ಮೈಸೂರು: ಶಾಸನ ಸಭೆಗಳಲ್ಲಿ ಸದಸ್ಯರು ಯಾವ ರೀತಿ ನಡೆದುಕೊಳ್ಳಬೇಕು. ಚರ್ಚೆಗಳಲ್ಲಿ ಯಾವ ರೀತಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯರಿಗಾಗಿ ಶುಕ್ರವಾರದಿಂದ ಎರಡು ದಿನ ಕಾರ್ಯಾಗಾರ ಆಯೋಜಿಸಲಾಗಿತ್ತು. ಆಹ್ವಾನಿತ 25 ಸದಸ್ಯರ ಪೈಕಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು 7 ಜನ ಸದಸ್ಯರು ಮಾತ್ರ.
ಮೇಲ್ಮನೆ ಸದಸ್ಯರಿಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪರಿಚಯವಾಗಬೇಕು. ಸದನದಲ್ಲಿ ಯಾವ ರೀತಿ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು. ಸ್ವಲ್ಪ ಸಮಯದಲ್ಲಿ ಯಾವ ರೀತಿ ವಿಷಯ ಮಂಡಿಸಬೇಕೆಂಬ ಬಗ್ಗೆ ತಿಳಿಸಿಕೊಡಲು ಈ ಕಾರ್ಯಾಗಾರ ಆಯೋಜಿಸಲು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನಿರ್ಧರಿಸಲಾಗಿತ್ತು. ಈ ಕಾರ್ಯಾಗಾರ ಆಯೋಜಿಸುವಂತೆ ಮೇಲ್ಮನೆ ಸದಸ್ಯರೇ ಮನವಿ ಮಾಡಿದ್ದುಂಟು.
ಈ ಹಿನ್ನೆಲೆಯಲ್ಲಿ 25 ಜನರ ಗುಂಪುಗಳನ್ನಾಗಿ ಮಾಡಿ 3 ಹಂತಗಳಲ್ಲಿ ಕಾರ್ಯಾಗಾರ ಆಯೋಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿತ್ತು. ಹೀಗಾಗಿ ಮೈಸೂರಲ್ಲಿ ಮೊದಲ ಹಂತದಲ್ಲಿ 2 ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮೊದಲ ಹಂತದ ಕಾರ್ಯಾಗಾರದಲ್ಲಿ 25 ಸದಸ್ಯರಿಗೆ ಆಹ್ವಾನ ನೀಡಲಾಗಿತ್ತು. ಈ ಪೈಕಿ ಪರಿಷತ್ ಸಭಾಪತಿ ಸೇರಿ ಏಳು ಸದಸ್ಯರು ಪಾಲ್ಗೊಂಡಿದ್ದರು. ಸಭಾಪತಿಗಳನ್ನು ಹೊರತುಪಡಿಸಿದರೆ, ಆರ್.ಧರ್ಮಸೇನ, ಮಹಾಂತೇಶ ಕವಟಗಿಮಠ, ಕೋಟಾ ಶ್ರೀನಿವಾಸಪೂಜಾರಿ, ಕೆ.ಪ್ರತಾಪಚಂದ್ರ ಶೆಟ್ಟಿ, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರು ಮಾತ್ರ ಪಾಲ್ಗೊಂಡಿದ್ದರು.
ಕಾರ್ಯಾಗಾರಕ್ಕೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ.ಪಾಟೀಲ, ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ, ನಿರ್ದೇಶಕ ಪ್ರಾಣೇಶರಾವ್ ಸೇರಿ ಹಲವರು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಕೇವಲ ಏಳು ಸದಸ್ಯರು ಪಾಲ್ಗೊಂಡಿದ್ದಾರೆ. ಆದರೆ ಇದು ಮೊದಲ ಹಂತದ ಕಾರ್ಯಾಗಾರವಾಗಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಿದ್ದಾರೆ. 2 ಮತ್ತು 3ನೇ ಹಂತಗಳ ಕಾರ್ಯಾಗಾರದಲ್ಲಿ ಉಳಿದ ಸದಸ್ಯರು ಭಾಗಿಯಾಗುತ್ತಾರೆ.
– ಎಚ್.ಕೆ.ಪಾಟೀಲ, ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