Advertisement

UV Fusion: ಮೃಗಗಳ ಜಗತ್ತು

06:00 PM Oct 04, 2024 | Team Udayavani |

ಈ ಪ್ರಪಂಚದಲ್ಲಿ ಏನಾಗುತ್ತಿದೆ? ಎತ್ತ ಸಾಗುತ್ತಿದೆ ಈ ಜಗತ್ತು? ಎಲ್ಲಿ ನೋಡಿದರೂ ಅತ್ಯಾಚಾರ, ಕೊಲೆ, ಮತ್ತೂಂದು ಮಗದೊಂದು. ಇದಕ್ಕೆಲ್ಲ ಅಂತ್ಯವೇ ಇಲ್ಲವಾಗಿದೆ. ಸ್ವಾತಂತ್ರ್ಯ ಸಿಕ್ಕಿ 78 ವರ್ಷವಾದರೂ ಹೆಣ್ಣು ಮಕ್ಕಳಿಗೆ ಇನ್ನೂ ಸ್ವಾತಂತ್ರ್ಯ ಲಭಿಸಿಲ್ಲ. ಹೆಣ್ಣು ಮಕ್ಕಳು ರಾತ್ರಿ ಹೊತ್ತು ಹೊರಗೆ ಕಾಲಿಡಳಾಗದ ಭಯದ ವಾತಾವರಣ ಸೃಷ್ಟಿಯಾಗಿದೆ. ಎಲ್ಲಿ ಕಾಮುಕ ವ್ಯಾಘ್ರಗಳು ಕಾದುಕೊಂಡು ಕುಳಿತಿರುತ್ತಾರೆ ಎಂಬ ಭಯ ಹೆಣ್ಣು ಮಕ್ಕಳಲ್ಲಿ ಇಂದಿಗೂ ಇದೆ.

Advertisement

ಹೆಣ್ಣು ಮಗುವೊಂದು ರಾತ್ರೋರಾತ್ರಿ ಕಣ್ಮರೆಯಾಗುತ್ತಾಳೆ. ಆಕೆಯ ಅಪ್ಪ ಅಮ್ಮ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಒಂದು ದಿನದ ಅನಂತರ ಆ ಹೆಣ್ಣು ಮಗಳು ರೈಲು ಪಟ್ಟಿಯ ಮೇಲೋ, ಇಲ್ಲವೇ ಕಸದ ತೊಟ್ಟಿಯಲ್ಲೋ ಅತ್ಯಾಚಾರವಾಗಿ, ಕೊಲೆಯಾಗಿ ಬಿದ್ದಿರುತ್ತಾಳೆ. ಇದನ್ನು ನೋಡಿದ ಹೆತ್ತ ಜೀವಗಳಿಗೆ ಎಷ್ಟು ನೋವು, ಸಂಕಟ ಆಗಿರಬೇಡ. ಯಾರೋ ಮಾಡಿದ ತಪ್ಪಿನಿಂದಾಗಿ ಇನ್ಯಾರೋ ಬಲಿಯಾದರು. ಇದು ಈ ಸಮಾಜದ ಪರಿಸ್ಥಿತಿ. ಇಂತಹ ಸಾವಿರಾರು ಪ್ರಕರಣಗಳು ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಲೇ ಇದೆ.

ಇತ್ತೀಚಿಗೆ ಕೋಲ್ಕತಾದಲ್ಲಿ ನಡೆದ ಪ್ರಕರಣವನ್ನು ನೆನಪಿಸಿಕೊಂಡರೆ ಕರುಳು ಹಿಸಿಕಿದಂತಾಗುತ್ತದೆ. ಎಂತಹ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವ ಪ್ರಶ್ನೆ ಮೂಡುವುದಂತು ಖಂಡಿತ. ಒಬ್ಬ ಮಹಿಳಾ ವಿದ್ಯಾರ್ಥಿಯನ್ನು ಚಿತ್ರಹಿಂಸೆ ಕೊಟ್ಟು ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾರೆ.

ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ದೇವರಿಗಿಂತ ಜಾಸ್ತಿ ವೈದ್ಯರು ನಮ್ಮನ್ನು ಬದುಕಿಸುತ್ತಾರೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುತ್ತೇವೆ. ಅಂತಹ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಂದಿದ್ದಾರೆ. ಇಂತಹ ಪಾಪಿಗಳು ಇನ್ನೂ ಈ ಪ್ರಪಂಚದಲ್ಲಿ ತಮ್ಮ ಅಟ್ಟಹಾಸವನ್ನು ಮೆರೆಯುತ್ತಲೇ ಇದ್ದಾರೆ.

