Advertisement

ವಿಶ್ವ ಕನ್ನಡ ಸಮ್ಮೇಳನಕ್ಕೆ ಸರ್ಕಾರಕ್ಕಿಲ್ಲ ಸಮಯ

06:10 AM Jan 23, 2018 | |

ಬೆಂಗಳೂರು: ಚುನಾವಣೆಗೆ ಕನ್ನಡದ ಅಸ್ಮಿತೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ರಾಜ್ಯಕ್ಕೆ ಪ್ರತ್ಯೇಕ ಕನ್ನಡ
ಧ್ವಜ ಹಾಗೂ ಮೆಟ್ರೋದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಮಯ ಸಿಗದೇ ಇದ್ದಿದ್ದು ಮಾತ್ರ ವಿಪರ್ಯಾಸ. 

Advertisement

ಈ ಸರ್ಕಾರದ ಅವಧಿಯಲ್ಲಿ ಸಮ್ಮೇಳನ ನಡೆಯುವುದು ಅನುಮಾನ ಎಂಬ ಮಾತು ಕೇಳಿ ಬರುತ್ತಿದೆ. ತಮ್ಮ ಅವಧಿಯಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೇ ಈ ಕುರಿತು ತಾವೇ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದರು. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಮಾಡಲು ನಿರ್ಧರಿಸಿ ಅದಕ್ಕಾಗಿ 30 ಕೋಟಿ ರೂ. ಮೀಸಲಿಟ್ಟಿದ್ದರು.

ಬರದ ಕಾರಣ ಮುಂದೂಡಿಕೆ: ರಾಜ್ಯ ಸರ್ಕಾರ ಇಚ್ಛಿಸಿದಂತೆ 2017 ರ ಜೂನ್‌ನಲ್ಲೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸತತ ಬರಗಾಲ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಾಹಿತಿಗಳು ವಿಶ್ವ ಕನ್ನಡ ಸಮ್ಮೇಳನ ಮುಂದೂಡುವಂತೆ ಮನವಿಮಾಡಿಕೊಂಡಿದ್ದರು. ಅದರಂತೆ 2017ರ ಡಿಸೆಂಬರ್‌ನಲ್ಲಿ ಸಮ್ಮೇಳನ ಮಾಡಲು ಸರ್ಕಾರ ನಿರ್ಧರಿಸಿತ್ತು.

ಆದರೆ, ಡಿಸೆಂಬರ್‌ ಕಳೆದು ಜನವರಿ ಬಂದರೂ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಆಲೋಚನೆ ನಡೆಸಿಲ್ಲ. ಸಮ್ಮೇಳನ ನಡೆಸುವ ಕುರಿತಂತೆ ಚರ್ಚಿಸಲು ಅಧಿಕಾರಿಗಳು ಮುಖ್ಯಮಂತ್ರಿಗೆ ಎರಡು ಬಾರಿ ಸಮಯ ಕೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಂಭ್ರಮದ ರಾಜ್ಯ ಪ್ರವಾಸಕ್ಕೆ ತೆರಳಿದ್ದರಿಂದ ಸಭೆ ನಡೆಸಲು ಸಮಯ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಮುಖ್ಯಮಂತ್ರಿ ಈಗಾಗಲೇ ಬಜೆಟ್‌ ಪೂರ್ವ ಭಾವಿ ಸಭೆಗಳನ್ನು ನಡೆಸುತ್ತಿದ್ದು, ಈ ತಿಂಗಳಾಂತ್ಯದ ವರೆಗೂ ಬಜೆಟ್‌ ಪೂರ್ವಭಾವಿ ಸಭೆ ನಡೆಯಲಿವೆ. ಅಲ್ಲದೇ ಫೆಬ್ರವರಿಯಲ್ಲಿ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನ ನಡೆಯು ವುದರಿಂದ ಮುಂದಿನ ತಿಂಗಳೂ ವಿಶ್ವ ಕನ್ನಡ ಸಮ್ಮೇಳನದ ಕುರಿತು ಯಾವುದೇ ತೀರ್ಮಾನ ಆಗುವುದು ಅನುಮಾನ.

Advertisement

ಆರು ತಿಂಗಳು ಬೇಕು: ಏಪ್ರಿಲ್‌ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಮಾರ್ಚ್‌ ಎರಡನೇ ವಾರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಸರ್ಕಾರದ
ಅವಧಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಆಗುವುದಿಲ್ಲ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯ ಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ಮಾಡಬೇಕೆಂದು ಕೊಂಡರೂ ಈಗಿರುವ ಅಲ್ಪ ಸಮಯದಲ್ಲಿ ಸಿದಟಛಿತೆ ಮಾಡುವುದು ಕಷ್ಟ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳು ತಿಳಿಸಿವೆ.

ವಿಶ್ವ ಕನ್ನಡ ಸಮ್ಮೇಳನಕ್ಕೆ ಸಾಹಿತ್ಯ, ಸಾಂಸ್ಕೃತಿಕ,ಊಟ, ವಸತಿ ಹೀಗೆ ಅನೇಕ ಸಮಿತಿಗಳ ರಚನೆ ಮಾಡಬೇಕಾಗುತ್ತದೆ. ವಿಶ್ವದಲ್ಲಿರುವ ಎಲ್ಲ ಕನ್ನಡಿಗರ ನ್ನೂ ಅಧಿಕೃತವಾಗಿ ಆಹ್ವಾನ ಮಾಡಬೇಕಾಗುತ್ತದೆ. ಹೀಗಾಗಿ ಸಮ್ಮೇಳನದ ಸಿದಟಛಿತೆಗೆ ಕನಿಷ್ಠ ಆರು ತಿಂಗಳು ಸಮಯ ಬೇಕಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ನಿರ್ಧಾರ ಮಾಡಿದವರು ಸಮ್ಮೇಳನ ನಡೆಸಿಲ್ಲ: ರಾಜ್ಯ ದಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕೆಂದು 1985ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಲೋಚನೆ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ಅವರ ಅವಧಿಯಲ್ಲಿ ನಡೆಸಲಾಗದೇ ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಅವರ ಅವಧಿಯಲ್ಲಿ ಮೈಸೂರಿನಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆಯಿತು.

ನಂತರ 2ನೇ ವಿಶ್ವ ಕನ್ನಡ ಸಮ್ಮೇಳನ ಮಾಡಬೇಕೆಂದು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ತೀರ್ಮಾನ ಮಾಡಿದ್ದರು.

ಆದರೆ, ಕೆಲವು ರಾಜಕೀಯ ಬೆಳವಣಿಗೆ ನಡೆದ ಹಿನ್ನೆಲೆಯಲ್ಲಿ ಅವರ ಅವಧಿಯಲ್ಲಿ ನಡೆಯಲಿಲ್ಲ. ಮುಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ 2011ರಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಿದರು. ಆ ನಂತರ ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕನ್ನಡ ಸಮ್ಮೇಳನ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಅದರಂತೆ ಸಿದ್ದರಾಮಯ್ಯ ಕೂಡ ತಮ್ಮ ಅವಧಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಮಾಡುವ ಆಲೋಚನೆ ಮಾಡಿದ್ದರು. ಆದರೆ, ಚುನಾವಣೆ ಹತ್ತಿರ ಇರುವುದರಿಂದ ಅವರ ಅವಧಿಯಲ್ಲಿ ನಡೆಸುವುದು ಕಷ್ಟ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next