Advertisement
ಕಳೆದೊಂದು ದಶಕದಲ್ಲಿ ಸಾಮಾಜಿಕ ಪ್ಯಾಟರ್ನ್ಗಳಲ್ಲಿ(ಮಾದರಿಗಳು) ಮತ್ತು ಟ್ರೆಂಡ್‌ಗಳಲ್ಲಿ ಮಹತ್ತರ ಪಲ್ಲಟಗಳಾಗಿವೆ. ಗಮನಾರ್ಹ ಸಂಗತಿಯೆಂದರೆ ಮಕ್ಕಳು, ಯುವ ಜನರು ಮತ್ತು ಕುಟುಂಬಗಳ ಮೇಲೆ ಈ ಬದಲಾವಣೆಗಳು/ ಪಲ್ಲಟಗಳು ಬಹಳಷ್ಟು ಪರಿಣಾಮ ಬೀರಿವೆ. ಉದಾಹರಣೆಗೆ, ಕಳೆದೊಂದು ದಶಕದಲ್ಲಿ ಮಕ್ಕಳು ಮತ್ತು ಹರೆಯದವರು/ಯುವಕರಲ್ಲಿನ ಖನ್ನತೆಯ ಪ್ರಮಾಣ ದುಪ್ಪಟ್ಟಾಗಿರುವುದು.
ದುರಂತವೆಂದರೆ ಇಂದು ಮದ್ಯ ಮತ್ತು ಮಾದಕ ದ್ರವ್ಯಗಳು ಸುಲಭವಾಗಿ ಕೈಗೆಟಕುತ್ತಿರುವುದರಿಂದ ಹಾಗೂ ಸಹವಯಸ್ಕರ ನಡುವಿನ ಸಹಜ ಒತ್ತಡಗಳಿಂದಾಗಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಬೆಳೆಯುತ್ತಿರುವ ಹುಡು ಗಿಯರೂ ಅನೇಕಾನೇಕ ಮಾನಸಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ತೀರಾ ಅಸಹಜವೆನಿಸುವಂಥ, ತೆಳು ಮೈಕಟ್ಟಿನ ಮಾಡೆಲ್‌ಗಳ ಫೋಟೋಶಾಪ್ಡ್ ಚಿತ್ರಗಳು ಬೆಳೆಯುತ್ತಿರುವ ಹುಡುಗಿಯರಲ್ಲಿ ಅಸಾಧ್ಯವೆನಿಸುವಂಥ ಸ್ಟಾಂಡರ್ಡ್‌ಗಳನ್ನು ಸ್ಥಾಪಿಸಿಬಿಟ್ಟಿವೆ. ಇದರಿಂದಾಗಿ ತಮ್ಮ ದೇಹದ ಬಗ್ಗೆ ಕೀಳರಿಮೆ ಅನುಭವಿಸುವ, ಆಹಾರ ಸೇವನೆಯನ್ನು ಏರುಪೇರು ಮಾಡಿಕೊಳ್ಳುವ ಹುಡುಗಿಯರ ಪ್ರಮಾಣ ಹೆಚ್ಚುತ್ತಿದೆ. ಇದೆಲ್ಲದರ ಒಟ್ಟಾರೆ ಪರಿಣಾಮವೆಂಬಂತೆ ಕಚ್ಚಾ ಭಾವನಾತ್ಮಕ ನೋವನ್ನು ಹೇಗೆ ಎದುರಿಸಬೇಕೆಂದು ತಿಳಿಯದೇ ಕೈ ಕುಯ್ದುಕೊಳ್ಳುವುದು ಅಥವಾ ಓವರ್‌ಡೋಸ್ ಮಾಡಿಕೊಳ್ಳುವ ಪ್ರವೃತ್ತಿ ಯುವಜನರಲ್ಲಿ ಹೆಚ್ಚುತ್ತಿದೆ. ಈ ಸಹಸ್ರಮಾನದ ಆರಂಭದಿಂದಂತೂ ಅಂತರ್ಜಾಲದ ಸುಲಭ ನಿಲುಕು ಹಾಗೂ ಅದರ ಅಪಾಯಗಳು ಯುವ ಜನರಲ್ಲಿ ತಮ್ಮ ಸಹ ವಯಸ್ಕರೊಂದಿಗೆ (ನಿರ್ದಿಷ್ಟವಾಗಿ) ಮತ್ತು ಸಮಾಜದಲ್ಲಿ(ಒಟ್ಟಾರೆಯಾಗಿ) ಅಂಗೀಕಾರಕ್ಕೊಳ ಬೇಕಾದ ಒತ್ತಡವನ್ನು ಹೆಚ್ಚಿಸಿಬಿಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಪುಂಡಾಟಿಕೆ ಕಣ್ಣು ಕುಕ್ಕುವಷ್ಟು