ಇದು ಒಬ್ಬ ವೈದ್ಯೆಯ ಕಥೆಯಲ್ಲ. ಪ್ರಪಂಚದಲ್ಲಿ ಇಂತಹ ಕಾಮುಕ ವ್ಯಾಘ್ರಗಳ ಕಾಮುಕ ಕಣ್ಣಿಗೆ ಗುರಿಯಾಗಿರುವ ಎಷ್ಟೋ ಹೆಣ್ಣುಮಕ್ಕಳ ಕಣ್ಣೀರ ವ್ಯಥೆ. ಇನ್ನು ಭವಿಷ್ಯವನ್ನೇ ನೋಡದಂತ ಪುಟ್ಟ ಹೆಣ್ಣು ಮಕ್ಕಳ ಮೇಲೆ ಇಂತಹ ಪಾಪಿಗಳು ಕ್ರೂರವಾಗಿ ಅತ್ಯಾಚಾರ, ಕೂಲೆ ಮಾಡಿ ಎಲ್ಲೆಲ್ಲೋ ಕಸದ ತೊಟ್ಟಿಯ ಹಾಗೆ ಬಿಸಾಕಿ ಬಿಡುತ್ತಾರೆ.

Advertisement

ಈ ಪುಟ್ಟ ಕಂದಮ್ಮ ಇಂತಹ ಪಾಪಿಗಳ ಕ್ರೂರವರ್ತನೆಗೆ ಎಷ್ಟು ನೋವನ್ನು ಪಟ್ಟಿರಬೇಡ. ಅತ್ಯಾಚಾರ ಎಸಗಿದ ಪಾಪಿ ಆ ಮಗುವಿಗೆ ತಂದೆಯ ಸಮಾನ ಅಥವಾ ಅಣ್ಣನ ಸಮಾನ ವಾಗಿರಬಹುದು. ಆದರೆ ಆ ಪಾಪಿ ಅದನ್ನೆಲ್ಲಾ ಬಿಟ್ಟು ಕ್ರೂರ ಪ್ರಾಣಿಯಂತೆ ವರ್ತಿಸಿ ಆ ಮಗುವನ್ನು ಕೊಂದು ಹಾಕಿಬಿಡುತ್ತಾನೆ. ಇಂತಹ ಕೃತ್ಯವನ್ನು ಆ ಚಿಕ್ಕ ಹೆಣ್ಣು ಮಗುವಿನ ಮೇಲೆ ತೋರಿಸಲು ನಾಚಿಕೆಯಾಗಬೇಕು. ಸಮಾಜದಲ್ಲಿ ಇಂತಹ ಕೆಟ್ಟ ಕ್ರಿಮಿಗಳು ಕಸ ಕಡ್ಡಿಗಳ ತರಹ ಅಲ್ಲಲ್ಲಿ ಉಳಿದು ಬಿಟ್ಟಿವೆ. ಇಂತಹ ಕ್ರಿಮಿಗಳಿಂದ ಹೆಣ್ಣು ಮಕ್ಕಳಿಗೆ ಬದುಕಲು ಕಷ್ಟ ಸಾಧ್ಯವಾಗುತ್ತಿದೆ. ಇಂತಹ ಕ್ರಿಮಿಗಳ ಮಧ್ಯೆ ನಾವು ಬದುಕುತ್ತಿರುವುದು ತುಂಬಾ ದುಃ ಖಕರವಾದ ಸಂಗತಿಯೇ ಸರಿ.

ಸದ್ಯ ಎಲ್ಲಿ ಇಂತಹ ಪಾಪಿಗಳು ಪ್ರಪಂಚಾದ್ಯಂತ ತಮ್ಮ ಅಟ್ಟಹಾಸವನ್ನು ಮೆರೆಯಬಹುದು ಎಂಬ ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಕ್ರಿಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಎಷ್ಟೋ ಹೆಣ್ಣು ಮಕ್ಕಳ ಸಾವಿಗೆ ನ್ಯಾಯ ಸಿಗಬೇಕು. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ.

 ಮೌಲ್ಯ ಶೆಟ್ಟಿ

ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next