Advertisement

ಸಮಯಕ್ಕೆ ಬೆಲೆ ಕೊಟ್ಟವರನ್ನು ಜಗತ್ತೇ ಗುರುತಿಸುತ್ತದೆ: ಸೂಲಿಬೆಲೆ

05:55 PM Dec 27, 2023 | Nagendra Trasi |

ವಿಜಯಪುರ: ಸಮಯ ಪರಿಪಾಲನೆ ಮಾಡುವ, ಸಮಯಕ್ಕೆ ಬೆಲೆ ಕೊಡುವವರನ್ನು ಜಗತ್ತೇ ಗುರುತಿಸುವ ಸಮಯ ಬರುತ್ತದೆಂದು ಸಿದ್ಧೇಶ್ವರ ಶ್ರೀಗಳು ಸದಾ ಹೇಳುತ್ತಿದ್ದರು. ಶ್ರೀಗಳು ಸಾನ್ನಿಧ್ಯ ವಹಿಸಿದ್ದಾರೆ ಎಂದರೆ ಶಾಂತಿ ಹುಡುಕುವ ಅಗತ್ಯವೇ ಇಲ್ಲದಂತೆ ಸಹಜ ಪ್ರಶಾಂತ ವಾತಾವರಣ ತಾನೇ ತಾನಾಗಿ ರೂಪುಗೊಳ್ಳುತ್ತಿತ್ತು. ಅದು ಸಿದ್ಧೇಶ್ವರ ಶ್ರೀಗಳ ವ್ಯಕ್ತಿತ್ವಕ್ಕೆ ಇದ್ದ ಶಕ್ತಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

Advertisement

ಮಂಗಳವಾರ ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವದ ಸ್ವತ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ ವಿಷಯದ ಕುರಿತ 4ನೇ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಅವರು, ಸಿದ್ಧೇಶ್ವರ ಶ್ರೀಗಳ ಭಕ್ತರಾದ ನಿಮ್ಮ ಮನದಲ್ಲಿ ನೆಲೆಸಿರುವ ಸದಾ ನೆಲೆಸಿರುತ್ತಾರೆ. ಅವರು ನಮ್ಮನ್ನು ಅಗಲಿ ವರ್ಷವಾಯಿತು ಎಂಬುದು ತಿಳಿಯದಂತೆ ಸಮಯ ಸರಿದು ಹೋಗಿದೆ. ಇದನ್ನೇ ಶ್ರೀಗಳು ಸದಾ ಹೇಳುತ್ತಿದ್ದರು ಎಂದು ವಿಶ್ಲೇಷಿಸಿದರು.

ಶ್ರೀಗಳು ಐದು ನಿಮಿಷ ಮಾತನಾಡಿದರು ಸಾಕು ನಮ್ಮ ತಲೆಯಲ್ಲಿ ಹೊಸ ಚಿಂತನೆಗಳನ್ನು ಬಿತ್ತುತ್ತಿದ್ದರು. ಅವರೊಂದಿಗೆ ಇದ್ದಷ್ಟು ಸಮಯ ನಾನು ಬಹಳ ಆನಂದದಿಂದ ಹೆಮ್ಮೆಯಿಂದ ಕಳೆದಿದ್ದೇನೆ. ವಿಜಯಪುರದ ಜನರನ್ನು ಕಂಡರೆ ನನಗೆ ಸದಾ ಹೊಟ್ಟೆ ಉರಿ. ಏಕೆಂದರೆ ಸದಾ ನೀವು ಸಿದ್ಧೇಶ್ವರಶ್ರೀ ಎಂಬ ದೇವರೊಂದಿಗೆ ಇದ್ದದ್ದೇ ನಿಮ್ಮ ಪುಣ್ಯ ಎಂದು ಬಣ್ಣಿಸಿದರು.

ಅವರು ಎಂದಿಗೂ ನಮ್ಮೊಂದಿಗೆ ಇರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದ್ದರೂ ಸಮಯ, ಕಾಲವನ್ನು ಯಾರು ತಡೆಯಲು ಸಾಧ್ಯವಿಲ್ಲ. ಹೀಗಾಗಿ ನಾವು ಕೂಡ ಸಮಯದೊಂದಿಗೆ ಓಡಬೇಕಿದೆ. ನಮ್ಮಗೆ ದಕ್ಕಿದ ಅವಕಾಶ, ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವತ್ತಲೇ ನಾವು ಚಿತ್ತ ನೆಡಬೇಕು ಎಂದರು.

ನಮ್ಮ ಹತ್ತಿರ ಇದ್ದ ಅವಕಾಶ. ಸಮಯ ಎನ್ನುವುದು ರಾಮ, ಕೃಷ್ಣ ಯಾರೆಂದರೆ ಯಾರನ್ನೂ ಕಾಯಲಿಲ್ಲ ಸಮಯಕ್ಕೆ ಶ್ರೀಮಂತ, ಬಡವ ಎಂಬ ವ್ಯತ್ಯಾಸವಿಲ್ಲ. ಅದು ಯಾರಿಗೂ ಕಾಯದೇ ತನ್ನಪಾಡಿಗೆ ತಾನು ಚಲಿಸುತ್ತಲೇ ಇರುತ್ತದೆ. ಹೀಗಾಗಿ ಸಮಯ ಪಾಲನೆ ಅರಿತರು, ಸಮಯಕ್ಕೆ ಬೆಲೆ ಕೊಡುವವರು ಮಾತ್ರ ಕಾಲವೂ ಇರುತ್ತದೆ, ದೇವರೂ ಇರುತ್ತಾನೆ. ಈ
ಮೌಲಿಕ ಸಿದ್ಧಾಂತವನ್ನೇ ಶ್ರೀಗಳ ತಮ್ಮ ಜೀವಿತದುದ್ದಕ್ಕೂ ಪಾಲಿಸಿಕೊಂಡು ಬಂದದ್ದು ಎಂದು ವಿವರಿಸಿದರು.

