ವಯನಾಡ್: 167 ಜನರ ಸಾವಿಗೆ ಕಾರಣವಾದ ವಯನಾಡಿನ ಮೇಪ್ಪಾಡಿ, ಚೂರಲ್ಮಲ ಮತ್ತು ಮುಂಡಕೈ ಭೂಕುಸಿತವು ಕೇರಳದ ಇತಿಹಾಸದಲ್ಲೇ ಅತಿದೊಡ್ಡ ದುರಂತ ಎನಿಸಿ ಕೊಂಡಿದೆ.
ಒಂದೇ ಭೂಕುಸಿತ ಘಟನೆಯಲ್ಲಿ ಇಷ್ಟೊಂದು ಜನ ಮೃತಪಟ್ಟ ಘಟನೆ ಕೇರಳದಲ್ಲಿ ಈ ಹಿಂದೆ ಸಂಭವಿಸಿರಲಿಲ್ಲ. ಇಲ್ಲಿ ಇನ್ನೂ 191 ಮಂದಿ ನಾಪತ್ತೆಯಾಗಿದ್ದಾರೆ.
ಕೇರಳದ ಭೂಕುಸಿತಗಳ ಪಟ್ಟಿಯಲ್ಲಿ 2020 ರಲ್ಲಿ ಸಂಭವಿಸಿದ ಭೂಕುಸಿತ ಅತಿ ಹೆಚ್ಚು ಜೀವ ಬಲಿ ಪಡೆದ ಘಟನೆ ಎನ್ನಲಾಗಿತ್ತು. 2020ರ ಆ. 6ರಂದು ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿ, ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೇ ಶನ್‌ನ 66 ಕಾರ್ಮಿಕರು ಸಮಾಧಿಯಾಗಿದ್ದರು. ಭಾರೀ ಮಳೆಯಿಂದಾಗಿ ಇರವಿಕುಲಂ ರಾಷ್ಟ್ರೀಯ ಉದ್ಯಾನದ ಗಡಿಯಲ್ಲಿದ್ದ ಭಾರೀ ಬಂಡೆ ಪೆಟ್ಟಿಮುಡಿ ನದಿಯಲ್ಲಿ ಉರುಳಿ ಬಿದ್ದು, ಸಂಭವಿಸಿದ ಭೂಕುಸಿತದಿಂದ ಕಾರ್ಮಿಕರು ವಾಸವಿದ್ದ ಮನೆಗಳು 2 ಕಿ.ಮೀ. ವರೆಗೂ ಕೊಚ್ಚಿ ಹೋಗಿದ್ದವು!
ಎಲ್ಲರೂ ಗಾಢನಿದ್ರೆ ಯಲ್ಲಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಉಂಟಾಗಿತ್ತು.ಪೆಟ್ಟಿಮುಡಿ, ಅಂಬೂರಿ ಭೂಕುಸಿತ ಹೊರತುಪಡಿಸಿದರೆ ಮಂಗಳವಾರ ರಾತ್ರಿ ಸಂಭವಿಸಿದ ವಯನಾಡು ಭೂಕುಸಿತದಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗರಿಷ್ಠ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಹಾಗಾಗಿ ಇದು ಕೇರಳದ ಅತಿದೊಡ್ಡ ಭೂಕುಸಿತ ದುರಂತ ಎನ್ನಲಾಗುತ್ತಿದೆ. ಕೇರಳದಲ್ಲಿ 1881ರಲ್ಲಿ ಮೊದಲ ಬಾರಿಗೆ ಪ್ರವಾಹ ಉಂಟಾದ ದಾಖಲೆ ಇದೆ. 1882ರ ಅ. 4ರಂದು ಕೊಟ್ಟಾಯಂ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತವೂ ಕೇರಳದ ಮೊದಲ ಭೂಕುಸಿತ ಎನ್ನಲಾಗುತ್ತಿದೆ.
ಅಂಬೂರಿ ಭೂಕುಸಿತ
2001 ಸೆಪ್ಟಂಬರ್ 11ರಂದು ಸಂಭವಿಸಿದ ಅಂಬೂರಿ ಭೂಕುಸಿತ ದಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದರು. ತಿರುವನಂತಪುರ ಜಿಲ್ಲೆಯ ಅಂಬೂರಿಯಲ್ಲಿ ಗುಡ್ಡದ ತುದಿ ಕುಸಿದು, 39 ಜನರು ಗಾಯಗೊಂಡಿದ್ದರು.
167 ಸಾವು, 191 ಮಂದಿ ನಾಪತ್ತೆ
ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಭೂಕುಸಿತದಲ್ಲಿ ಅಸುನೀಗಿದವರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ, 191 ಮಂದಿಯ ಪತ್ತೆ ಇನ್ನೂ ಆಗಿಲ್ಲ. 2 ದಿನಗಳ ಕಾರ್ಯಾಚರಣೆಯಲ್ಲಿ 5,500 ಮಂದಿಯನ್ನು ರಕ್ಷಿಸಲಾಗಿದೆ ಎಂದರು.
ಭೂಸೇನೆ, ಭಾರತೀಯ ವಾಯು ಪಡೆ, ಭಾರತೀಯ ನೌಕಾಪಡೆ, ಎನ್‌ಡಿಆರ್‌ಎಫ್ನ 1200ಕ್ಕೂ ಅಧಿಕ ಸಿಬಂದಿ-ಅಧಿಕಾರಿಗಳು ಚೂರಲ್ಮಲ, ಮೇಪ್ಪಾಡಿ, ನೂಲ್‌ಪುಳ, ಮುಂಡಕೈಗಳಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. 1,000ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ.