Advertisement

ವಿಶ್ವ ವಿಖ್ಯಾತಿ ನಗರಕ್ಕೆ ಬೇಕಿದೆ  ಸುಗಮ ಸಂಚಾರಿ ಮಾರ್ಗ

08:55 PM Aug 29, 2021 | Team Udayavani |

ಉಡುಪಿ, ಮಣಿಪಾಲ ಶೈಕ್ಷಣಿಕ, ಆರೋಗ್ಯ, ಪ್ರವಾಸೋದ್ಯಮ ದಡಿಯಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಸ್ಮಾರ್ಟ್‌ ಸಿಟಿ ಅನುಷ್ಠಾನಗೊಳಿಸುವ ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿಯೂ ನಗರದ ಕೆಲವೆಡೆ ಸುಸ್ಥಿತಿಯ ರಸ್ತೆಗಳು ಕಾಣ ಸಿಗುವುದು ವಿರಳ ಎನ್ನುವಂತಾಗಿದೆ.

Advertisement

ತೀರ್ಥಹಳ್ಳಿಯಿಂದ ಮಣಿಪಾಲವನ್ನು ಸಂಪರ್ಕಿಸುವ ರಾ.ಹೆ. 169(ಎ) ಪರ್ಕಳ ಮಾರ್ಗದ ಸುಮಾರು 900 ಮೀ. ರಸ್ತೆ ಹೊಂಡಗುಂಡಿಗಳಿಂದ ಆವೃತ್ತಗೊಂಡಿದೆ. ಡಾಮರು ಮಾಯವಾಗಿ ಕೆಂಪು ಮಣ್ಣಿನ ರಸ್ತೆ ಕಾಣ ಸಿಗುತ್ತಿದೆ. ಪರ್ಕಳ ಪೇಟೆಯ ಸರ್ಕಲ್‌ ಬಳಿಕ ಮೂರು ಕಡೆಗಳಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಯಾರು ಎತ್ತಕಡೆ ತಿರುಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ದ್ವಿಚಕ್ರ, ಕಾರು, ರಿಕ್ಷಾಗಳ ಚಾಲಕರು ಆತಂಕದಿಂದಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ.

ಅಂಬಾಗಿಲು-ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲವನ್ನು ಸಂಪರ್ಕಿಸುವ ಮಾರ್ಗದಲ್ಲಿ ಹೊಸ ರಸ್ತೆ ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದಿದೆ. ಪ್ರಸ್ತುತ ಅಂಬಾಗಿಲು ಮಾರ್ಗವಾಗಿ ರೈಲ್ವೇ ಬ್ರಿಡ್ಜ್ ಸಂಪರ್ಕಿಸುವ ಮಾರ್ಗದ ಸಂತೋಷನಗರ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ವಾಹನ ಸವಾರರಿಗೆ ಮಳೆಗಾಲದಲ್ಲಿ ನೀರು ತುಂಬಿದ ರಸ್ತೆಯಲ್ಲಿ ಎಲ್ಲಿ ಹೊಂಡಗಳಿವೆ ಎನ್ನುವುದು ತಿಳಿಯದೆ ದ್ವಿಚಕ್ರ ವಾಹನ ಚಲಾಯಿಸಿ ಕೈಕಾಲು ಮುರಿದು ಕೊಂಡಿರುವ ಘಟನೆ ಸಂಭವಿಸಿವೆ.

ಮಲ್ಪೆ ಬಂದರು, ಕುಂದಾಪುರ ಮಾರ್ಗವಾಗಿ ಮಂಗಳೂರು ಹಾಗೂ ಉಡುಪಿ ಮಾರ್ಗವಾಗಿ ಕುಂದಾಪುರ ಸಂಪರ್ಕಿಸುವ ರಾ.ಹೆ. 66ರ ಕರಾವಳಿ ಬೈಪಾಸ್‌ನಲ್ಲಿ ಪ್ರತೀ ಮಳೆಗಾಲದಲ್ಲಿ ಅಲ್ಲಲ್ಲಿ ಭಾರೀ ಗಾತ್ರ ಹೊಂಡಗಳು ನಿರ್ಮಾಣವಾಗುತ್ತಿವೆ. ಗುಂಡಿಗಳನ್ನು ತಪ್ಪಿಸಲು ಹೋಗಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ರಸ್ತೆ ಅವ್ಯವಸ್ಥೆಯಿಂದಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಟ್ರಾಫಿಕ್‌ ಏರ್ಪಡುತ್ತಿದ್ದು, ಸಂಚಾರಿ ಪೊಲೀಸರಿಗೂ ಇಲ್ಲಿ ಸಂಚಾರ ವ್ಯವಸ್ಥೆ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಕರಾವಳಿ ಬೈಪಾಸ್‌ ರಾ.ಹೆ. ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಸಭೆಗಳಲ್ಲಿ ಜನಪ್ರತಿನಿಧಿಗಳು ಮನವಿ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಸ್ಪಂದನೆ ಮಾತ್ರ ಸಿಕ್ಕಿಲ್ಲ.

ಪರ್ಕಳ ರಾ.ಹೆ. 169(ಎ) ಮಾರ್ಗದಲ್ಲಿ ರಸ್ತೆ ನಿರ್ಮಿಸುವಂತೆ ಸ್ಥಳೀಯರು ವರ್ಷಗಳಿಂದ ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಹಾಗೂ ಸರಕಾರವನ್ನು ಹಲವಾರು ಸಮಯಗಳಿಂದ ಆಗ್ರ ಹಿಸುತ್ತಲೇ ಬಂದಿದ್ದಾರೆ. 2021ರ ಮಾರ್ಚ್‌ ಅಂತ್ಯದಲ್ಲಿ ಹೆದ್ದಾರಿ ಇಲಾಖೆ ಭೂಸ್ವಾಧೀನಕ್ಕೆ ಮುಂದಾಗಿರುವ ಸಂದರ್ಭ ಸ್ಥಳೀಯ ಭೂ ಸಂತ್ರಸ್ತರು ಕೋರ್ಟ್‌ ಮೊರೆ ಹೋಗಿದ್ದು, ಈ ವೇಳೆ ಕೋರ್ಟ್‌ನಲ್ಲಿ ಮುಂದಿನ ಆದೇಶ ಬರುವವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಇಲಾಖೆ ಆದೇಶಿಸಿದೆ. ಇದರಿಂದಾಗಿ ರಸ್ತೆಯ ವಿಸ್ತರಣೆ ಹಾಗೂ ಭೂ ಸ್ವಾಧೀನ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.

Advertisement

ನಗರದ ಮೂಲಕ ಹಾದು ಹೋಗುವ ರಾ.ಹೆ. ರಸ್ತೆಗಳನ್ನು ದುರಸ್ತಿಗೊಳಿಸಬೇಕಾಗಿದೆ. ಜತೆಗೆ ನಗರದಿಂದ ಬೇರೆ ಬೇರೆ ಪ್ರದೇಶಗಳನ್ನು ಸಂಪರ್ಕಿಸುವ ನಗರಸಭೆ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.

  -ಸಂ.

Advertisement

Udayavani is now on Telegram. Click here to join our channel and stay updated with the latest news.

Next