Advertisement
ಮಾನವನ ವಿಕಾಸದ ಹಾದಿಯನ್ನು ಅವಲೋಕಿಸಿ ದರೆ, ಕಾಲಕಾಲಕ್ಕೆ ಮಹಾಪುರುಷರು ಆಗಿಹೋಗಿ ದ್ದಾರೆ. ಕೆಲವರ ಚಿಂತನೆಗಳು ಬೆಳೆದು ಧರ್ಮಗಳಾಗಿವೆ. ಒಟ್ಟು ಸೇರಿ ಬದುಕಬೇಕೆಂಬ ಆಶಯದ ಮಹಾತ್ಮರ ವಾಣಿಗಳು ತಲೆಮಾರುಗಳ ಬಳಿಕ ಮಾದಕವಾಗಿ ಸಮಾಜಕ್ಕೆ ಮಾರಕಗಳಾಗುತ್ತಿರುವುದನ್ನು ಇಂದಿನ ಜನಾಂಗದ ಗ್ರಹಿಕೆಯ ಕೊರತೆಗಳೆನ್ನಬೇಕೇ? ಮತದ ಹೆಸರಿನಲ್ಲಿ ಯುದ್ಧಗಳು, ಜಾಗತಿಕ ಕ್ಷೋಭೆ, ಭಯೋ ತ್ಪಾದನೆ ಸಾಮಾನ್ಯವಾಗುತ್ತಿದ್ದು, ಜಾಗತಿಕ ಅಶಾಂತಿಗೆ ಹೇತುಗಳಾಗಿವೆ. ಈ ಸಂದರ್ಭದಲ್ಲಿ “ವಿಶ್ವ ಮಾನವ ಸಂದೇಶ’ ಪ್ರಸ್ತುತವೆನಿಸುತ್ತದೆ.
Related Articles
Advertisement
ಮನುಷ್ಯರೊಳಗೆ ಬೆಳೆಯಬೇಕಾದ ತಿಳಿವಳಿಕೆ, ಹೊಂದಾಣಿಕೆ. ಪೂರ್ಣದೃಷ್ಟಿ ಎಂದರೆ ಮಿತ-ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ, ಪಾರಮಾರ್ಥಿಕ ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ವಿಶಾಲ ದೃಷ್ಟಿ. ಆದರ್ಶ ಸಮಾಜವೆಂದರೆ ಸಮಾನತೆಯ ಮೇಲೆ ನಿಂತ ಸಮಾಜ ಎಂದು ಸರಳವಾಗಿ ಅರ್ಥೈಸಬಹುದು. ಇದೇ ಮೂಲ ಸಂದೇಶವನ್ನು ಪಂಪನ “ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕಾವ್ಯದ ಮಾತು ಸಾರುತ್ತದೆ. ಇದು ಸಾಧ್ಯವಾಗಬೇಕಾದರೆ ಇಂದಿನ ಮತ, ಉಪಮತಗಳ ಸೀಳು ಕೊನೆಗೊಳ್ಳಬೇಕು.
ಉತ್ತಮ ವಿದ್ಯಾಭ್ಯಾಸ ಪ್ರತಿಯೊಬ್ಬನಿಗೆ ತನ್ನ ದೇವರನ್ನು ಕಂಡುಕೊಳ್ಳಲು ಸಹಾಯ ಮಾಡಬೇಕು. ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಾಗ ಪ್ರತಿಯೊಬ್ಬರೂ ತಮ್ಮ ದೇವರನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಮತಗಳಾಗಲು ಸಾಧ್ಯ! ಮತವೆನ್ನುವುದು ಪ್ರತಿಯೊಬ್ಬನ ಖಾಸಗಿ ಆವಿಷ್ಕಾರ. ಇಂತಹ ವಿಶ್ವಮಾನವ ದರ್ಶನದಲ್ಲಿ ಮತ ಪ್ರಾಬಲ್ಯವನ್ನು ಸಾಧಿಸಲು ಪೈಪೋಟಿ ಇಲ್ಲ. ಹುಟ್ಟಿದ ಪ್ರತೀ ಮಗುವನ್ನು ವಿಶ್ವ ಮಾನವನನ್ನಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯೂ ತುರ್ತೂ ಆಗಿದೆ. ಇಂದು ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಉತ್ತರವನ್ನು ಇದು ತನ್ನ ಬಸಿರಲ್ಲಿ ಹೊತ್ತಿದೆ.
ಪ್ರತಿಯೊಬ್ಬರಲ್ಲೂ ದೇವರಿದ್ದಾನೆವಿಶ್ವ ಮಾನವ ಸಂದೇಶದ ಮೂಲ ಬೀಜವನ್ನು ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಕಾಣಬಹುದು. ಸ್ವಾಮಿ ವಿವೇಕಾನಂದರು ತಮ್ಮ ಶಿಕಾಗೋ ಭಾಷಣದಲ್ಲಿ ಮಾನವ ಸಮಾನತೆಯನ್ನೂ ವ್ಯಕ್ತಿ ಸ್ವಾತಂತ್ರ್ಯವನ್ನೂ ಪ್ರತಿಪಾದಿಸಿದರು. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಆದ್ದರಿಂದ ಪ್ರತಿಯೊಬ್ಬರಿಗೂ ತಾನು ಕಂಡುಕೊಂಡ ದೇವರನ್ನು ಪೂಜಿಸುವ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಅವರು ವರ್ಣ ಮತ್ತು ಜಾತಿವಾದವನ್ನು ವಿರೋಧಿಸಿ, ಸಮಾನತೆಯನ್ನು ಪ್ರತಿಪಾದಿಸಿದರು. ಅವರು ರಾಮಕೃಷ್ಣ ಮಿಶನ್ ಸ್ಥಾಪಿಸಿ ತನ್ನ ಗುರುಗಳ ಚಿಂತನೆಗಳನ್ನೂ ತನ್ನ ದೃಷ್ಟಿಕೋನದಲ್ಲಿ ವಿಶ್ವಾದ್ಯಂತ ಪ್ರತಿಪಾದಿಸುತ್ತಾ ಬಂದರು. ರಾಮಕೃಷ್ಣ ಪರಮಹಂಸರ ಭಕ್ತರಾದ ಕುವೆಂಪು ಅವರು ಈ ಮೂಲ ಸಾರದ ಆಧಾರದ ಮೇಲೆ ವಿಶ್ವ ಮಾನವ ಸಂದೇಶವನ್ನು ತಮ್ಮ ಸಾಹಿತ್ಯದಲ್ಲೂ ಚಿಂತನೆಗಳಲ್ಲೂ ಪ್ರತಿಪಾದಿಸಿದರು. ಅವರ ಈ ಚಿಂತನೆಗಳು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ. – ಡಾ| ಕೊಳ್ಚಪ್ಪೆ ಗೋವಿಂದ ಭಟ್, ತಿಲಕ್ ನಗರ