Advertisement

ಮೋದಿ ಸಾಧನೆಗೆ ಬೆರಗಾಗಿದೆ ಜಗತು

10:21 AM Aug 10, 2018 | Team Udayavani |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯ ಹಾಗೂ ಸಾಧನೆ ನೋಡಿ ಇಡೀ ಜಗತ್ತು ಬೆಕ್ಕಸಬೆರಗಾಗಿದೆ. ಅಲ್ಲದೇ ಭಾರತ ಪ್ರಪಂಚದಲ್ಲೇ ಈಗ 6ನೇ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿಯುವ ಅವಕಾಶವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಸ್ಥಳೀಯ ಸಂಸ್ಥೆಯ ಚುನಾವಣೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಗುರುವಾರದಿಂದ ಆರಂಭವಾದ ಬಿಜೆಪಿ ರಾಜ್ಯ ಪ್ರವಾಸದ ಭಾಗವಾಗಿ ಸಂಜೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ
ಬಿಜೆಪಿ ಶಕ್ತಿ ಕೇಂದ್ರ ಮೇಲ್ಪಟ್ಟ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಮುದ್ರಾ, ಆಯುಷ್ಮಾನದಂತಹ ಜನಪರ ಯೋಜನೆಗಳನ್ನು ದೇಶದ ಜನರಿಗಾಗಿ ಜಾರಿದೆ ತಂದಿದೆ. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಲ್ಲದೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ಸಂಸತ್ತಿನಲ್ಲಿ ಅನುಮೋದನೆ ದೊರಕುವಂತೆ ಮಾಡಿದೆ. ಇದರಿಂದ ಶೇ.27ರಷ್ಟು ಮೀಸಲಾತಿ ಸಿಗಲಿದ್ದು, ಹಿಂದುಳಿದ ವರ್ಗಗಳ ಜನರ ಜೀವನ ಸುಧಾರಣೆ ಆಗಲಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಬಹುಮತದ ಸರ್ಕಾರವಿದ್ದರೂ ಕೂಡ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿ ಮುಖಭಂಗ ಅನುಭವಿಸಿದೆ. ಇದು ಮೋದಿ ಸರ್ಕಾರದ ಬಗೆಗಿನ ವಿಶ್ವಾಸಕ್ಕೆ ಸಾಕ್ಷಿ. ಗುರುವಾರ ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಸೋತಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲೇಬೇಕು ಎಂದು ಹೇಳುವ ಮೂಲಕ ಬಿಎಸ್‌ವೈ, ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಪರೋಕ್ಷವಾಗಿ ಕರೆ ಕೊಟ್ಟರು. ಒಂದೊಂದು ಚುನಾವಣೆ ಸಹ ಮಹತ್ವದ್ದಾಗಿದೆ. ಅನೇಕ
ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಬೇಕು. ಮಹಿಳೆ, ಹಿಂದುಳಿದ ಮೋರ್ಚಾಗಳನ್ನು ಬಲಪಡಿಸಬೇಕು. ಸ್ಥಳೀಯ
ಸಂಸ್ಥೆಗಳ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಯಾ ಕ್ಷೇತ್ರಗಳ ನಾಯಕರು ವಿಶೇಷ ಗಮನ ಹರಿಸಬೇಕು. ಇದು ಮುಂಬರುವ ಲೋಕಸಭೆ ಚುನಾವಣೆಗೆ ಶಕ್ತಿಯಾಗಲಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ 6-7 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸ್ವಲ್ಪ ಮತಗಳ ಅಂತರದಲ್ಲಿ ಸೋಲಾಗಿದೆ. ಇಲ್ಲದೇ ಹೋದರೆ ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವನ್ನು ನೀವೇ ಊಹಿಸಿಕೊಳ್ಳಿ ಎಂದ ಅವರು, ಯಾವುದೇ ಕ್ಷಣದಲ್ಲಿ ರಾಜ್ಯ ಸರ್ಕಾರ ಕಚ್ಚಾಟದಿಂದಲೇ ಬಿದ್ದು ಹೋಗುತ್ತಿದೆ ಎಂದು ಭವಿಷ್ಯ ನುಡಿದರು.

Advertisement

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಸರ್ಕಾರ ಕೆಡವಲು ನಾವು ಕೈ ಹಾಕಿದರೆ ರಾಜ್ಯ ಸರ್ಕಾರ ನಾಳೆಯೇ ಬಿದ್ದು ಹೋಗುತ್ತದೆ. ಆದರೆ, ನಾವು ಅಂತಹ ಕೆಲಸ ಮಾಡಲ್ಲ. ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ತೃಪ್ತಿ ಇಲ್ಲ.
ತಾನಾಗಿಯೇ ಈ ಸರ್ಕಾರ ಯಾವುದೇ ಕ್ಷಣದಲ್ಲೂ ಬಿದ್ದು ಹೋಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ನವರು 38 ಶಾಸಕರಿದ್ದ ಜೆಡಿಎಸ್‌ನವರ ಕಾಲಿಗೆ ಬಿದ್ದು ಸರ್ಕಾರ ರಚಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಗಿದೆ. ಬಿಜೆಪಿ ಕಾರ್ಯಕರ್ತರು ಒಂದೇ ಕುಟುಂಬದಂತೆ ಇದ್ದು ಎಲ್ಲ ಪುರಸಭೆ, ನಗರಸಭೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಗುತ್ತೇದಾರ ಕರೆ ನೀಡಿದರು.

ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಬಿಎಸ್‌ವೈ ಸರ್ಕಾರವಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ನಿರಾಶರಾಗಬಾರದು. ಪ್ರತಿಪಕ್ಷದ ನಾಯಕರಾಗಿ ಸರ್ಕಾರ ಮೇಲೆ ಒತ್ತಡ ಹೇರುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಹಿಂದೆ ಅಧಿಕಾರಿದಲ್ಲಿದ್ದಾಗ ಯಡಿಯೂರಪ್ಪ ಅವರು ಉತ್ತರ
ಕರ್ನಾಟಕ ಸೇರಿದಂತೆ ಇಡೀ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಸಂಸದ ಭಗವಂತ ಖೂಬಾ, ಶಾಸಕರಾದ ದತ್ತಾತ್ರೇಯ ಪಾಟàಲ ರೇವೂರ, ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ, ಕೆ.ಬಿ. ಶಾಣಪ್ಪ, ಬಿಜೆಪಿ ನಗರಾಧ್ಯಕ್ಷ ಹಾಗೂ ಶಾಸಕ ಬಿ.ಜಿ. ಪಾಟೀಲ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ, ಶಶೀಲ ನಮೋಶಿ, ಅಮರನಾಥ ಪಾಟೀಲ, ವಾಲ್ಮೀಕಿ ನಾಯಕ, ರವಿ ಬಿರಾದಾರ ಇದ್ದರು. ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ
ನರಿಬೋಳ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next