ಅಧಿಕವಾಗುತ್ತಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳ ಸಮಕಾಲೀನ ಟ್ರೆಂಡ್‌ಗಳಿಗೆ ತಕ್ಕಂತೆ ಹೆಜ್ಜೆ ಹಾಕಬೇಕೆಂಬ ಸಮಾನಸ್ಕಂದರ ಒತ್ತಡವೂ ಕೂಡ! ಕಾಮುಕರಿಂದ ಮಕ್ಕಳ ಪೀಡನೆ(ಅಂತರ್ಜಾಲದ ಮೂಲಕ ಅಥವಾ ಕುಟಂಬ/ಪರಿಚಯಸ್ಥ ವಲಯ ದೊಳಗಿಂದ), ವಯೋ ಸಹಜವಲ್ಲದ ಲೈಂಗಿಕ ಅರಿವು, ಆರಂಭಿಕ ಪ್ರಾಯೋಗಿಕ ಸಾಮರ್ಥ್ಯವೆಲ್ಲವೂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಬಲ್ಲವು. ಕೌಟುಂಬಿಕ ವ್ಯವಸ್ಥೆಯಲ್ಲಾಗಿರುವ ಬದಲಾವಣೆ, ವಿಚ್ಛೇದಿತ/ಏಕ-ಪೋಷಕ ಕುಟುಂಬಗಳ ಸಂಖ್ಯೆ ಇಂದು ಏರುಗತಿಯಲ್ಲಿದೆ. ಪರಿಚಿತ ಕೌಟುಂಬಿಕ ರಚನೆ ಮತ್ತು ಸಂವಹನಕ್ಕೆ ಹೊಂದಿಕೊಳ್ಳಲು ಮಗುವಿಗೆ ಸಮಯ ಬೇಕಾಗುತ್ತದೆ. ಹೀಗಾಗಿ, ಇದೇ ವೇಳೆಯಲ್ಲೇ ಪ್ರೌಢರ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಅವರ ಮನೆಯಲ್ಲಿನ ಮಕ್ಕಳಿಗೂ ಹಾನಿ ಉಂಟಾಗುತ್ತಿದೆ. ಮಾನಸಿಕ ಅಸ್ವಸ್ಥ ಪೋಷಕರಿದ್ದಾಗ ಮಕ್ಕಳು “ಚಿಕ್ಕ ಆರೈಕೆಗಾರರ’ ಪಾತ್ರ ವಹಿಸಿಕೊಳ್ಳಬೇಕಾಗುತ್ತದೆ.
Related Articles
Advertisement
ಮಕ್ಕಳು ಮತ್ತು ಹರೆಯದವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ. ಮಕ್ಕಳು ಮತ್ತು ಯುವ ಜನರು ಸುರಕ್ಷಿತವಾಗಿ ಇರಲು ಪೋಷಕರು, ಕುಟುಂಬ ಸದಸ್ಯರು, ಶಿಕ್ಷಕರು/ಶಾಲೆಗಳು ಪ್ರಮುಖ ಪಾತ್ರ ವಹಿಸಬೇಕಿದೆ.
ಇದೆಲ್ಲದರ ನಡುವೆಯೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪೋಷಣೆ ವಿಚಾರದಲ್ಲಿ ಪೋಷಕರು ಜಾಗೃತರಾಗಿರುವುದು, ಮಕ್ಕಳು ಮತ್ತು ಹರೆಯದವರು ಎದುರಿಸುವ ಸಹಜ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿರುವುದು ಹೃದಯಸ್ಪರ್ಶಿ ಸಂಗತಿಯಾಗಿದೆ. ಈ ಅಂಶಗಳನ್ನೆಲ್ಲ ಒಗ್ಗೂಡಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತದೆ.
– ಡಾ. ರಮ್ಯಾ ಮೋಹನ್