾರು ಆಸನಗಳನ್ನು ಮಾಡುವ ಮೂಲಕ ನೆರೆದವರು ನಿಬ್ಬೆರಗಾಗುವಂತೆ ಮಾಡಿದರು. ಈ ಕಾರ್ಯಕ್ರಮದಲ್ಲಿ ತನುಶ್ರೀ ಅವರಿಂದ ಯೋಗ ಮತ್ತು ಯಕ್ಷನೃತ್ಯವೆರಡನ್ನೂ ಮಾಡಿಸುವ ಮೂಲಕ ಶ್ರೀಧರ್‌ ಅವರು ತನ್ನ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next