ಬೆಂಗಳೂರು: ಕೆಲಸ ನೀಡಿದ್ದ ಮಾಲೀಕರ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಕೆಲಸದಾಕೆಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಶನ್ ನಿವಾಸಿ ಶಾಂತಿ (43) ಬಂಧಿತೆ. ಆಕೆಯಿಂದ 30 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಜ.17ರಂದು ದೂರುದಾರ ಕೀರ್ತಿವರ್ಧನ್ ಪೋಷಕರು ವಿದೇಶ ಪ್ರವಾಸಕ್ಕೆ ಹೋಗಿದ್ದರು. ಮನೆಯಲ್ಲಿ ದೂರುದಾರ, ಆತನ ಸಹೋದರ ಹಾಗೂ ಮನೆಕೆಲಸದಾಕೆ ಶಾಂತಿ, ಆಕೆಯ ಮಕ್ಕಳು ಮಾತ್ರ ಇದ್ದರು.
ಜ.25ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಆರೋಪಿ ಶಾಂತಿ, ಮನೆಯ ಸಿಸಿ ಕ್ಯಾಮೆರಾದ ಕೇಬಲ್ ಕತ್ತರಿಸಿದ್ದಾಳೆ. ಬಳಿಕ ಮನೆ ಮಾಲೀಕರ ಬೆಡ್‌ರೂಮ್‌ನ ಲಾಕರ್ ಅನ್ನು ಸುತ್ತಿಗೆ, ಸೂðಡ್ರೈವರ್ ಹಾಗೂ ಇತರೆ ವಸ್ತುಗಳಿಂದ ಹೊಡೆದು, ಬಳಿಕ ಸುಟ್ಟು ತೆರೆದು, ಅದರಲ್ಲಿದ್ದ 80 ಸಾವಿರ ರೂ. ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಳು.
ಬಳಿಕ ಕೀರ್ತಿವರ್ಧನ ಹಾಗೂ ಆತನ ಸಹೋದರರನ್ನು ಎಚ್ಚರಗೊಳಿಸಿ ಯಾರು ಕಳ್ಳರು, ಮನೆಗೆ ನುಗ್ಗಿ ಕಳ್ಳತನ ಮಾಡಿ, ತನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ನಂಬಿಸಿದ್ದಳು. ಈ ಸಂಬಂಧ ಕೀರ್ತಿವರ್ಧನ್ ದೂರು ನೀಡಿದ್ದರು. ಬಳಿಕ ಅನುಮಾನದ ಮೇರೆಗೆ ಶಾಂತಿಯನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.