Advertisement

ಕುವೆಂಪು ವೈಚಾರಿಕ ಮೌಲ್ಯಗಳು ಸರ್ವಕಾಲಿಕ

11:11 AM Dec 31, 2022 | Team Udayavani |

ಚನ್ನಪಟ್ಟಣ: ಸಮಾಜದಲ್ಲಿ ಅಸಹಿಷ್ಣುತೆ, ಕೋಮುಗಲಭೆ, ಮತೀಯ ಸಂಘರ್ಷಗಳು ಹೊಗೆಯಾಡುತ್ತಿರುವ ಇಂದಿನ ದಿನಗಳಲ್ಲಿ ಕುವೆಂಪು ಅವರ ಸಾಹಿತ್ಯದ ವೈಚಾರಿಕ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಬಣ್ಣಿಸಿದರು.

Advertisement

ಇಲ್ಲಿನ ಸಾರ್ವಜನಿಕ ವಿದ್ಯಾ ಸಂಸ್ಥೆಯ ಐಟಿಐ ಕಾಲೇಜಿನಲ್ಲಿ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಸಋಷಿ ಕುವೆಂಪು ಅವರ 118ನೇ ಜಯಂತ್ಯುತ್ಸವದಲ್ಲಿ ಹಿರಿಯ ಕನ್ನಡದ ಕಟ್ಟಾಳು ಸಿಂ.ಲಿಂ.ನಾಗರಾಜು ಅವರ ಸ್ಮರಣೆ, ಅನಿಕೇತನ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರು ಕುಪ್ಪಳ್ಳಿಯಲ್ಲಿ ಹುಟ್ಟಿ, ಮೈಸೂರಲ್ಲಿ ಬೆಳೆದು, ರಾಜ್ಯ, ರಾಷ್ಟ್ರ ಮಾತ್ರವಲ್ಲ, ಇಡೀ ವಿಶ್ವಕ್ಕೆ ಕನ್ನಡ ಸಾಹಿತ್ಯವನ್ನು ವಿಸ್ತರಿಸಿ ಇತಿ ಹಾಸದ ದಿಗ್ಗಜರ ಪಾಲಿಗೆ ಸೇರಿದರು. ಕನ್ನಡ ಅಕ್ಷರ ಲೋಕದ ನವ ಸಾಹಿತ್ಯವನ್ನು ಮೇರು ಶಿಖರಕ್ಕೆ ಏರಿಸಿದ ಮಹಾನ್‌ ಚೇತನ. ಅವರ ಬದುಕಿನ ಆಚಾರ, ವಿಚಾರಗಳು, ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ದಾರಿ ದೀಪವಾಗಬೇಕು ಎಂದರು.

ಸಿಂ.ಲಿಂ. ನಾಗರಾಜು ಸ್ಮರಣೆ: ಆಗಲಿದ ಹಿರಿಯ ಕನ್ನಡದ ಕಟ್ಟಾಳು ಸಿಂ.ಲಿಂ. ನಾಗರಾಜುರವರನ್ನು ಸ್ಮರಿಸಿ ಮಾತನಾಡಿದ ಪ್ರಗತಿಪರ ಚಿಂತಕ ರಾಂಪುರ ಧರಣೀಶ್‌, ಕಲೆ, ಸಾಹಿತ್ಯ, ಸಹಕಾರ, ಶಿಕ್ಷಣ, ರಾಜಕೀಯ, ಕೃಷಿ, ಪತ್ರಿಕೋದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾಗರಾಜು ಅವರು ಸಮಾಜಮುಖೀಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಬದುಕು ಬದಲಿಸಿದ ಕುವೆಂಪು ಪ್ರಭಾವ: ಅನಿಕೇತನ ಪ್ರಶಸ್ತಿಯನ್ನು ಸ್ವೀಕರಿಸಿದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಶಿವರಾಮೇಗೌಡ ನಾಗವಾರ ಮಾತನಾಡಿ, ವಿದ್ಯಾಭ್ಯಾಸ ಮತ್ತು ಉದ್ಯೋಗದ ಪ್ರಾರಂಭದ ದಿನಗಳಲ್ಲಿ ಕುವೆಂಪು ಅವರ ಒಡನಾಡಿಯಾಗಿದ್ದ ನನ್ನ ಬದುಕಿನಲ್ಲಿ ಅವರ ತತ್ವದರ್ಶ ಸ್ವಲ್ಪಮಟ್ಟಿ ಗಾದರೂ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂಬ ಸಂತೃಪ್ತಿ ಇದೆ ಎಂದರು.

