ಬೀದರ: ಕರ್ನಾಟಕ ಜಾನಪದ ಅಕಾಡೆಮಿ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಾದೇಶಿಕ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ರಾಷ್ಟ್ರಕವಿ ಕುವೆಂಪು ಜಯಂತಿ ನಿಮಿತ್ತ ವಿಶ್ವಮಾನವ ದಿನ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಕುವೆಂಪು ಅವರು ರಚಿಸಿದ ಅನೇಕ ಮೌಲಿಕ ಕೃತಿಗಳಲ್ಲಿ ಮುಖ್ಯವಾಗಿ ವಿಶ್ವಮಾನವ ಸಂದೇಶ ಸಿಗುತ್ತದೆ. ಈ ಕಾರಣದಿಂದಲೇ ಅವರ ಅನೇಕ ಪದ್ಯಗಳು ಸಿನಿಮಾ ಹಾಡುಗಳಾಗಿವೆ. ಕಾದಂಬರಿಗಳು ಕೂಡ ಸಿನಿಮಾಗಳಾಗಿವೆ ಎಂದರು.
ಬುದ್ಧ, ಬಸವ, ಅಂಬೇಡ್ಕರರಂತಹ ವಿಭೂತಿ ಪುರುಷರು ಹೊಂದಿದ್ದ ಜೀವಪರ ಆದರ್ಶ ಗುಣಗಳನ್ನು ನಾವು ಕುವೆಂಪು ಅವರಲ್ಲಿ ಕಾಣಬಹುದಾಗಿದೆ. ಇಂತಹ ಮಹಾನ್ ಮಾನವತಾವಾದಿ ಕುವೆಂಪು ಅವರ ಕೃತಿಗಳನ್ನು ಮಕ್ಕಳಿಗೆ ಓದಲು ಹೇಳಬೇಕಿದೆ ಎಂದರು.
ಮನುಷ್ಯ ಜಾತಿಯಿಂದ ಮುಖ್ಯವಾಗಬಾರದು. ನಡೆ-ನುಡಿಯಿಂದ ಮುಖ್ಯವಾಗಬೇಕು. ಮನುಷ್ಯನಿಗೆ ಸಮಷ್ಠಿ ಪ್ರಜ್ಞೆ, ಸಂಸ್ಕಾರ ಹಾಗೂ ಸಂಪನ್ನತೆ ಬಹಳ ಮುಖ್ಯ. ಮನುಷ್ಯನು ತನ್ನ ನಡತೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು ಎನ್ನುವಂತಹ ಅನೇಕ ಸಂದೇಶಗಳನ್ನು ಕುವೆಂಪು ಅವರು ಈ ಸಮಾಜಕ್ಕೆ ನೀಡಿದ್ದಾರೆ ಎಂದರು.
ವಾರ್ತಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರು ಬರಿ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ ಇದ್ದಂತೆ. ನಮ್ಮದು ಮನುಜಮತವಾಗಬೇಕು. ವಿಶ್ವಪಥವಾಗಬೇಕು. ಮನುಷ್ಯ ವಿಶ್ವಮಾನವನಾಗಬೇಕು ಎನ್ನುವ ಅವರ ಸಂದೇಶ ನಿಜಕ್ಕೂ ಮಹತ್ವದ್ದು. ಇದನ್ನು ಪ್ರತಿಯೊಬ್ಬರು ಅರಿಯುವಂತಾಗಬೇಕು ಎಂದು ಹೇಳಿದರು.
ಇದೇ ವೇಳೆ ಭಾಲ್ಕಿಯ ವೀರಣ್ಣ ಅವರು ಕುವೆಂಪು ಅವರ ಪದ್ಯ ಹಾಡಿದರು. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಸಾಕ್ಷರತಾ ತಾಲೂಕು ಸಂಯೋಜನಾಧಿಕಾರಿ ವೆಂಕಟರಾವ್ ಬಿ. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ ಇದ್ದರು.