Advertisement

ಮನುಷ್ಯ ಭೂಮಿಗೆ ಬಂದ ಉದ್ದೇಶವೇನು, ಇರುವಷ್ಟು ದಿನ ಹೇಗೆ ಬದುಕಬೇಕು, ಸಿಕ್ಕ ಸಮಯವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು. ಕೊನೆಗೆ ನಾವು ಹೋಗ ಬೇಕಾದದ್ದು ಎಲ್ಲಿಗೆ ಎಂಬುದನ್ನು ತಮ್ಮ ಅರ್ಥಪೂರ್ಣ ಜೀವಿತದಲ್ಲೇ ಮನವರಿಕೆ ಮಾಡಿಸಿದ್ದಾರೆ ಎಂದರು.

ವ್ಯಸನಮುಕ್ತ ಸಮಾಜ ನಿರ್ಮಿಸುವುದಕ್ಕಾಗಿ ಸದಾ ತರುಣರನ್ನು ಪ್ರೋತ್ಸಾಹಿಸುತ್ತಿದ್ದ ಶ್ರೀಗಳು, ಯುವಕರಲ್ಲಿ ಸಮಾಜ ಜವಾಬ್ದಾರಿಗಳ ಅರಿವು ಮೂಡಿಸುತ್ತಿದ್ದರು. ತಾವು ಪ್ರವಚನಕ್ಕೆ ಹೋದಲ್ಲೆಲ್ಲ ಯುವ ಚೈತನ್ಯವನ್ನು ಹುಟ್ಟುಹಾಕಿ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ದೈವಿ ಸ್ವರೂಪಿ ಪ್ರೇರಕಶಕ್ತಿಯಾಗಿರುತ್ತಿದ್ದರು ಎಂದು ಬಣ್ಣಿಸಿದರು.

ಯುವ ಸಮೂಹ ಗುಟುಕಾ, ಬಿಡಿ, ಸಿಗರೇಟ್‌, ಮದ್ಯ ಸೇವನೆ ದಾಸರಾಗದಂತೆ ತಮ್ಮ ಸಂದೇಶದಲ್ಲಿ ಸದಾ ಹೇಳುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಹಸುಳೆಗಳಿಗೂ ಸದಾ ಮೊಬೈಲ್‌ ಹುಚ್ಚು ಹಿಡಿದಿದೆ. ಇಂಥ ಮಕ್ಕಳಿಗೆ ತಾಯಿ ಅಪ್ಪುಗೆಯ ವಾತ್ಸಲ್ಯದ ಸುಖವೇ ದೊರೆಯದಂತಾಗುತ್ತದೆ. ಇದು ನಮ್ಮ ಸಮಾಜ ಸಮಾಜ ಸಾಗುತ್ತಿರುವ ಅಪಾಯಕರ ಸ್ಥಿತಿಯ ಕುರಿತು ಚಿಂತಿಸಬೇಕಿದೆ ಎಂದರು.

ಆಶೀರ್ವಚನ ನೀಡಿದ ನಿಡಸೋಸಿ ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಶ್ರೀಗಳು, ಸ್ವಚ್ಛ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸಿದ್ಧೇಶ್ವರ ಶ್ರೀಗಳು, ಜನರು ಕೂಡ ಸ್ವತ್ಛ ಪರಿಸರ , ಮನೆ-ಮನಸ್ಥಿತಿ ಸ್ವಚ್ಛತೆಯಿಂಧ ಕೂಡಿರಬೇಕು ಎಂದು ಬಯಸುತ್ತಿದ್ದರು ಎಂದರು.

ಯುವಜನರ ಮೇಲೆ ವಿಶೇಷ ವಿಶ್ವಾಸ, ಕಾಳಜಿ, ನಿರೀಕ್ಷೆ ಇರಿಸಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳು, ಯುವ ಸಮೂಹದ ಸಾಮಾಜಿಕ ಜವಾಬ್ದಾರಿಗಳ ಕುರಿತು ಸದಾ ಜಾಗೃತಿ ಮೂಡಿಸುತ್ತಿದ್ದರು. ಸಮಯ ಪಾಲನೆ, ಮಿತ ಮಾತುಗಾರಿಕೆಯಂಥ ಮೌಲಿಕ ತತ್ವಗಳನ್ನು ಪಾಲಿಸದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳು ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಭಕ್ತರು ಶ್ರೀಗಳು ಸದಾ ಬಯಸುತ್ತಿದ್ದ ಸ್ವ‌ಚ್ಛತೆ, ಸಮಯ ಪಾಲನೆ, ವ್ಯಸನಮುಕ್ತ ಸಮಾಜ, ಯುವಶಕ್ತಿಯ ಸದ್ಬಳಕೆಯಂಥ ವಿಷಯಗಳನ್ನೇ ಜೀವನದ ಆದರ್ಶವಾಗಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಬಸವರಾಜ ನಾಟಿಕಾರ ಪ್ರಾರ್ಥಿಸಿದರು. ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು. ಶರಣಾನಂದ ಶ್ರೀಗಳು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next