ಭಾರತ ವಿಕಾಸ ಪರಿಷತ್‌ ಕಣ್ವ ಶಾಖೆ ಅಧ್ಯಕ್ಷ ವಸಂತಕುಮಾರ್‌, ಒಕ್ಕಲಿಗರ ಸಾರ್ವಜನಿಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಚನ್ನಪ್ಪ( ಸಿ.ಸಿ), ಖಜಾಂಚಿ ನಾರಾಯಣಗೌಡ, ನಿರ್ದೇಶಕರಾದ ನಾಗವಾರ ಶಂಭುಗೌಡ, ರಂಗಸ್ವಾಮಿ, ಸಾಹಿತಿ ವಿಜಯ ರಾಂಪುರ,ಪ್ರಾಂಶುಪಾಲರಾದ ಶಿವರಾಮ ಭಂಡಾರಿ, ಉಪ ಪ್ರಾಂಶುಪಾಲ ಕುಮಾರ್‌, ನಿವೃತ್ತ ಉಪಪ್ರಾಂಶುಪಾಲ ರಂಗಸ್ವಾಮಿ, ಸಾರ್ವಜನಿಕ ಐಟಿಐ ಕಾಲೇಜಿನ ಪ್ರಾಂಶುಪಾಲ ರಮೇಶ್‌, ಉಮೇಶ್‌, ಕಾಡಯ್ಯ, ನೌಕರ ಸಂಘಟನೆ ಉಪಾಧ್ಯಕ್ಷ ಬೆಟ್ಟಯ್ಯ, ಗುರು ಮಾದಯ್ಯ, ಕೆಂಗಲ್‌ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್‌ ಅಧ್ಯಕ್ಷರಾದ ಚಕ್ಕೆರೆ ವಿಜೇಂದ್ರ, ಶಿಕ್ಷಕರಾದ ದೇವ ರಾಜು, ದಿನೇಶ್‌, ನಾಗವಾರ ಕುಮಾರ್‌, ಮಾಕಳಿ ಶಿವಕುಮಾರ್‌, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ರಾಮ ಣ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

ಕವಿಗಳಾದ ಕೂರಣಗರೆ ಕೃಷ್ಣಪ್ಪ, ಎಲೆಕೆರೆ ರಾಜಶೇಖರ್‌, ವರದರಾಜು, ರಾಘವೇಂದ್ರ ಮಯ್ಯ, ಅಬ್ಬೂರು ಶ್ರೀನಿವಾಸ್‌, ಯೋಗೇಶ್‌ ದ್ಯಾವಪಟ್ಟಣ ಕವಿತೆ ವಾಚಿಸಿದರು .ಡಿ.ಪಿ. ಪುಟ್ಟಸ್ವಾಮಿ (ಡಿಪಿಎಸ್‌), ಕುಂತೂರ್‌ ದೊಡ್ಡಿ ಕುಮಾರ್‌, ಕರಿಸಿದ್ದಪ್ಪ, ಗೋವಿಂದಳ್ಳಿ ಶಿವಣ್ಣ, ಶ್ರೀಮತಿ ಚಂದ್ರಿಕಾ, ಸುಣ್ಣಘಟ್ಟ ಗಂಗಾಧರ್‌, ಚಕ್ಕೆರೆ ಸಿದ್ದರಾಜು ಬಾಣಂತಳ್ಳಿ ಪ್ರಕಾಶ್‌ ಮೊದಲಾದವರು ಕುವೆಂಪು ವಿರಚಿತ ಗೀತೆಗಳನ್ನು ಹಾಡಿ ಗೀತಗಾಯನ ನಡೆಸಿಕೊಟ್ಟರು.

ಇದೇ ವೇಳೆ ಹಿರಿಯ ಸಾಹಿತಿ ಶಿವರಾಮೇ ಗೌಡ ನಾಗವಾರ ಅವರಿಗೆ ಅನಿಕೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುವೆಂಪು ಆದರ್ಶ ಅಳವಡಿಸಿಕೊಳ್ಳಿ : ನನ್ನನ್ನು ಗುರುತಿಸಿ ಅನಿಕೇತನ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಸಂತೋಷದವಾಗಿದ್ದು, ಮಹಾಕವಿಯಾಗಿ, ದಾರ್ಶನಿಕರಾಗಿ, ಶಿಕ್ಷಣ ತಜ್ಞರಾಗಿ ವಿವಿಧ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ರಾಷ್ಟ್ರಕವಿ ಕುವೆಂಪು ಅವರು ಮನುಜಮತ ವಿಶ್ವಪಥ ಎಂಬ ಘೋಷಣೆ ಮೂಲಕ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದರು. ಅವರ ಆದರ್ಶ ಬದುಕನ್ನು ಅನುಸರಿಸುವುದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದು ಸಾಹಿತಿ ಶಿವರಾಮೇಗೌಡ ನಾಗವಾರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next